More

    ಹಿರೇಹಾಳದಲ್ಲಿ ಎಚ್ಚರ ತಪ್ಪಿದರೆ ಆಪತ್ತು

    ರೋಣ: ಹಿರೇಹಾಳ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳ ರಸ್ತೆಗಳು ಹದಗೆಟ್ಟಿದ್ದು ಪಾದಚಾರಿಗಳು, ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ.

    ಹಿರೇಹಾಳದಲ್ಲಿ ರಸ್ತೆ ತುಂಬೆಲ್ಲ ತಗ್ಗು-ಗುಂಡಿಗಳೇ ಕಾಣಿಸುತ್ತಿವೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಕಾಲ್ನಡಿಗೆಯಲ್ಲೂ ಹೋಗದಂತಹ ಸ್ಥಿತಿ ನಿರ್ವಣವಾಗಿದೆ. ಅಕ್ರಮ ಮರಳು ಸಾಗಾಟದ ಟ್ರ್ಯಾಕ್ಟರ್, ಟಿಪ್ಪರ್​ಗಳು ಎಗ್ಗಿಲ್ಲದೇ ಸಂಚರಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನುವುದು ಸ್ಥಳೀಯರ ಆರೋಪವಾಗಿದೆ.

    ಕರೊನಾ ಹಿನ್ನೆಲೆಯಲ್ಲಿ ಬಹುತೇಕ ಸಾರಿಗೆ ಸಂಚಾರ ಕಡಿಮೆಯಾಗಿದೆ. ಟಂಟಂಗಳು ಬೇರೆ, ಬೇರೆ ಗ್ರಾಮಗಳಿಗೆ ಸಂಚರಿಸುತ್ತವೆ. ಆದರೆ, ಈ ಗ್ರಾಮದ ರಸ್ತೆಯ ದುಃಸ್ಥಿತಿ ಕಂಡು ವಾಹನ ಸವಾರರು ಈ ಮಾರ್ಗವಾಗಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ವೃದ್ಧರು, ಮಹಿಳೆಯರು, ಮಕ್ಕಳು ಆತಂಕದಲ್ಲಿಯೇ ರಸ್ತೆ ದಾಟಬೇಕಿದೆ. ಪಾದಚಾರಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಮಳೆ ಬಂದರೆ ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ವಾಹನಗಳು ಸಂಚರಿಸಿದಾಗ ಗುಂಡಿಯಲ್ಲಿನ ನೀರು ಅಕ್ಕ ಪಕ್ಕದ ಮನೆಗಳಿಗೆ ಸಿಡಿಯುತ್ತಿವೆ. ಇನ್ನು ರಸ್ತೆಯಲ್ಲಿನ ತಗ್ಗುಗಳಿಂದ ತಪ್ಪಿಸಿಕೊಳ್ಳಲು ಪ್ರಯಾಸಪಡುವ ಪರಿಸ್ಥಿತಿಯಿದೆ. ಸಂಬಂಧಿಸಿದ ಅಧಿಕಾರಿಗಳು ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎನ್ನುವುದು ಗ್ರಾಮಸ್ಥರಾದ ಪಡಿಯವ್ವ ಮಾದರ, ಚಂದ್ರಕಾಂತ ಮಾದರ ಇತರರ ಆಗ್ರಹವಾಗಿದೆ.

    ಚರಂಡಿ ನೀರು ಹಾಗೂ ಮಳೆ ನೀರು ರಸ್ತೆ ಮೇಲೆ ಹರಿಯುವುದನ್ನು ತಪ್ಪಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ನಮಗೆ ದೂರು ನೀಡಲಾಗಿದೆ. ಈ ಕುರಿತಂತೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಶೀಘ್ರವೇ ರಸ್ತೆ ದುರಸ್ತಿಪಡಿಸಲಾಗುತ್ತದೆ.

    | ಪಿ.ಬಿ. ಮಾದರ, ಗ್ರಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts