More

    ಹುತಾತ್ಮ ಯೋಧನ ಕುಟುಂಬಕ್ಕಿಲ್ಲ ನೆರವು, ಪತ್ನಿ ಅಳಲು

    ಕಲಬುರಗಿ: ಉಗ್ರರೊಂದಿಗೆ ಗುಂಡಿನ ಚಕಮಕಿ ವೇಳೆ ಹುತಾತ್ಮರಾದ ಆಳಂದ ತಾಲೂಕಿನ ಚಿಂಚನಸೂರ ಗ್ರಾಮದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ರಾಜಕುಮಾರ ಮಾವಿನ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಇದುವರೆಗೆ ಯಾವುದೇ ನೆರವು ಬಂದಿಲ್ಲ ಎಂದು ಯೋಧನ ಪತ್ನಿ ಚಂದ್ರಕಲಾ ಮಾವಿನ ಜಿಲ್ಲಾಧಿಕಾರಿ ಎದುರು ಅಳಲು ತೋಡಿಕೊಂಡಿದ್ದಾರೆ.

    ಗಡಿ ಭದ್ರತಾ ಪಡೆ, ಕೇಂದ್ರ ಸರ್ಕಾರದಿಂದ ಹುತಾತ್ಮ ಯೋಧರಿಗೆ ಬರಬೇಕಾದ ಸೌಲಭ್ಯ ಸಿಕ್ಕಿದೆ. ಆದರೆ ರಾಜ್ಯ ಸರ್ಕಾರ ನೀಡಬೇಕಾದ ಸರ್ಕಾರಿ ನಿವೇಶನ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಸೇರಿ ಯಾವುದೇ ನೆರವು ನೀಡಿಲ್ಲ ಎನ್ನುತ್ತಾರೆ ಚಂದ್ರಕಲಾ.

    ಬಿಎಸ್‌ಎಫ್‌ನಲ್ಲಿ ೧೯ ವರ್ಷ ಸೇವೆ ಸಲ್ಲಿಸಿ ನಿವೃತ್ತಿಗೆ ಒಂದು ವರ್ಷ ಮೊದಲೇ ಆಗಸ್ಟ್ನಲ್ಲಿ ಮೃತಪಟ್ಟಿದ್ದು, ಪತ್ನಿ, ಇಬ್ಬರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ. ಮಹಾನಗರ ಪಾಲಿಕೆಯಲ್ಲಿ ಸ್ಟೆನೋ ಆಗಿರುವ ಚಂದ್ರಕಲಾ (ಕೆಪಿಎಸ್‌ಸಿಯಿಂದ ನೇಮಕ, ಅನುಕಂಪದ್ದಲ್ಲ) ಮೇಲೆ ಕುಟುಂಬ ಅವಲಂಬಿಸಿದೆ.

    ದೇಶಕ್ಕಾಗಿ ಹೋರಾಡಿ ಮಡಿದ ಯೋಧನ ಕುಟುಂಬಕ್ಕೆ ನೆರವು ನೀಡುವಲ್ಲಿ ಹಲವು ಕಾರಣಗಳನ್ನು ಹೇಳುತ್ತ ದಿನದೂಡುತ್ತಿದ್ದು, ಅಧಿಕಾರಿಗಳು ಎಲ್ಲ ಹಂತದ ಪ್ರಕ್ರಿಯೆಗಳಿಗೆ ವೇಗ ನೀಡಿ ಎಲ್ಲ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂಬುದು ಚಂದ್ರಕಲಾ ಮಾವಿನ ಆಗ್ರಹ.

    ಪೆನ್ಶನ್ ಪೇ ಆರ್ಡರ್ ಬಂದಿಲ್ಲ
    ಯುದ್ಧದಲ್ಲಿ ಮೃತಪಟ್ಟ ಯೋಧರಿಗೆ ರಾಜ್ಯ ಸರ್ಕಾರದಿಂದ ನಿವೇಶನ, ಅವಲಂಬನೆ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಜಮೀನು ನೀಡಬೇಕು. ಅನುಗ್ರಹ ಪೂರಕ ಅನುದಾನ ೫ ಲಕ್ಷ ರೂ., ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ೨೫ ಲಕ್ಷ ರೂ. ನೀಡಬೇಕು ಎನ್ನುತ್ತಾರೆ ಸೈನಿಕ ಕಲ್ಯಾಣ ಇಲಾಖೆ ಅಧಿಕಾರಿಗಳು. ರಾಜ್ಯ ಸರ್ಕಾರದ ಯಾವುದೇ ಸೌಲಭ್ಯ ಸಿಗಬೇಕಾದರೂ ಗಡಿ ಭದ್ರತಾ ಪಡೆಯಿಂದ ಪೆನ್ಶನ್ ಪೇ ಆರ್ಡರ್ ವರದಿ ಬರಬೇಕು. ಈ ಕುರಿತು ಮೇಲಧಿಕಾರಿಗಳಿಗೆ ವರದಿ ನೀಡಿದ್ದು, ಬಿಎಸ್‌ಎಫ್‌ನಿಂದ ಆದೇಶ ಬಂದ ನಂತರ ಎಲ್ಲ ಸೌಲಭ್ಯ ಸಿಗಲಿವೆ ಎನ್ನುತ್ತಾರೆ ಸೈನಿಕ ಕಲ್ಯಾಣ ಇಲಾಖೆ ಅಧಿಕಾರಿಗಳು.

    ಪತಿ ಹುತಾತ್ಮರಾಗಿ ಆರು ತಿಂಗಳಾಯಿತು. ರಾಜ್ಯ ಸರ್ಕಾರದಿಂದ ಬರಬೇಕಾಗಿದ್ದ ನಿವೇಶನ, ಜಮೀನು, ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ನೆರವು ಬಂದಿಲ್ಲ. ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಆದಷ್ಟು ಬೇಗ ನೆರವು ಒದಗಿಸಬೇಕು.
    | ಚಂದ್ರಕಲಾ ಮಾವಿನ
    ಹುತಾತ್ಮ ಯೋಧನ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts