More

    ಹುತಾತ್ಮ ಯೋಧನ ಸ್ಮರಣೆಗೆ ಸ್ಮಾರಕ

    ಹುಬ್ಬಳ್ಳಿ: ಹುತಾತ್ಮ ವೀರಯೋಧನ ನೆನಪು ಅಮರಗೊಳಿಸಿ ಯುವ ಪೀಳಿಗೆಗೆ ಸ್ಪೂರ್ತಿ ತುಂಬುವ ದಿಸೆಯಲ್ಲಿ ಆತನ ಸ್ಮಾರಕ ನಿರ್ವಿುಸುವ ಮೂಲಕ ತಾಲೂಕಿನ ಕೋಳಿವಾಡ ಗ್ರಾಮಸ್ಥರು ಅಪ್ರತಿಮ ದೇಶಪ್ರೇಮ ಮೆರೆದಿದ್ದಾರೆ.

    ‘ಅಮರ ಜವಾನ’ ಎಂಬ ಸ್ಮಾರಕ ನಿರ್ವಿುಸಿ, ವೀರಯೋಧನ ಮೂರು ಅಡಿ ಪುತ್ಥಳಿ ಸ್ಥಾಪಿಸಿ ಇದೀಗ ಲೋಕಾರ್ಪಣೆಗೊಳಿಸಲು ಸಜ್ಜುಗೊಳಿಸಿದ್ದಾರೆ. 2003ರಲ್ಲಿ ಕಾಶ್ಮೀರದ ಕಾರ್ಗಿಲ್ ಕಣಿವೆಯಲ್ಲಿ ಕರ್ತವ್ಯದಲ್ಲಿದ್ದಾಗ ಉಂಟಾದ ಹಿಮಪಾತದಲ್ಲಿ ವೀರ ಮರಣವನ್ನಪ್ಪಿದ್ದ ಕರವೀರಪ್ಪ ವೀರಪ್ಪ ಕಮತರ ಅವರ ಸ್ಮಾರಕ ಇದಾಗಿದೆ.

    ಮಹಾಕವಿ ಕುಮಾರವ್ಯಾಸರ ಪಾವನ ಜನ್ಮಭೂಮಿ ಕೋಳಿವಾಡದಲ್ಲಿ ಶಂಕ್ರವ್ವ ಹಾಗೂ ವೀರಪ್ಪ ಕಮತರ ಅವರ ಜೇಷ್ಠ ಪುತ್ರನಾಗಿ ಜನಿಸಿದ ಕರವೀರಪ್ಪ 2000ನೇ ಇಸ್ವಿಯಲ್ಲಿ ಬೆಳಗಾವಿಯಲ್ಲಿ ಸೇನೆಗೆ ಭರ್ತಿಯಾಗಿದ್ದ. ಹೈದರಾಬಾದ್​ನಲ್ಲಿ ತರಬೇತಿ ಪಡೆದು 2001ರಲ್ಲಿ ಸೇವೆಗೆ ಅಣಿಯಾಗಿದ್ದ. 2003ರಲ್ಲಿ ಕಾರ್ಗಿಲ್ ದ್ರಾಸ್ ವಲಯದಲ್ಲಿ (ಸಮುದ್ರ ಮಟ್ಟದಿಂದ 11 ಸಾವಿರ ಅಡಿ ಎತ್ತರ) ಉಂಟಾದ ಹಿಮಪಾತದಲ್ಲಿ ಕರವೀರಪ್ಪ ವೀರಮರಣ ಹೊಂದಿದ್ದರು.

    ಅಂದು ಸ್ಮಾರಕ ನಿರ್ವಣದ ಚಿಂತನೆ ಮಾಡಲಾಗಿತ್ತಾದರೂ ದಶಕ ಕಳೆದರೂ ಅದು ಕೈಗೂಡಿರಲಿಲ್ಲ. ಕೊನೆಗೆ ಕರವೀರಪ್ಪ ಕಮತರ ಸ್ಮಾರಕ ಸಮಿತಿ ಮಾಡಿಕೊಂಡ ಊರಿನ ಯುವಕರು ಇದೀಗ ಆಶಯ ಈಡೇರಿಸಿಕೊಂಡಿದ್ದಾರೆ.

    ಗ್ರಾಮದ ಗುರು ಹಿರಿಯರು, ಭಜನಾ ಮಂಡಳ, ಯುವಕ ಮಂಡಳ, ಮಹಿಳಾ ಮಂಡಳ ಹಾಗೂ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಸ್ಮಾರಕ ತಲೆ ಎತ್ತಿದ್ದು, ಮಾ. 1ರಂದು ಅನಾವರಣ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

    ಆ ಮೂಲಕ ಯುವಕರಲ್ಲಿ ದೇಶಪ್ರೇಮ ಬಡಿದೆಬ್ಬಿ ಸಬೇಕು, ಸೇನೆ ಸೇರಲು ಹೊಸ ಪೀಳಿಗೆಗೆ ಉತ್ತೇಜನ ನೀಡಬೇಕೆನ್ನುವ ಉದ್ದೇಶದಿಂದ ವಿಳಂಬವಾದರೂ ಈ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

    ಸೇನೆ ಸೇರಿದ ಮೇಲೆ ಕರವೀರಪ್ಪ ಊರಿನ ಮಗನಾಗಿದ್ದ, ಸರಳ ಸ್ವಭಾವ ಹೊಂದಿದ್ದ ಆತ ಊರಿಗೆ ಬಂದಾಗ ಎಲ್ಲರೊಂದಿಗೆ ಬೆರೆಯುತ್ತಿದ್ದ. ಹುತಾತ್ಮನಾದ ಮೇಲೆ ಊರಿನವರೆಲ್ಲ ಸೇರಿ ಈಗ ಸ್ಮಾರಕ ಮಾಡಿದ್ದಾರೆ. ಇದು ನಮಗೆ ಹೆಮ್ಮೆ ತಂದಿದೆ. ಇನ್ನೊಬ್ಬ ಮಗ ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿದ್ದಾನೆ ಎಂದು ತಾಯಿ ಶಂಕ್ರವ್ವ ಹಾಗೂ ತಂದೆ ವೀರಪ್ಪ ಕಮತರ ಅಭಿಮಾನದಿಂದ ಹೇಳುತ್ತಾರೆ.

    ಸೈನಿಕರಿಗೆ ಸನ್ಮಾನ: ಕೋಳಿವಾಡದ 40 ಸೈನಿಕರು ಹಾಗೂ ಸುತ್ತಮುತ್ತಲಿನ ಹಳ್ಳಿಯ ಹಾಲಿ ಹಾಗೂ ಮಾಜಿ ಸೈನಿಕರನ್ನು ಸನ್ಮಾನಿಸಲಾಗುವುದು. ಅಂದು ಬೆಳಗ್ಗೆ 10 ಗಂಟೆಗೆ ಗ್ರಾಮದಲ್ಲಿ ಕರವೀರಪ್ಪ ಅವರ ಭಾವಚಿತ್ರ ಹಾಗೂ 100 ಮೀಟರ್ ಉದ್ದದ ತಿರಂಗಾ ಶೋಭಾಯಾತ್ರೆ ನಡೆಯಲಿದೆ. ದೇಶಭಕ್ತಿ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮನೆ ಮನೆಗೂ ತ್ರಿವರ್ಣ ಧ್ವಜ ವಿತರಣೆ ನಡೆಯಲಿದೆ. ಶಾಲೆ ಮಕ್ಕಳು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

    ಫೆ. 29ರಂದು ಸಂಜೆ 4ಕ್ಕೆ ಗ್ರಾಮದಲ್ಲಿ ಬೈಕ್ ರ‍್ಯಾಲಿ ಆಯೋಜಿಸಲಾಗಿದ್ದು, ಸುತ್ತಲಿನ ಗ್ರಾಮದಲ್ಲಿ ಸಂಚರಿಸಲಿದೆ.

    ಅದೇ ದಿನ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ಕೋಟಿ ರೂ. ವೆಚ್ಚದ ಅಂಬೇಡ್ಕರ್, ವಾಲ್ಮೀಕಿ ಸಮುದಾಯ ಭವನ ಉದ್ಘಾಟನೆ ಹಾಗೂ ಸಿಸಿ ರಸ್ತೆ ಕಾಮಗಾರಿಗೆ

    ಭೂಮಿ ಪೂಜೆ ನೆರವೇರಿಸುವರು ಎಂದು ಗಾಣಿಗೇರ ತಿಳಿಸಿದರು. ವಿನಯಕುಮಾರ ಹಿರೇಮಠ, ಈಶ್ವರಪ್ಪ ಗಾಣಿಗೇರ, ಬಸವರಾಜ ಜಂತ್ಲಿ, ಶಾಂತಾರಾಮ ನಾಯ್ಕರ ಸುದ್ದಿಗೋಷ್ಠಿಯಲ್ಲಿದ್ದರು.

    ಕಮತರ ಸ್ಮಾರಕ ಅನಾವರಣ ಮಾ. 1ರಂದು: ಹುಬ್ಬಳ್ಳಿ ತಾಲೂಕಿನ ಕೋಳಿವಾಡದಲ್ಲಿ ಹುತಾತ್ಮ ವೀರಯೋಧ ಕರವೀರಪ್ಪ ಕಮತರ ಸ್ಮಾರಕ ಸಮಿತಿ ಆಶ್ರಯದಲ್ಲಿ ನಿರ್ವಿುಸಿದ ಕರವೀರಪ್ಪ ಅವರ ಕಂಚಿನ ಪುತ್ಥಳಿ ಅನಾವರಣ ಹಾಗೂ ಸ್ಮಾರಕ ಉದ್ಘಾಟನೆ ಸಮಾರಂಭವನ್ನು ಮಾ. 1ರಂದು ಸಂಜೆ 4.30ಕ್ಕೆ ಆಯೋಜಿಸಲಾಗಿದೆ ಎಂದು ಕೋಳಿವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ ಗಾಣಿಗೇರ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಯುವ

    ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಪುತ್ಥಳಿ ಅನಾವರಣ ಮಾಡುವರು. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಸಮಾರಂಭ ಉದ್ಘಾಟಿಸುವರು ಎಂದರು. ಭೈರನಹಟ್ಟಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮೀಜಿ, ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವಿಜಯಾನಂದ ಸರಸ್ವತೀ ಅವರು ಸಾನ್ನಿಧ್ಯ ವಹಿಸುವರು. ಲೇಖಕ ಸಂತೋಷ ತಮ್ಮಯ್ಯ, ನಿವೃತ್ತ ಏರ್ ಕಮಡೋರ್ ಸಿ.ಎಸ್. ಹವಾಲ್ದಾರ್, ನಿರಾಮಯ ಫೌಂಡೇಷನ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಇತರರು ಪಾಲ್ಗೊಳ್ಳುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts