More

    ಹಾಲು ಖರೀದಿ ದರ ಕಡಿತ ಬೇಡ

    ಕೋಲಾರ: ಹಾಲು ಉತ್ಪಾದಕರಿಗೆ ನೀಡುವ ಹಾಲಿನ ಬೆಲೆ ಕಡಿತ ಮಾಡಿರುವ ಆದೇಶ ವಾಪಸ್ ಪಡೆಯಬೇಕು ಹಾಗೂ ಪಶು ಆಹಾರ ಬೆಲೆ ಕಡಿಮೆ ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮುಖಂಡರು ಕೋಚಿಮುಲ್ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

    ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಮಾತನಾಡಿ, ಜಿಲ್ಲೆಯ ರೈತರು ಕೃಷಿ, ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದಾರೆ. ದೇಶದಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯಲು ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಕೃಷಿ ಉತ್ಪನ್ನಗಳಿಗೆ ಬೆಲೆ ಇಲ್ಲದೆ ನಷ್ಟಕ್ಕೆ ಒಳಗಾಗಿದ್ದರು. ಈ ಸಮಯದಲ್ಲಿ ಜಿಲ್ಲೆಯ ರೈತರ ಜೀವನ ನಿರ್ವಹಣೆಗೆ ಅನುಕೂಲವಾಗಿದ್ದು ಹೈನುಗಾರಿಕೆ ಮಾತ್ರ. ಹೀಗಿರುವಾಗ ಕೋಚಿಮುಲ್ ರೈತರಿಗೆ ನೀಡುತ್ತಿದ್ದ ಹಾಲಿನ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 4 ರೂ. ಕಡಿತ ಮಾಡಿರುವುದರಿಂದ ಉತ್ಪಾದಕರಿಗೆ ನಷ್ಟವಾಗುತ್ತಿದೆ. ಹಾಲು ಖರೀದಿ ದರ ಹೆಚ್ಚಿಸುವ ಮೂಲಕ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.

    ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ಮಾತನಾಡಿ, ಒಂದು ಲೀಟರ್ ಹಾಲು ಉತ್ಪಾದನೆ ಮಾಡಲು ಸರ್ಕಾರದ ವರದಿಯಂತೆ 36 ರೂ. ಆಗುತ್ತದೆ. ಹಾಲು ಉತ್ಪಾದಕರಿಗೆ ಒಂದು ಲೀಟರ್‌ಗೆ ಒಕ್ಕೂಟ 28 ರೂ.ಗಳನ್ನು ಸರ್ಕಾರದ ಸಹಾಯಧನ 5 ರೂ. ನೀಡಲಾಗುತ್ತಿತ್ತು. ಆಗಲೂ ಉತ್ಪಾದನಾ ವೆಚ್ಚ ಬರುತ್ತಿರಲಿಲ್ಲ. ಈಗ ಹಾಲು ಒಕ್ಕೂಟಕ್ಕೆ ನಷ್ಟವಾಗುತ್ತದೆ ಎಂಬ ಕಾರಣ ನೀಡಿ ಏಕಾಏಕಿ 4 ರೂ. ಕಡಿತ ಮಾಡಿದ್ದು, ಪಶು ಆಹಾರದ ಬೆಲೆ ಮಾತ್ರ ಹಾಗೇ ಉಳಿಸಲಾಗಿದೆ ಎಂದು ಟೀಕಿಸಿದರು
    ಹಾಲು ಮಾರಾಟದ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಳ್ಳುವ ಜವಾಬ್ದಾರಿ ಒಕ್ಕೂಟದ್ದೇ ವಿನಾ ರೈತರದ್ದಲ್ಲ. ಒಕ್ಕೂಟವು ಮಾರುಕಟ್ಟೆ ವಿಸ್ತರಿಸಿಕೊಳ್ಳಬೇಕು, ಪಶು ಆಹಾರದ ಬೆಲೆ ಕಡಿಮೆ ಮಾಡಬೇಕು ಎಂದು ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಚ್.ವಿ. ತಿಪ್ಪಾರೆಡ್ಡಿಗೆ ಮನವಿ ಸಲ್ಲಿಸಿದರು.

    ಉಪಾಧ್ಯಕ್ಷ ಬೈರರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಕಾನೂನು ಸಲಹೆಗಾರ ಸತೀಶ್, ಮುಖಂಡರಾದ ಹೊಳಲಿ ಹೊಸೂರು ಚಂದ್ರಪ್ಪ, ಮತೀನ್ ಅಹಮದ್, ಕೋಲಾರ ತಾಲೂಕು ಅಧ್ಯಕ್ಷ ದಿನ್ನೆಹೊಸಹಳ್ಳಿ ರಮೇಶ್, ಶ್ರೀನಿವಾಸಪುರ ಅಧ್ಯಕ್ಷ ಶ್ರೀರಾಮರೆಡ್ಡಿ, ಮುಳಬಾಗಿಲು ಅಧ್ಯಕ್ಷ ಪಿ.ಎಸ್.ಗಂಗಾಧರ್, ಮಾಲೂರು ಅಧ್ಯಕ್ಷ ನರಸಿಂಹಯ್ಯ, ಜಿಲ್ಲಾ ಕಾರ್ಯದರ್ಶಿ ರವಿ, ಉಪಾಧ್ಯಕ್ಷ ಲಕ್ಷ್ಮಣ್, ಚಿನ್ನರಾಜು ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts