More

    ಹಿಂಗಾರು ಬಿತ್ತನೆಗೂ ಅಡ್ಡಿಯಾದ ಮಳೆರಾಯ

    ಹುಬ್ಬಳ್ಳಿ: ಅತಿವೃಷ್ಟಿ ಹಾಗೂ ನೆರೆಗೆ ಬಹುತೇಕ ಮುಂಗಾರು ಹಂಗಾಮದ ಬೆಳೆಗಳು ಕೊಚ್ಚಿಕೊಂಡು ಹೋದ ತರುವಾಯ ಇದೀಗ ಹಿಂಗಾರು ಹಂಗಾಮಿಗೂ ಮಳೆರಾಯ ಅಡ್ಡಿಯಾಗುತ್ತಿದ್ದಾನೆ.

    ಕಳೆದ ಎರಡು ವಾರಗಳಿಂದ ಆಗಾಗ ಸುರಿಯುತ್ತಲೇ ಇರುವ ಮಳೆಯಿಂದ ಹಿಂಗಾರು ಹಂಗಾಮಿನ ಬಿತ್ತನೆಗೆ ತೊಂದರೆಯಾಗಿದೆ. ಕನಿಷ್ಠ ಪಕ್ಷ ಜಮೀನು ಸ್ವಚ್ಛ ಮಾಡಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಇದರಿಂದ ಹಿಂಗಾರು ಬಿತ್ತನೆ ಒಂದು ತಿಂಗಳು ಮುಂದೆ ಹೋಗುವ ಸಾಧ್ಯತೆ ಇದೆ.

    ಪ್ರತಿ ವರ್ಷ ಅಕ್ಟೋಬರ್ ಮೊದಲ ವಾರ ಹಿಂಗಾರು ಬಿತ್ತನೆ ಆರಂಭವಾಗಿ ಒಂದು ಇಲ್ಲವೇ ಎರಡು ವಾರದಲ್ಲಿ ಮುಗಿಯುತ್ತಿತ್ತು. ಆದರೆ, ಇದೀಗ ಅಕ್ಟೋಬರ್ ಕೊನೇ ವಾರ ಬಂದರೂ ಬಿತ್ತನೆ ಆರಂಭವಾಗಿಲ್ಲ. ಬಹುತೇಕ ನವೆಂಬರ್ ಮೊದಲ ವಾರದಲ್ಲಿ ಬಿತ್ತನೆಯಾಗುವ ನಿರೀಕ್ಷೆಯಲ್ಲಿ ಕೃಷಿ ಇಲಾಖೆ ಇದೆ.

    ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ಸುಮಾರು 2 ಲಕ್ಷ ಹೆಕ್ಟೇರ್ ಹಿಂಗಾರು ಬಿತ್ತನೆ ಗುರಿ ಇದೆ. ಹುಬ್ಬಳ್ಳಿ ತಾಲೂಕಿನಲ್ಲಿ ಅಂದಾಜು 23 ಸಾವಿರ ಹೆಕ್ಟೇರ್​ನಲ್ಲಿ ಬಿತ್ತನೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

    ಧಾರವಾಡ ಜಿಲ್ಲೆಯಲ್ಲಿ ಕಡಲೆ ಹಿಂಗಾರಿನ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಬಿತ್ತನೆ ಪ್ರದೇಶದಲ್ಲಿ ಕಡಲೆಗೆ ಅಗ್ರ ಸ್ಥಾನದ ನಿರೀಕ್ಷೆ ಇದೆ. ಈಗಾಗಲೇ ಬಿತ್ತನೆ ಬೀಜ ಸಂಗ್ರಹ ಮಾಡಿಕೊಂಡಿರುವ ರೈತರು ಹೊಲ ಸ್ವಚ್ಛತೆಯಲ್ಲಿ ತೊಡಗಿದ್ದಾರೆ.

    ಅತಿವೃಷ್ಟಿಯಿಂದಾಗಿ ಈ ವರ್ಷ ಹೆಚ್ಚು ಕಳೆ ಬೆಳೆದಿದೆ. ಇದೀಗ ಕೆಲವೆಡೆ ಮುಂಗಾರು ಬೆಳೆ ತೆಗೆದ ಹೊಲದಲ್ಲಿ ಕಳೆಯದ್ದೇ ಸಾಮ್ರಾಜ್ಯವಾಗಿದೆ. ಹಾಗಾಗಿ ಮಳೆ ನಿಂತು ಒಂದಿಷ್ಟು ಬಿಸಿಲು ಬಿದ್ದರೆ ಮಾತ್ರ ಸ್ವಚ್ಛತೆಗೆ ದಾರಿಯಾಗುತ್ತದೆ. ಇಲ್ಲದಿದ್ದರೆ ಇನ್ನಷ್ಟು ದಿನ ಬಿತ್ತನೆ ಮುಂದೂಡಬೇಕಾಗುತ್ತದೆ ಎನ್ನುತ್ತಾರೆ ರೈತರು.

    ಬೀಜ, ಗೊಬ್ಬರ ಸಂಗ್ರಹ: ಧಾರವಾಡ ಜಿಲ್ಲೆಯ ವಿವಿಧೆಡೆಯ ರೈತ ಸಂಪರ್ಕ ಕೇಂದ್ರ, ವಿವಿಧ ಗ್ರಾಮಗಳಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಗಳಲ್ಲಿ ಬೀಜ, ಗೊಬ್ಬರ ದಾಸ್ತಾನು ಮಾಡಲಾಗಿದೆ.

    ಕಡಲೆ, ಜೋಳ, ಕುಸುಬೆ, ಗೋದಿ, ಗೋವಿನ ಜೋಳ ಹಿಂಗಾರಿನ ಪ್ರಮುಖ ಬೆಳೆಗಳಾಗಿವೆ. ಒಂದು ವೇಳೆ ಹಿಂಗಾರು ಬಿತ್ತನೆ ಇನ್ನಷ್ಟು ವಿಳಂಬವಾದರೆ ಮುಂದೆ ಕಡಲೆ, ಜೋಳ ಸೇರಿ ಕೆಲ ಬೆಳೆಗಳಿಗೆ ರೋಗ ತಗಲುವ ಸಾಧ್ಯತೆ ಇರುತ್ತದೆ. ಮಳೆಗೆ ಸಿಲುಕಿದರೆ ಕಡಲೆ ಹುಳಿ ತೊಳೆದು ಇಳುವರಿ ಕಡಿಮೆಯಾಗುವ ಆತಂಕ ಇದೆ.

    ಶೀಗೆ ಹುಣ್ಣಿಮೆ ಚರಗ: ಪ್ರತಿ ವರ್ಷ ಶೀಗೆ ಹುಣ್ಣಿಮೆಗೆ ಹೊಲದಲ್ಲಿ ಭೂಮಿಪೂಜೆ ಮಾಡಿ ಭೂತಾಯಿಗೆ ಚರಗ ಚೆಲ್ಲಲಾಗುತ್ತದೆ. ಅಂದರೆ ಹಿಂಗಾರು ಬಿತ್ತನೆಯಾಗಿ ಕಡಲೆ, ಜೋಳ, ಕುಸುಬೆ ಸೇರಿ ಎಲ್ಲ ಬೆಳೆಗಳು ಹುಟ್ಟಿಕೊಂಡು ಚೋಟುದ್ದ ಕಾಣುವ ಸಮಯ ಅದಾಗಿರುತ್ತದೆ. ಈ ವರ್ಷ ಅ. 30ಕ್ಕೆ ಶೀಗೆ ಹುಣ್ಣಿಮೆ ಆಚರಿಸಲಾಗುತ್ತಿದೆ. ಆದರೆ, ಹಿಂಗಾರು ಬಿತ್ತನೆ ಮಾತ್ರ ಆಗಲೇ ಇಲ್ಲ. ರೈತರು ಖಾಲಿ ಹೊದಲ್ಲಿ ಚರಗ ಚೆಲ್ಲುವ ಅನಿವಾರ್ಯತೆ ಎದುರಾಗಿದೆ.

    ಗೇಣುದ್ದ ಬೆಳೆದ ಹಿಂಗಾರು ಬೆಳೆಗಳಲ್ಲಿ ಕಂಡು ಬರುವ ಕೀಡೆ, ಕೀಟ ಇತ್ಯಾದಿಗಳನ್ನು ಪಕ್ಷಿಗಳು ಆಯ್ದು ತಿಂದು ಬೆಳೆಗಳನ್ನು ರಕ್ಷಿಸುತ್ತವೆ. ಹೀಗೆ ಪಕ್ಷಿಗಳು ರೈತನ ಮಿತ್ರನಾಗಿ ಕೆಲಸ ಮಾಡುತ್ತವೆ. ಶೀಗೆ ಹುಣ್ಣಿಮೆಯಂದು ಚರಗ ಚೆಲ್ಲುವ ಸಂಪ್ರದಾಯದ ಮೂಲಕ ಪಕ್ಷಿಗಳನ್ನು ತಮ್ಮ ಹೊಲಕ್ಕೆ ಕರೆಯುವ ವೈಜ್ಞಾನಿಕ ಕ್ರಮ ಚರಗ ಚೆಲ್ಲುವಿಕೆ ಎನ್ನಲಾಗುತ್ತದೆ.

    ಶೀಗೆ ಹುಣ್ಣಿಮೆ ಸಂಪ್ರದಾಯದೊಂದಿಗೆ ರೈತರು ತಮ್ಮ ಹೊಲದ ಕೀಡೆ ನಿವಾರಣೆಯನ್ನು ವೈಜ್ಞಾನಿಕವಾಗಿಯೇ ಮಾಡಿದಂತಾಗುತ್ತದೆ. ಆದರೆ, ಈ ಬಾರಿ ಶೀಗೆ ಹುಣ್ಣಿಮೆ ಬದಲಾಗಿ ದೀಪಾವಳಿ ವೇಳೆಗೆ ಬಿತ್ತನೆ ಮುಗಿಯುವ ಸಾಧ್ಯತೆ ಇದೆ.

    ಹಿಂಗಾರು ಬಿತ್ತನೆಗೆ ಕೃಷಿ ಇಲಾಖೆ ಸಂಪೂರ್ಣ ತಯಾರಿ ಮಾಡಿಕೊಂಡಿದೆ. ಬೀಜ, ಗೊಬ್ಬರ ಎಲ್ಲ ಸಂಗ್ರಹವಾಗಿದೆ. ಕೆಲ ರೈತರು ಈಗಾಗಲೇ ಬೀಜ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಮಳೆ ಬಿಡುವು ನೀಡದಿರುವುದರಿಂದ ಈ ಬಾರಿ ಬಿತ್ತನೆ ವಿಳಂಬವಾಗಲಿದೆ. ನವೆಂಬರ್ ಮೊದಲ ವಾರ ಬಿತ್ತನೆ ಆರಂಭವಾಗುವ ಸಾಧ್ಯತೆ ಇದೆ.
    ರಾಜಶೇಖರ ಅಣಗೌಡರ, ಸಹಾಯಕ ಕೃಷಿ ನಿರ್ದೇಶಕ, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts