More

    ಹಿಂದು ಧರ್ಮದ ಉಳಿವಿಗೆ ಶ್ರಮಿಸಿದ್ದ ಶಂಕರಾಚಾರ್ಯ

    ಕಿಕ್ಕೇರಿ: ಅದ್ವೈತ ಸಿದ್ಧಾಂತದ ಮೂಲಕ ಹಿಂದು ಧರ್ಮ ಉಳಿಸಲು ಶ್ರಮಿಸಿದ ದೇವಮಾನವ ಆದಿ ಶಂಕರಾಚಾರ್ಯರು ಎಂದು ನಿವೃತ್ತ ಮುಖ್ಯಶಿಕ್ಷಕ ಕೆ.ಎಸ್.ಪರಮೇಶ್ವರಯ್ಯ ತಿಳಿಸಿದರು.


    ಪಟ್ಟಣದ ಸುಬ್ಬರಾಯ ಛತ್ರದಲ್ಲಿ ವಿಪ್ರ ಬಾಂಧವ ಸಮಿತಿಯಿಂದ ಮಂಗಳವಾರ ಏರ್ಪಡಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹುತೇಕ ಮಹನೀಯರ ಬದುಕಿನ ಅವಧಿ ಅತ್ಯಲ್ಪವಾದರೂ ನಾಡಿಗೆ ನೀಡಿದ ಸಾಧನೆ ಬಲು ದೊಡ್ಡದು. ಇದಕ್ಕೆ ಶಂಕರಚಾರ್ಯರ ಸಾಧನೆಯೇ ಸಾಕ್ಷಿಯಾಗಿದೆ. ಅದ್ವೈತ ಸಿದ್ಧಾಂತದ ಮೂಲಕ ಆತ್ಮ ಪರಮಾತ್ಮ ಎಲ್ಲವೂ ಒಂದೇ ಎಂದು ಸಾರಿದರು. ಭರತಖಂಡದ ನಾಲ್ಕು ದಿಕ್ಕು, ಪ್ರಾಂತ್ಯಗಳನ್ನು ಕಾಲ್ನಡಿಗೆಯಲ್ಲೇ ಪರ್ಯಟನೆ ಮಾಡಿ ಹಿಂದು ಧರ್ಮದ ಜಾಗೃತಿ ಮೂಡಿಸಿದರು. ನಾಲ್ಕು ದಿಕ್ಕಿನಲ್ಲೂ ಶಕ್ತಿ ಪೀಠ, ಮಠಗಳನ್ನು ಸ್ಥಾಪಿಸಿ ಸನಾತನ ಸಂಸ್ಕೃತಿ ಉಳಿವಿಗೆ ಗಟ್ಟಿಯಾದ ಅಡಿಪಾಯ ಹಾಕಿಕೊಟ್ಟರು ಎಂದು ಹೇಳಿದರು.
    ದೈವಿಸ್ವರೂಪದ ಶಂಕರರು ಬದುಕಿದ್ದು ಕೇವಲ 32 ವರ್ಷ. ಶಂಕರರು ಮೊದಲು ದೀಕ್ಷೆ ಸ್ವೀಕರಿಸಿದ್ದು ಶೂದ್ರ ಮಹಿಳೆಯಿಂದ ಎಂಬುದನ್ನು ಮರೆಯಲಾಗದು. ಇವರ ಪವಾಡಶಕ್ತಿ, ಧರ್ಮ, ಸಂಸ್ಕಾರ ಭಾರತಕ್ಕೆ ಅಡಿಪಾಯವಾಗಿದೆ. 8ನೇ ಶತಮಾನದಲ್ಲಿ ಶಂಕರರು ಸ್ಥಾಪಿಸಿದ ಪೂರ್ವದಲ್ಲಿ ಪುರಿ ಪೀಠ, ಗೋವರ್ಧನ ಮಠ, ಪಶ್ಚಿಮದಲ್ಲಿ ದ್ವಾರಕಾ ಪೀಠ, ದಕ್ಷಿಣದ ಶೃಂಗೇರಿ ಪೀಠ, ಉತ್ತರದಲ್ಲಿ ಬದರಿ ಪೀಠಗಳು ಧಾರ್ಮಿಕ ಶಕ್ತಿಯ ಅಡಿಗಲ್ಲುಗಳಾಗಿವೆ ಎಂದರು.


    ಮುಖಂಡ ಕೆ.ಬಿ.ವೆಂಕಟೇಶ್ ಮಾತನಾಡಿ, ಆಚಾರ್ಯರು ರಚಿಸಿದ ಬ್ರಹ್ಮಸೂತ್ರ ಭಾಷ್ಯ, ಉಪನಿಷತ್ ಭಾಷ್ಯ, ಭಜಗೋವಿಂದಂ, ಸೌಂದರ್ಯಲಹರಿ ಸ್ತ್ರೋತ್ರಗಳು ಧಾರ್ಮಿಕ ಜಗತ್ತಿಗೆ ಹೊಸ ಭಾಷ್ಯವನ್ನು ಬರೆದವು. ದೇವರು, ಆತ್ಮ, ಜೀವಾತ್ಮ, ಪರಮಾತ್ಮ ಎಲ್ಲವೂ ಒಂದೇ ಎಂದು ಧರ್ಮ ಸಂಘರ್ಷಕ್ಕೆ ಮುಕ್ತಿ ನೀಡಿದರು ಎಂದು ಸ್ಮರಿಸಿದರು.
    ಶಂಕರಾಚಾರ್ಯರ ಭಾವಚಿತ್ರವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ, ಪುಷ್ಪಾರ್ಚನೆ ಸಲ್ಲಿಸಿ ಪೂಜಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts