More

    ಹಾವೇರಿ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಸಾಂಕ್ರಾಮಿಕ ರೋಗ ಭೀತಿ

    ಪರಶುರಾಮ ಕೆರಿ ಹಾವೇರಿ

    ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ, ತಂಪು ವಾತಾವರಣದ ಜತೆಗೆ ಸಾಂಕ್ರಾಮಿಕ ರೋಗಗಳ ಹಾವಳಿಯೂ ಹೆಚ್ಚಾಗುತ್ತಿದೆ. ಬೇಸಿಗೆ ಬಿಸಿಲಿನ ತಾಪಮಾನದ ಬಳಿಕ ಆರಂಭಗೊಂಡಿರುವ ಮಳೆ ಅಬ್ಬರದಿಂದ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ನಿಧಾನವಾಗಿ ಉಲ್ಬಣಿಸುತ್ತಿವೆ.

    ಸತತ ಮಳೆಯಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ನಗರ ಪ್ರದೇಶವಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ. ದಿನೇದಿನೆ ಶಂಕಿತ ಡೆಂಘೆ, ಚಿಕೂನ್​ಗುನ್ಯಾ ಪ್ರಕರಣಗಳು ಹೆಚ್ಚುತ್ತಿವೆ. ಜಿಲ್ಲೆಯಲ್ಲಿ 2021ರಲ್ಲಿ 131 ಶಂಕಿತ ಡೆಂಘೆ ಪ್ರಕರಣಗಳಿದ್ದವು. ಇದರಲ್ಲಿ 34 ಪ್ರಕರಣಗಳು ಖಚಿತಗೊಂಡಿದ್ದವು. ಚಿಕೂನ್​ಗುನ್ಯಾ 61 ಶಂಕಿತವಿದ್ದರೆ, 10 ಪ್ರಕರಣಗಳು ಖಚಿತವಾಗಿದ್ದವು. 2022ರ ಜೂನ್ ಅಂತ್ಯದವರೆಗೆ 445 ಶಂಕಿತ ಡೆಂಘೆ ಪ್ರಕರಣಗಳು ಕಾಣಿಸಿಕೊಂಡಿವೆ. ಇದರಲ್ಲಿ 50 ಪ್ರಕರಣಗಳು ಖಚಿತಗೊಂಡಿವೆ. ಚಿಕೂನ್​ಗುನ್ಯಾ 353 ಶಂಕಿತವಿದ್ದರೆ 9 ಪ್ರಕರಣಗಳು ಖಚಿತಗೊಂಡಿವೆ. 1 ಮಲೇರಿಯಾ ಪ್ರಕರಣ ಪತ್ತೆಯಾಗಿದೆ. ಮಳೆಗಾಲ ಆರಂಭವಾದ ಜೂನ್ ಒಂದೇ ತಿಂಗಳಲ್ಲಿಯೇ 164 ಜನರಲ್ಲಿ ಡೆಂಘ, 158 ಜನರಲ್ಲಿ ಚಿಕೂನ್​ಗುನ್ಯಾ ಶಂಕಿತ ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಜೂನ್ ತಿಂಗಳಲ್ಲಿಯೇ 25 ಡೆಂಘೆ, 3 ಚಿಕೂನ್​ಗುನ್ಯಾ ಪ್ರಕರಣಗಳು ಖಚಿತಗೊಂಡಿವೆ.

    ಈಗಾಗಲೇ ಗ್ರಾಮೀಣ ಭಾಗದಲ್ಲಿ ಜ್ವರದ ಕಾಟ ಶುರುವಾಗಿದ್ದು, ಮೈ-ಕೈ ನೋವಿನ ಬಾಧೆಯಿಂದ ಬಳಲುತ್ತಿರುವ ಹಳ್ಳಿಗರನ್ನು ಸಾಂಕ್ರಾಮಿಕ ರೋಗಗಳು ಪೀಡಿಸುತ್ತಿವೆ. ಜುಲೈನ ಮೊದಲ 15 ದಿನಗಳಲ್ಲೇ ಡೆಂಘ, ಚಿಕೂನ್​ಗುನ್ಯಾ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿ ದುಪ್ಪಟ್ಟಾಗಿದ್ದು, ಮಕ್ಕಳಲ್ಲೂ ಜ್ವರ, ವಾಂತಿ-ಬೇಧಿ ಕಂಡು ಬರುತ್ತಿದೆ.

    5 ಜನರಲ್ಲಿ ಮಲೇರಿಯಾ: 2021ರ ಡಿಸೆಂಬರ್ ಅಂತ್ಯಕ್ಕೆ ನಾಲ್ವರು, ಬ್ಯಾಡಗಿ, ಶಿಗ್ಗಾಂವಿ, ಸವಣೂರ, ಹಾನಗಲ್ಲ ತಾಲೂಕಿನಲ್ಲಿ ತಲಾ ಒಬ್ಬರಿಗೆ ಹಾಗೂ 2022ರಲ್ಲಿ ಹಿರೇಕೆರೂರ ತಾಲೂಕಿನಲ್ಲಿ ಒಬ್ಬರಿಗೆ ಮಲೇರಿಯಾ ಕಾಣಿಸಿಕೊಂಡಿದೆ.

    ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಕಾರ್ಯಕರ್ತರು ಮನೆಮನೆಗೆ ಲಾರ್ವಾ ಸಮೀಕ್ಷೆ ಕೈಗೊಳ್ಳುತ್ತಿದ್ದಾರೆ. ರೋಗವಾಹಕ ಸೊಳ್ಳೆಗಳು ಕಂಡಬಂದರೆ ಲಿಕ್ವಿಡ್ ಹಾಕಿ ನಾಶಪಡಿಸಲಾಗುತ್ತಿದೆ. ಒಂದೊಮ್ಮೆ ರೋಗಿ ಪತ್ತೆಯಾದರೆ ಆ ಏರಿಯಾದಲ್ಲಿ ಫಾಗಿಂಗ್ ಮಾಡಿಸಲಾಗುತ್ತಿದೆ. ನೀರನ್ನು ಹೆಚ್ಚಿನ ಅವಧಿಗೆ ಸಂಗ್ರಹಿಸದಂತೆ, ಪ್ರತಿದಿನ ಹೊಸ ನೀರನ್ನು ತುಂಬಲು ಸೂಚನೆ ನೀಡಲಾಗುತ್ತಿದೆ.

    | ಡಾ. ಪ್ರಭಾಕರ ಕುಂದೂರ, ಜಿಲ್ಲಾ ರೋಗವಾಹಕ, ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts