More

    ಹಿನ್ನಡೆ ಭಯದಿಂದ ರಾಜಕಾರಣ ಮಾಡಲ್ಲ: ಬಿ.ಶ್ರೀರಾಮುಲು ಸ್ಪಷ್ಟನೆ

    ಮೈಸೂರು: ರಾಜಕೀಯದಲ್ಲಿ ಹಿನ್ನಡೆಯಾಗುತ್ತದೆ ಎಂಬ ಕಾರಣಕ್ಕೆ ಯಾವತ್ತೂ ರಾಜಕಾರಣ ಮಾಡಿದವನಲ್ಲ. ಅಧಿಕಾರಕ್ಕಾಗಿ ರಾಜಕಾರಣ ಮಾಡುವವನೂ ನಾನಲ್ಲ. ಇಂದಿಗೂ ನನಗೆ ಹಲವಾರು ಶಾಸಕರ, ಸಮುದಾಯದ ಬೆಂಬಲ ಇದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
    ರಮೇಶ್ ಜಾರಕಿಹೊಳಿ ಆಗಮನದಿಂದ ನಿಮಗೆ ರಾಜಕೀಯವಾಗಿ ಹಿನ್ನಡೆಯಾಗಿದೆ ಎಂದು ನಗರದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
    ರಾಜಕೀಯವಾಗಿ ನಾನು ಯಾರನ್ನೂ ಭೇಟಿ ಮಾಡಲ್ಲ. ನಾನು ಜವಾಬ್ದಾರಿಯುತ ಸ್ಥಾನದಲ್ಲಿ ಇರೋನು. ತುಂಗಭದ್ರಾ ವ್ಯಾಪ್ತಿಯ ಏತ ನೀರಾವರಿ ಯೋಜನೆಯ ಸಂಬಂಧ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದೆ. ನನ್ನ ಮೇಲೆ ಚಾಮರಾಜನಗರದಿಂದ ಬೀದರ್‌ವರೆಗೆ ಜನರು ಅದೇ ಪ್ರೀತಿ-ವಿಶ್ವಾಸ ತೋರುತ್ತಿದ್ದಾರೆ. ಆ ವಿಶ್ವಾರ್ಹತೆಯೇ ನನ್ನನ್ನು ಕೈ ಹಿಡಿಯಲಿದೆ ಎಂದರು.
    ವಿಜಯನಗರ ಪ್ರತ್ಯೇಕ ಜಿಲ್ಲೆ
    ವಿಜಯನಗರ ಪ್ರತ್ಯೇಕ ಜಿಲ್ಲೆ ಆಗಬೇಕು. ಬಳ್ಳಾರಿ 250 ಕಿ.ಮೀ. ವ್ಯಾಪ್ತಿಯ ಅತಿ ದೊಡ್ಡ ಜಿಲ್ಲೆ. ಬಹಳ ದಿನಗಳಿಂದ ಪ್ರತ್ಯೇಕ ಜಿಲ್ಲೆ ಆಗಬೇಕೆಂಬ ಒತ್ತಾಯವಿತ್ತು. ಹೀಗಾಗಿ, ಇದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ ಅಂತ ಹೇಳಿದ್ದೆ. ಈಗಾಗಲೇ ಸೋಮಶೇಖರ್ ರೆಡ್ಡಿ ಅವರನ್ನು ಸಿಎಂ ಮನವೊಲಿಸಲು ಮುಂದಾಗಿದ್ದು, ನಾನು ಅವರೊಂದಿಗೆ ಸಮಾಲೋಚನೆ ನಡೆಸಿ ಸಮಾಧಾನಪಡಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
    ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗ ನಡುವಿನ ಮುಸುಕಿನ ಗುದ್ದಾಟದ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯೇ ಒಂದು ಎಂದು ನಾನು ತಿಳಿದುಕೊಂಡಿದ್ದು, ಸರ್ಕಾರ ಬಂದ ಮೇಲೆ ವಲಸಿಗ ಶಾಸಕರು ಬಿಜೆಪಿಯಿಂದ ನಿಂತು ಗೆದ್ದಿದ್ದಾರೆ. ಆದರೆ ಐದಾರು ಬಾರಿ ಗೆದ್ದಿರುವ ಕೆಲವರಿಗೆ ಅವಕಾಶ ಸಿಕ್ಕಿಲ್ಲ. ಇವರಿಗೆ ಆದ್ಯತೆ ನೀಡುವಂತೆ ಸಿಎಂಗೆ ಕೋರಲಾಗಿದೆ. ಸೂಕ್ತ ಕಾಲದಲ್ಲಿ ಸೂಕ್ತ ನಿರ್ಣಯವನ್ನು ಅವರು ಕೈಗೊಳ್ಳಲಿದ್ದಾರೆ ಎಂದರು.
    ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಷಯದಲ್ಲಿ ಯಾವುದೇ ರಾಜಕೀಯ ಸ್ವಾರ್ಥ ಇಲ್ಲ. ಆ ಜಾತಿಯ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿದ್ದು, ದೇಶಕ್ಕಾಗಿ ಹೋರಾಡಿದ ಕ್ಷತ್ರಿಯ ಸಮುದಾಯ ಅದು. ಬೆಳಗಾವಿ, ಬೀದರ್ ಭಾಗದಲ್ಲಿ ಆ ಸಮುದಾಯದಲ್ಲಿ ಬಡತನ ಇದೆ ಎಂದು ಸಮರ್ಥಿಸಿಕೊಂಡರು.
    ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಈ ಬಗ್ಗೆ ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ. ಅದನ್ನು ಬಿಟ್ಟು ನನಗೇನು ಗೊತ್ತಿಲ್ಲ ಎಂದ ಅವರು, ಉಪಮುಖ್ಯಮಂತ್ರಿ ಸ್ಥಾನ ನೀಡುವ ಕುರಿತ ಪ್ರಶ್ನೆಗೆ ಉತ್ತರಿಸದೆ ಅಲ್ಲಿಂದ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts