More

    ಹುಡಾ ಮೂಲ ಉದ್ದೇಶಕ್ಕೇ ಹಿನ್ನಡೆ!

    ಬಸವರಾಜ ಇದ್ಲಿ ಹುಬ್ಬಳ್ಳಿ

    ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಹುಡಾ) ಕೆಲ ವರ್ಷಗಳಿಂದ ಅಧ್ಯಕ್ಷರ ನೇಮಕಾತಿ ನಡೆದಿಲ್ಲ; ಆಡಳಿತ ಮಂಡಳಿಯೂ ಇಲ್ಲ, ಹೀಗಾಗಿ, ಯಾವುದೇ ನೀತಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೇ ತನ್ನ ಮೂಲ ಉದ್ದೇಶವನ್ನೇ ಹುಡಾ ಮರೆತಂತಾಗಿದೆ.

    ಅವಳಿನಗರದ ಸೂರಿಲ್ಲದ ಜನರಿಗೆ ನೆಲೆ ಕಲ್ಪಿಸುವ ಮುಖ್ಯ ಉದ್ದೇಶದೊಂದಿಗೆ ಜನ್ಮ ತಾಳಿದ ಹುಡಾದಿಂದ ಈಗ ಅದೇ ಕಾರ್ಯ ಆಗದಿರುವುದರಿಂದ ಅದರ ಅಸ್ತಿತ್ವವನ್ನೇ ಜನರು ಪ್ರಶ್ನಿಸುವಂತಾಗಿದೆ.

    ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ 2018ರಲ್ಲಿ ಹುಡಾ ಆಡಳಿತ ಮಂಡಳಿ ಇತ್ತು. 2018ರ ಮೇ ನಂತರದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗೂ ತದನಂತರ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಆರು ತಿಂಗಳಾದರೂ ಅಧ್ಯಕ್ಷರ ನೇಮಕವಾಗಿಲ್ಲ. ಹೀಗಾಗಿ, ಯಾವುದೇ ನೀತಿ ನಿರ್ಧಾರ ಕೈಗೊಳ್ಳುವುದು, ಹೊಸ ವಸತಿ ಯೋಜನೆ ರೂಪಿಸುವುದು, ಸದ್ಯ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ಅರ್ಹರಿಗೆ ಹಂಚುವುದು ಮುಂತಾದ ಕೆಲಸ ಕಾರ್ಯಗಳು ಹುಡಾದಿಂದ ಆಗುತ್ತಿಲ್ಲ.

    ಏನೇನು ಕೆಲಸ ಬಾಕಿ ?: ಧಾರವಾಡ ತಾಲೂಕಿನ ತಡಸಿನಕೊಪ್ಪದಲ್ಲಿ 60-40 (ಹುಡಾಕ್ಕೆ ಶೇ. 60 ಹಾಗೂ ರೈತರಿಗೆ ಶೇ. 40 ನಿವೇಶನ) ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ವಸತಿ ಯೋಜನೆಯಲ್ಲಿ ನಿವೇಶನ ಹಂಚಿಕೆಗೆ 2018-19ರಲ್ಲಿ ಅರ್ಜಿ ಕರೆಯಲಾಗಿತ್ತು. ಈ ಎಲ್ಲ ಅರ್ಜಿಗಳ ಪರಿಶೀಲನೆಯಾಗಿದೆ. ಅಲ್ಲಿ ಒಟ್ಟು 424 ನಿವೇಶನಗಳಿವೆ.

    ಈಗ ಹುಡಾಕ್ಕೆ ಲಭ್ಯವಿರುವ 275 ನಿವೇಶನಗಳನ್ನು ಹಂಚಿಕೆ ಮಾಡಬೇಕಿದೆ. ಆದರೆ, ಹುಡಾ ಆಡಳಿತ ಮಂಡಳಿ ಇಲ್ಲದ್ದಕ್ಕೆ ಪ್ರಕ್ರಿಯೆ ಹಾಗೆಯೇ ಕುಳಿತಿದೆ.

    ಇನ್ನು ಧಾರವಾಡ ತಾಲೂಕಿನ ಲಕಮನಹಳ್ಳಿಯ 6 ಎಕರೆಯಲ್ಲಿ ಅಭಿವೃದ್ಧಿಪಡಿಸಿದ 62 ನಿವೇಶನ ಹಂಚಿಕೆ ಮಾಡಬೇಕಿದೆ. ಇದೇ ರೀತಿ ಹಲವು ವರ್ಷಗಳಿಂದ ವಿವಿಧ ಕಾರಣಗಳಿಗೆ ಬಾಕಿ ಉಳಿದಿರುವ ನಿವೇಶನಗಳನ್ನು ಹಂಚಿಕೆ ಮಾಡುವ ಕಾರ್ಯ ನಡೆದಿಲ್ಲ.

    ಅಮರಗೋಳದ ರಾಣಿ ಚನ್ನಮ್ಮ (ಹುಡಾ ಕಚೇರಿ ಎದುರು) ಬಡಾವಣೆಗೆ 2007ರಲ್ಲೇ ಅರ್ಜಿ ಆಹ್ವಾನಿಸಲಾಗಿದೆ. ಶೇ. 70ರಷ್ಟು ಅಭಿವೃದ್ಧಿ ಕಾರ್ಯಗಳೂ ಆಗಿವೆ. ಜಮೀನುದಾರರು ಕೋರ್ಟ್ ಮೆಟ್ಟಿಲೇರಿದ ಕಾರಣ ಹಂಚಿಕೆ ಮಾಡಿಲ್ಲ. ವಿವಾದಿತ ಜಾಗ ಬಿಟ್ಟು ಉಳಿದಿದ್ದನ್ನು ಹಂಚಲು ಅವಕಾಶವಿದೆ. ಆದರೂ ಈವರೆಗೆ ಯಾವುದೇ ನಿರ್ಧಾರವನ್ನು ಅಧಿಕಾರಿಗಳು ಕೈಗೊಂಡಿಲ್ಲ.

    ವಸತಿ ಸಮುಚ್ಚಯಗಳು: ನಾಲ್ಕು ವರ್ಷಗಳ ಹಿಂದೆ ಹುಡಾ ಹೊಸದೊಂದು ಯೋಜನೆ ರೂಪಿಸಿದೆ. ಅದುವೇ ಗುಂಪು ವಸತಿ ಯೋಜನೆ. ಹುಡಾ ಮಾಲೀಕತ್ವದ ಜಾಗದಲ್ಲಿ ಅಪಾರ್ಟ್​ವೆುಂಟ್ ಮಾದರಿಯಲ್ಲಿ ಮನೆ ನಿರ್ವಿುಸಿ ಫಲಾನುಭವಿಗಳಿಗೆ ವಿತರಿಸುವ ಈ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದೆ. ಆದರೆ, ಇದಕ್ಕೆ ಅಗತ್ಯ ಮಾರ್ಗದರ್ಶಿ ಸೂತ್ರಗಳನ್ನು ನೀಡಿಲ್ಲ. ಹಾಗಾಗಿ, ಈ ಯೋಜನೆಯೂ ಕಾರ್ಯಗತವಾಗದೆ ಬಾಕಿ ಉಳಿದಿದೆ.

    ಲಕಮನಹಳ್ಳಿ, ಗಾಂಧಿನಗರದಲ್ಲಿ ಒಟ್ಟು ಮೂರು ಕಡೆ ಸುಮಾರು 18 ಗುಂಟೆಯ ಪ್ರತ್ಯೇಕ ಜಾಗದಲ್ಲಿ ಜಿ ಪ್ಲಸ್ 4 ವಸತಿ (ನಾಲ್ಕಂತಸ್ತಿನ) ಸಮುಚ್ಚಯ ನಿರ್ವಿುಸಿ ಸುಮಾರು ನೂರಕ್ಕೂ ಹೆಚ್ಚು ಮನೆಗಳನ್ನು ಕಟ್ಟಿ ಕೊಡುವ ನೀಲಿ ನಕ್ಷೆ ತಯಾರಿಸಲಾಗಿದೆ. ಇದಕ್ಕೆ ಸರ್ಕಾರದಿಂದ ಅಂತಿಮ ಅನುಮೋದನೆ ಸಿಗಬೇಕಿದೆ. ಇದೇ ಮೊದಲ ಬಾರಿ ಹುಡಾ ಇಂತಹ ಯೋಜನೆ ರೂಪಿಸಿರುವುದರಿಂದ ಪ್ರತಿಯೊಂದಕ್ಕೂ ಸರ್ಕಾರದ ನಿಯಮಾವಳಿಗೆ ಕಾಯಬೇಕಿದೆ. ಈ ಎಲ್ಲ ಕಾರ್ಯಗಳು ಬಹುತೇಕ ಆಡಳಿತ ಮಂಡಳಿ ಬಂದ ನಂತರವೇ ಆಗಲಿವೆ. ಇದೇ ನಿರೀಕ್ಷೆಯಲ್ಲಿ ಅಧಿಕಾರಿಗಳು ಕೂಡ ಇದ್ದಾರೆ. ಇದಲ್ಲದೆ, ಒಂದೇ ಕಡೆ ಇರುವ 50 ಎಕರೆ ಜಮೀನನ್ನು ರೈತರು ಹುಡಾ ವಸತಿ ಯೋಜನೆಗೆ ಕೊಡಲು ಒಪ್ಪಿಕೊಂಡಿದ್ದಾರೆ. ದಾಖಲೆ ಪರಿಶೀಲನೆ ನಡೆಯಬೇಕಿದೆ. ನಂತರವೇ ಬೃಹತ್ ವಸತಿ ಯೋಜನೆಯೊಂದು ಕೈಗೂಡುವ ಆಶಯದಲ್ಲಿ ಅಧಿಕಾರಿಗಳು ಇದ್ದಾರೆ.

    ತೆರೆಮರೆಯಲ್ಲಿ ಪೈಪೋಟಿ : ಈ ಮಧ್ಯೆ ಹುಡಾ ಅಧ್ಯಕ್ಷಗಿರಿಗೆ ತೆರೆಮರೆಯಲ್ಲಿ ತೀವ್ರ ಪೈಪೋಟಿ ನಡೆದಿದೆ. ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಪ್ರವೇಶ ಬಯಸಿದ್ದ ಕೆಲ ಬಿಜೆಪಿ ಮುಖಂಡರೂ ಈಗ ಹುಡಾ ಮೇಲೆ ಕಣ್ಣಿಟ್ಟಿದ್ದಾರೆ. ಒಟ್ಟಾರೆ ದಶಕದಿಂದ ಹೊಸ ವಸತಿ ಯೋಜನೆ ಕಾಣದ ಅವಳಿನಗರದ ಜನರಿಗೆ ಸೂರು ಒದಗಿಸುವವರು, ಹುಡಾ ಚಟುವಟಿಕೆ ಚುರುಕುಗೊಳಿಸುವವರು ಅಧಿಕಾರ ಹಿಡಿಯಬೇಕು ಎನ್ನುವುದು ನಾಗರಿಕರ ಆಶಯ.

    ಸಾರ್ವಜನಿಕರಿಗಾಗಿ ವಸತಿ ಯೋಜನೆ ರೂಪಿಸಲು ಜಮೀನು ನೀಡಲು ಮುಂದೆ ಬಂದರೆ ಶೇ. 50- 50ರ ಅನುಪಾತದಲ್ಲಿ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧ. ಈ ಬಗ್ಗೆ ರೈತರಲ್ಲಿ ಜಾಗೃತಿ ಸಹ ಮೂಡಿಸಲಾಗುವುದು.

    – ಎನ್.ಎಚ್. ಕುಮ್ಮಣ್ಣವರ, ಹುಡಾ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts