More

    ಹಿಂಗಾರಕ್ಕೆ ಹಿಂಕೊಳೆ ರೋಗ

    ಶಿರಸಿ: ಕಳೆದ ವರ್ಷ ಜಿಲ್ಲಾದ್ಯಂತ ಅಡಕೆ ಇಳುವರಿಯಲ್ಲಿ ಶೇಕಡ 25ರಷ್ಟು ಕುಂಠಿತಕ್ಕೆ ಕಾರಣವಾಗಿದ್ದ ಹಿಂಗಾರ ಹಿಂಕೊಳೆ (ಡೈಬ್ಯಾಕ್) ರೋಗ ಮತ್ತೆ ಆರಂಭವಾಗಿದ್ದು, ಅಡಕೆ ಬೆಳೆಗಾರ ಆತಂಕಕ್ಕೆ ಕಾರಣವಾಗಿದೆ.

    ಕಳೆದೆರಡು ವರ್ಷಗಳಲ್ಲಿ ಹೆಚ್ಚಾಗಿ ಕಂಡು ಬಂದಿರುವ ಡೈಬ್ಯಾಕ್ ರೋಗ ಈ ವರ್ಷ ಹಲವಾರು ಕಡೆಗಳಲ್ಲಿ ಕಂಡುಬಂದಿದೆ. ಇದು ಇಳುವರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ವಾತಾವರಣದಲ್ಲಿ ಬದಲಾವಣೆಯಿಂದ ರೋಗ ಉಲ್ಬಣಿಸುತ್ತಿದೆ. ರೋಗವು ಕೊಲ್ಲೆಟೋಟ್ರೈಕಮ್ ಎನ್ನುವ ಶಿಲೀಂದ್ರದಿಂದ ಬರುತ್ತಿದ್ದು, ಹೆಚ್ಚು ತೇವಾಂಶ ಮತ್ತು ಕಡಿಮೆ ಉಷ್ಣಾಂಶ ಇರುವ ವಾತಾವರಣ ಅನುಕೂಲಕರವಾಗಿ ಪರಿಣಮಿಸುತ್ತಿದೆ. ಪ್ರಸ್ತುತ ಬಹುತೇಕ ತೋಟಗಳಲ್ಲಿ ಹಿಂಗಾರ ಹೊರಹೊಮ್ಮಿದ್ದು, ಹಿಂಭಾಗದ ಹೂವುಗಳು ರೋಗಕ್ಕೆ ತುತ್ತಾಗುತ್ತಿವೆ. ರೋಗವು ಗಾಳಿಯ ಮುಖಾಂತರ ಹರಡುವುದರಿಂದ ವ್ಯಾಪಕವಾಗಿ ಹರಡುವ ಆತಂಕ ಎದುರಾಗಿದೆ.

    ಈ ಶಿಲೀಂದ್ರವು ಹಿಂಗಾರದ ತುದಿಯ ಗಂಡು ಹೂಗಳು ಉದುರಿದ ಭಾಗದಲ್ಲಿ ಸೇರಿ ಸೋಂಕು ಉಂಟು ಮಾಡುತ್ತಿವೆ. ಕ್ರಮೇಣ ಹಿಂಗಾರವು ತುದಿಯಿಂದ ಒಣಗುತ್ತಾ ಬಂದು, ಬಿಳಿ ಮುಗುಡುಗಳು ಉದುರಿ, ಹಿಂಗಾರವೇ ಸತ್ತು ಹೋಗುತ್ತದೆ. ಇದರ ಜತೆ ಕೆಲವು ತೋಟಗಳಲ್ಲಿ ಹಿಂಗಾರ ತಿನ್ನುವ ಹುಳುಗಳ ಸಮಸ್ಯೆಯಿದ್ದು, ಅಂತಹ ತೋಟಗಳಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಿದೆ.

    ಶಿರಸಿ ಭಾಗದಲ್ಲಿ ಅಕ್ಟೋಬರ್​ನಿಂದ ಜನವರಿವರೆಗೆ ಹೆಚ್ಚು ಹಿಂಗಾರ ಹೊರಡುವ ತೋಟಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ರೋಗ ಬಂದ ಮೇಲೆ ಬೇಸಿಗೆಯಲ್ಲಿ ಮಳೆ ಬಂದಲ್ಲಿ ಈ ಸಮಸ್ಯೆ ಇನ್ನಷ್ಟು ತೀವ್ರವಾಗುತ್ತದೆ. ಪ್ರತಿ ವರ್ಷ ಈ ರೋಗದಿಂದಾಗಿ ಶೇ.25ರಿಂದ ಶೇ.30ರಷ್ಟು ಇಳುವರಿ ಕುಂಠಿತವಾಗುತ್ತಿದೆ. ಸಂಬಂಧಪಟ್ಟ ವಿಜ್ಞಾನಿಗಳು ಶಾಶ್ವತವಾದ ಪರಿಹಾರ ಸೂಚಿಸಬೇಕು.| ಗಣಪತಿ ಆರೇರ ಅಡಕೆ ಬೆಳೆಗಾರ

    ಡೈಬ್ಯಾಕ್ ರೋಗದ ನಿಯಂತ್ರಣಕ್ಕೆ ಕಾರ್ಬೆಂಡೆಂಜಿಮ್ ಮತ್ತು ಮ್ಯಾಂಕೋಜೆಬ್ ಮಿಶ್ರಣವಿರುವ ಶಿಲೀಂದ್ರನಾಶಕವನ್ನು 2.5ಗ್ರಾಂ ಪ್ರತಿ ಲೀಟರ್ ನೀರಿಗೆ ಸೇರಿಸಿ ಹಿಂಗಾರಕ್ಕೆ ಸಿಂಪಡಿಸಬೇಕು. ಹಿಂಗಾರ ತಿನ್ನುವ ಕಂಬಳಿ ಹುಳು ಸಮಸ್ಯೆ ಇದ್ದರೆ ಮಾತ್ರ ಕಾರ್ಬೆಂಡೆಂಜಿಮ್ ಮತ್ತು ಮ್ಯಾಂಕೋಜೆಬ್ ಮಿಶ್ರಣಕ್ಕೆ ಇಮಿಡಾಕ್ಲೋಪ್ರಿಡ್ 0.3ಮಿಲೀ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಿಸಬೇಕು. ಒಂದು ತಿಂಗಳ ನಂತರ ಅವಶ್ಯವಿದ್ದಲ್ಲಿ ಇನ್ನೊಮ್ಮೆ ಸಿಂಪಡಿಸಬೇಕು. | ವಿ.ಎಂ. ಹೆಗಡೆ ತೋಟಗಾರಿಕೆ ಇಲಾಖೆ ಹಾರ್ಟಿ ಕ್ಲೀನಿಕ್ ತಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts