More

    ಹಿಂದು ಮಹಾಗಣಪನ ಸನ್ನಿಧಿಯಲ್ಲಿ ಶಕ್ತಿದೇವತೆಗಳು

    ಚಿತ್ರದುರ್ಗ: ಹಿಂದು ಮಹಾಗಣಪತಿ ಮಹೋತ್ಸವದ ಅಂಗವಾಗಿ ಅಕ್ಕ-ತಂಗಿಯರಾದ ನವದುರ್ಗೆಯರನ್ನು ಒಳಗೊಂಡು 11ಕ್ಕೂ ಅಧಿಕ ಶಕ್ತಿದೇವತೆಗಳ ವೈಭವೋಪೇತ ಮೆರವಣಿಗೆ ರಾಜಬೀದಿಗಳಲ್ಲಿ ಸೋಮವಾರ ಸಂಚರಿಸಿತು.

    ಐತಿಹಾಸಿಕ ಸಿಹಿನೀರು ಹೊಂಡದಲ್ಲಿ ಗಂಗಾಪೂಜೆಗೆ ಒಂದೊಂದಾಗಿ ಆಗಮಿಸಿದ ಶಕ್ತಿದೇವತೆಗಳ ಉತ್ಸವ ಮೂರ್ತಿಗೆ ಅರ್ಚಕರು ಮಹಾಮಂಗಳಾರತಿ ಬೆಳಗುವ ಮೂಲಕ ಬರಮಾಡಿಕೊಂಡರು. ಪೂಜೆ ಬಳಿಕ ದುರ್ಗದ ಅಧಿದೇವತೆ ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ ದೇವಿಯರ ಉತ್ಸವ ಮೂರ್ತಿ ನೇತೃತ್ವದಲ್ಲಿ ಭವ್ಯ ಮೆರವಣಿಗೆಗೆ ಚಾಲನೆ ದೊರೆಯಿತು.

    ಕಾಳಿಕಾಮಠೇಶ್ವರಿ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೋಪಾಲಪುರ ರಸ್ತೆಯ ದುರ್ಗಾ ದೇವಿ, ಮಲೆನಾಡು ಚೌಡೇಶ್ವರಿ, ಸಿಗಂದೂರು ಚೌಡೇಶ್ವರಿ, ಬನಶಂಕರಿ, ಗೊಕಟ್ಟೆ ಕಣಿವೆಮಾರಮ್ಮ, ಬುಡ್ಡಾಂಬಿಕಾ, ಕನ್ಯಾಕಾ ಪರಮೇಶ್ವರಿ ದೇವಿ ಸೇರಿ 11ಕ್ಕೂ ಹೆಚ್ಚು ದೇವತೆಗಳ ಉತ್ಸವ ಮೂರ್ತಿಗಳು ಪಾಲ್ಗೊಂಡಿದ್ದವು.

    ಶಕ್ತಿದೇವತೆಗಳ ಮೂರ್ತಿಗಳನ್ನು ವಿವಿಧ ವರ್ಣದ ಪುಷ್ಪ, ಮಣಿ ಸೇರಿ ಆಕರ್ಷಕ ವಸ್ತುಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಕಹಳೆ, ಉರುಮೆ, ಡೊಳ್ಳು, ನಾದಸ್ವರ, ತಮಟೆ ಸೇರಿ ಇತರೆ ಜನಪದ ಕಲಾತಂಡಗಳ ಮಂಗಳವಾದ್ಯಗಳು ಮೆರುಗು ನೀಡಿದವು.

    ಹೊಳಲ್ಕೆರೆ ರಸ್ತೆ, ಸಂಗೊಳ್ಳಿರಾಯಣ್ಣ, ಗಾಂಧಿ, ಎಸ್‌ಬಿಐ, ಮದಕರಿನಾಯಕ ವೃತ್ತ, ಬಿ.ಡಿ.ರಸ್ತೆ ಮಾರ್ಗವಾಗಿ ಸಂಚರಿಸಿ ಮಹಾಗಣಪನನ್ನು ಪ್ರತಿಷ್ಠಾಪಿಸಿರುವ ಜೈನ್ ಧಾಮ ಪ್ರವೇಶಿಸಿದ ಶಕ್ತಿದೇವತೆಗಳ ಮೂರ್ತಿಗೆ ಅದ್ದೂರಿ ಸ್ವಾಗತ ದೊರೆಯಿತು. ಈ ಸುಂದರ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

    ಮಾರ್ಗದುದ್ದಕ್ಕೂ ಒಂದರ ಹಿಂದೆ ಮತ್ತೊಂದರಂತೆ ಸಾಗುತ್ತಿದ್ದ ದೇವತೆಗಳ ಮುಂಭಾಗದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದು ಮಹಾಗಣಪತಿ ಉತ್ಸವ ಸಮಿತಿ ಕಾರ್ಯಕರ್ತರು ಸೇರಿ ಅನೇಕ ಭಕ್ತರು ಪಾಲ್ಗೊಂಡಿದ್ದರು. ಉಧೋ ಉಧೋ ಎಂಬ ಹರ್ಷೋದ್ಘಾರ ಮುಗಿಲುಮುಟ್ಟಿತು. ಈ ದೃಶ್ಯವನ್ನು ರಸ್ತೆ ಬದಿಯಲ್ಲಿ ನಿಂತಿದ್ದ ಭಕ್ತರು ಕಣ್ತುಂಬಿಕೊಂಡರಲ್ಲದೆ, ಮೊಬೈಲ್‌ಗಳ ಮೂಲಕ ಸೆರೆಹಿಡಿಯಲು ಮುಂದಾದರು.

    ಸ್ವಾಮಿ ಸನ್ನಿಧಿಯಲ್ಲಿ ಅ. 3ರಂದು ಬೆಳಗ್ಗೆ 9ರಿಂದ ಗಣ, ನವ, ಮೃತ್ಯುಂಜಯ ಹೋಮ ಹಮ್ಮಿಕೊಂಡಿದ್ದು, ಪೂರ್ಣಾಹುತಿ ಬಳಿಕ ಜೈ ಶ್ರೀರಾಮ ಬಳಗದಿಂದ ಮಧ್ಯಾಹ್ನ 1ರ ನಂತರ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ ಎಂದು ಸಮಿತಿ ತಿಳಿಸಿದೆ.

    ಒಂಭತ್ತನೇ ಬಾರಿ ಸಮಾಗಮ: ಐತಿಹಾಸಿಕ ಕೋಟೆನಗರಿಯಲ್ಲಿ ಈ ರೀತಿ ಶಕ್ತಿದೇವತೆಗಳು ಒಂದೆಡೆ ಸೇರುತ್ತಿರುವುದು ಇದು ಒಂಭತ್ತನೇ ಬಾರಿ. 2014ರಲ್ಲಿ ಶಕ್ತಿದೇವತೆಗಳ ಸಂಗಮ ಹೆಸರಿನಲ್ಲಿ ಆಯೋಜಿಸಿದ್ದ ಬೃಹತ್ ಶೋಭಾಯಾತ್ರೆಯಲ್ಲಿ ಜಿಲ್ಲೆಯ ಸುತ್ತಮುತ್ತ ಗ್ರಾಮಗಳ 58ಕ್ಕೂ ಹೆಚ್ಚು ದೇವತೆಗಳು ಪಾಲ್ಗೊಂಡಿದ್ದವು. ಪ್ರತಿ ವರ್ಷ ಮಹಾಗಣಪನ ಸನ್ನಿಧಿಯಲ್ಲಿ ನಡೆಯಲಿರುವ ಹೋಮ ಪೂಜಾ ಕಾರ್ಯಗಳಲ್ಲೂ ಸತತ ಮೂರ್ನಾಲ್ಕು ವರ್ಷಗಳಿಂದ ಶಕ್ತಿದೇವತೆಗಳನ್ನು ಕರೆತರಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts