More

    ಹಿಂದು ಧರ್ಮ ಕೆಲವರ ಆಸ್ತಿ ಅಲ್ಲ

    ಹುಬ್ಬಳ್ಳಿ: ಶ್ರೀರಾಮನ ಬಗ್ಗೆ ನಮಗೂ ಗೌರವ ಇದೆ. ಹಿಂದು ಧರ್ಮ, ಹಿಂದುತ್ವ ಯಾರೊಬ್ಬರ ಅಸ್ತಿ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.

    ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ಉತ್ತರ ಕರ್ನಾಟಕ ಮಟ್ಟದ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ರಾಮನ ವಿಗ್ರಹಕ್ಕಿಂತ ಹೆಚ್ಚು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪ್ರತಿಮೆಗಳಿವೆ. ದಲಿತರಿಗೆ, ತುಳಿತಕ್ಕೆ ಒಳಗಾದವರಿಗೆ ಅಂಬೇಡ್ಕರ್ ಸಂವಿಧಾನ ರಕ್ಷಣೆ ನೀಡುತ್ತದೆ. ಇಂದು ನಾವು ಸಂವಿಧಾನವನ್ನು ರಕ್ಷಿಸಬೇಕಿದೆ ಎಂದರು.

    ಯುವಕರು ಯುವ ಕಾಂಗ್ರೆಸ್ ಸದಸ್ಯರಾಗಿ, ಸಂಘಟಕರಾಗಿ, ನಾಯಕರಾಗಿ ಬೆಳೆದು ಬರಬೇಕು ಎಂಬುದು ಕಾಂಗ್ರೆಸ್ ನಂಬಿಕೆ.

    ಪ್ರತಿ ಬ್ಲಾಕ್ ಮಟ್ಟದಲ್ಲಿ 5 ಸಾವಿರ ಸದಸ್ಯತ್ವ ಮಾಡಬೇಕು. ಹಿರಿಯರು ಇದಕ್ಕೆ ಸಹಕಾರ ನೀಡಬೇಕು. ನೀಡದಿದ್ದರೆ ನಮಗೆ ಗೊತ್ತಾಗುತ್ತದೆ. ಮುಂದೆ ವಿಧಾನ ಸಭೆ ಚುನಾವಣೆ ವೇಳೆ ಟಿಕೆಟ್ ನೀಡುವ ವೇಳೆ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

    ಮಾಜಿ ಸಚಿವರಾದ ಸಂತೋಷ ಲಾಡ್, ಎ.ಎಂ. ಹಿಂಡಸಗೇರಿ, ಶಾಸಕ ಪ್ರಸಾದ ಅಬ್ಬಯ್ಯ, ಎಂಎಲ್​ಸಿ ಶ್ರೀನಿವಾಸ ಮಾನೆ, ಮಾಜಿ ಎಂಎಲ್ಸಿ ನಾಗರಾಜ ಛಬ್ಬಿ, ವೀರಣ್ಣ ಮತ್ತಿಕಟ್ಟಿ, ಮಾಜಿ ಸಂಸದ ಐ.ಜಿ. ಸನದಿ, ಅನಿಲ ಕುಮಾರ ಪಾಟೀಲ್, ಅಲ್ತಾಫ್ ಹಳ್ಳೂರು, ಸ್ವಾತಿ ಮಳಗಿ, ವಿನೋದ ಅಸೂಟಿ, ಇಮ್ರಾನ್ ಎಲಿಗಾರ, ಮದನ ಕುಲಕರ್ಣಿ, ಬಂಗಾರೇಶ ಹಿರೇಮಠ, ಇನ್ನಿತರು ಇದ್ದರು. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾರ್ದಲಿ ಸ್ವಾಗತಿಸಿದರು.

    ಯೋಗಿ ಸರ್ಕಾರ ದೇಶಕ್ಕೆ ರೋಗ

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ದೇಶಕ್ಕೆ ಅಂಟಿದ ರೋಗ ಎಂದು ಡಿ.ಕೆ. ಶಿವಕುಮಾರ ಟೀಕಿಸಿದರು. ಹತ್ರಾಸ್​ನಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆದಿದ್ದು ಇಡೀ ಜಗತ್ತಿಗೆ ಗೊತ್ತಿದೆ. ಎಫ್​ಐಆರ್ ಮಾಡಲು ಎಷ್ಟು ದಿನ ತೆಗೆದುಕೊಂಡರು? ವೈದ್ಯಕೀಯ ವರದಿ ಮುಚ್ಚಿರುವುದು, ಶವ ಸಂಸ್ಕಾರಕ್ಕೆ ತಂದೆ-ತಾಯಿಯರನ್ನು ಬಿಡದಿರುವಂಥದ್ದು, 144ನೇ ಕಲಂ ಜಾರಿಗೊಳಿಸಿರುವುದು… ಇವೆಲ್ಲ ಕನ್ನಡಿಯಲ್ಲವೇ ಎಂದರು.

    ರಾಜ್ಯದಲ್ಲಿ ಕಾಂಗ್ರೆಸ್​ನಿಂದ ಉಪ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಅಂತಿಮಗೊಳಿಸಿ ಹೈಕಮಾಂಡ್​ಗೆ ಕಳುಹಿಸುತ್ತೇವೆ. ಡಿ.ಕೆ. ರವಿ ಅವರ ಪತ್ನಿ ಹೆಸರು ಪ್ರಸ್ತಾಪವಾಗುತ್ತಿರುವ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಮಾಜಿ ಸಚಿವ ರಾಮಲಿಂಗರೆಡ್ಡಿ ಅವರಿಗೆ ಆ ಕ್ಷೇತ್ರದ ಜವಾಬ್ದಾರಿ ವಹಿಸಲಾಗಿದೆ. ಅವರನ್ನು ಕೇಳುತ್ತೇನೆ ಎಂದು ಹೇಳಿದರು.

    ಅದ್ದೂರಿ ಸ್ವಾಗತ

    ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಶನಿವಾರ ಬೆಳಗ್ಗೆ ಧಾರವಾಡ ಜಿಲ್ಲೆಗೆ ಆಗಮಿಸಿದ ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಜಿಲ್ಲೆ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.

    ಮುಮ್ಮುಗಟ್ಟಿ, ನರೇಂದ್ರ ಕ್ರಾಸ್, ಕೃಷಿ ವಿವಿ ಎದುರು, ಎಸ್ಪಿ ಕಚೇರಿ ಬಳಿ ಜಮಾಯಿಸಿದ್ದ ಕಾರ್ಯಕರ್ತರು ಶಿವಕುಮಾರ ಅವರಿಗೆ ಹೂವಿನ ಹಾರ ಹಾಕಿ ಬರಮಾಡಿಕೊಂಡರು.

    ಬಳಿಕ ರೀಗಲ್ ವೃತ್ತದ ಬಳಿಯ ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ ಶಾಸಕರಿಂದ ಸನ್ಮಾನ ಸ್ವೀಕರಿಸಿ, ಪಕ್ಷದ ಕಚೇರಿಯ ಸಮಗ್ರ ಮಾಹಿತಿ ಪಡೆದುಕೊಂಡರು.

    ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ, ಬ್ಲಾಕ್ ಅಧ್ಯಕ್ಷ ಬಸವರಾಜ ಮಲಕಾರಿ, ತಾಪಂ ಅಧ್ಯಕ್ಷ ರವಿವರ್ಮ ಪಾಟೀಲ, ಬಸವರಾಜ ಕಿತ್ತೂರ, ಮುಖಂಡರಾದ ನಾಗರಾಜ ಛಬ್ಬಿ, ಸದಾನಂದ ಡಂಗನವರ, ಎಂ.ಎಸ್. ಅಕ್ಕಿ, ಪಿ.ಎಚ್.ನೀರಲಕೇರಿ, ಇಸ್ಮಾಯಿಲ್ ತಮಟಗಾರ, ಶಿವಶಂಕರ ಹಂಪಣ್ಣವರ, ರಾಬರ್ಟ್ ದದ್ದಾಪುರಿ, ದೇವಕಿ ಯೋಗಾನಂದ, ಶಾಂತವ್ವ ಗುಜ್ಜಳ, ವಸಂತ ಅರ್ಕಾಚಾರ, ಆನಂದ ಸಿಂಗನಾಥ, ಆನಂದ ಜಾಧವ, ಪ್ರಕಾಶ ಘಾಟಗೆ, ಯಾಸಿನ್ ಹಾವೇರಿಪೇಟ, ಇತರರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts