More

    ಹಿಂದುಪರ ಸಂಘಟನೆ ಪ್ರತಿಭಟನೆ

    ಸಕಲೇಶಪುರ: ಹಿಂದು ಮುಖಂಡರ ವಿರುದ್ಧ ಮನಬಂದಂತೆ ನಿಂದಿಸಿ, ಕೊಲೆ ಬೆದರಿಕೆ ಒಡ್ಡಿರುವ ದಲಿತ ನಾಯಕರನ್ನು ಕೊಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಹಿಂದುಪರ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು.

    ಎರಡು ದಿನಗಳ ಹಿಂದೆ ಪಟ್ಟಣದಲ್ಲಿ ಹಿಂದುಪರ ಸಂಘಟನೆ ಮುಖಂಡರ ವಿರುದ್ಧ ಪ್ರತಿಭಟನೆ ನಡೆಸಿದ ವಿವಿಧ ದಲಿತ ಹಾಗೂ ಮುಸ್ಲಿಂ ಸಂಘಟನೆಯ ಮುಖಂಡರು ಹಿಂದು ಸಂಘಟನೆಯ ಮುಖಂಡರ ವಿರುದ್ಧ ಮನಬಂದಂತೆ ನಿಂದಿಸಿದ್ದಾರೆ. ದಲಿತರ ಹೆಸರಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮುಸ್ಲಿಂ ಮುಖಂಡರು ಪರೋಕ್ಷ ನೆರವು ನೀಡಿದ್ದಾರೆ. ಈ ಮೂಲಕ ಗೋವುಗಳ ವಧೆಗೆ ಅಮಾಯಕ ದಲಿತರನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಶಾಂತಿ ಎಂಬುದು ಕಣ್ಮರೆಯಾಗುತ್ತಿದೆ. ಹಿಂದುಪರ ಸಂಘಟನೆಗಳು ಜಾತಿ ತಾರತಮ್ಯ ನೀತಿ ಅನುಸರಿಸುತ್ತಿಲ್ಲ. ನಮ್ಮ ಸಂಘಟನೆಯಲ್ಲಿ ದಲಿತರು ಸೇರಿದಂತೆ ಎಲ್ಲ ಜಾತಿ ಜನಾಂಗದವರಿದ್ದು, ಹಿಂದು ಸಂಸ್ಕೃತಿ ಎತ್ತಿಹಿಡಿಯುವ ನಿಟ್ಟಿನಲ್ಲಿ ಮಾತ್ರ ಕೆಲಸ ಮಾಡಲಾಗುತ್ತಿದೆ. ಆದರೆ, ಕೆಲವು ಕಾಣದ ಕೈಗಳು ಹಿಂದು ಸಮಾಜ ಇಬ್ಭಾಗಕ್ಕೆ ಪ್ರಯತ್ನಿಸುತ್ತಿದ್ದು, ಇದಕ್ಕೆ ಕೆಲವು ಪಟ್ಟಭದ್ರ ದಲಿತ ನಾಯಕರು ಸಹಕರಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತರು ದೂರಿದರು.

    ಸಾಕುವ ಜಾನುವಾರುಗಳನ್ನು ಎಂದಿಗೂ ಕಾಲುಗಳನ್ನು ಕಟ್ಟಿ ವಾಹನದಲ್ಲಿ ಕೊಂಡೊಯ್ಯುವುದಿಲ್ಲ. ಅಮಾನುಷವಾಗಿ ಕರುವೊಂದನ್ನು ಕೊಂಡೊಯ್ಯುತ್ತಿರುವುದನ್ನು ಪ್ರಶ್ನಿಸಿದ್ದನ್ನೇ ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಕೆಲವು ಗೋಕಳ್ಳರು ದಲಿತರನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡ ಬೈಕೆರೆ ದೇವರಾಜ್‌ನಂತಹವರು ಬಜರಂಗದಳದ ದಕ್ಷಿಣ ಪ್ರಾಂತ ಸರಸಂಚಾಲಕ ರಘು ಎಂಬುವವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದರು.

    ಕೊಲೆ ಬೆದರಿಕೆ ಒಡ್ಡಿರುವ ದಲಿತ ಮುಖಂಡರನ್ನು ಬಂಧಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ಹಳೇಬಸ್ ನಿಲ್ದಾಣದಲ್ಲಿ ಸಭೆ ನಡೆಸಿ, ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ತೆರಳಿ ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ್ ಸಂಘಿ,ಬಾಳ್ಳುಮಲ್ಲಿಕಾರ್ಜುನ್, ಬಿಜೆಪಿ ಯುವ ಘಟಕದ ಅಧ್ಯಕ್ಷ ಜಿತೇಂದ್ರ, ಕೆಂಪೇಗೌಡ ಯುವ ಸೇನೆ ಜಿಲ್ಲಾಧ್ಯಕ್ಷ ಉಮೇಶ್, ತಾಲೂಕು ಅಧ್ಯಕ್ಷ ಸಚ್ಚಿನ್, ಸಂಘಟನೆಯ ಮುಖಂಡರಾದ ಶಿವು, ಅಗ್ರಹಾರ ರಮೇಶ್, ಹೆತ್ತೂರು ವಿಜಯಕುಮಾರ್, ಬಾಳೆಗದ್ದೆ ವಿಜಯ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts