More

    ಹಾರೋಗೊಪ್ಪದಲ್ಲಿ ಕುಡಿಯುವ ನೀರಿಗೆ ತತ್ವಾರ…!

    ರಾಣೆಬೆನ್ನೂರ: ತಾಲೂಕಿನ ಬಿಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಹಾರೋಗೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರ ಶುರುವಾಗಿದ್ದು, ಗ್ರಾಮಸ್ಥರು ಪ್ರತಿದಿನ ಕೊಡ ಹಿಡಿದು ನೀರಿಗಾಗಿ ಕಾಯುವ ಪರಿಸ್ಥಿತಿ ನಿರ್ವಣವಾಗಿದೆ.

    ಗ್ರಾಮದಲ್ಲಿ 2 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಕುಡಿಯಲು ತುಂಗಭದ್ರಾ ನದಿಪಾತ್ರದ ಬೈರಂಪಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಸರಬರಾಜು ಮಾಡಲಾಗುತ್ತಿದೆ. ನಿತ್ಯ ಬಳಕೆಗಾಗಿ ಎಂಟು ಕಡೆಗಳಲ್ಲಿ ಬೋರ್​ವೆಲ್​ಗಳನ್ನು ಕೊರೆಯಿಸಲಾಗಿದೆ. ಆದರೆ ಅವುಗಳಲ್ಲಿ ನಾಲ್ಕು ಬೋರ್​ವೆಲ್​ಗಳು ಬತ್ತಿ ಹೋಗಿವೆ. ಇನ್ನುಳಿದ ನಾಲ್ಕು ಬೋರ್​ವೆಲ್​ಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಇದು ಸಾಲುತ್ತಿಲ್ಲ.

    ಈ ಹಿಂದೆ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಇದೀಗ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಕಾರಣ ಐದಾರು ದಿನಕ್ಕೊಮ್ಮೆ ನೀರು ಬರುತ್ತಿದೆ. ಗ್ರಾಮದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಸೂಕ್ತ ಪ್ರಮಾಣದಲ್ಲಿ ಶುದ್ಧ ನೀರು ಸಿಗುತ್ತಿಲ್ಲ. ವಿದ್ಯುತ್ ಕೈಕೊಟ್ಟರೇ ಶುದ್ಧ ಕುಡಿಯುವ ನೀರು ಕನಸಿನ ಮಾತು ಎನ್ನುವಂತಾಗಿದೆ.

    ಗ್ರಾಮದಲ್ಲಿ ಬಹುತೇಕರು ಕೃಷಿ ಮಾಡಿಕೊಂಡಿದ್ದು, ಜಾನುವಾರುಗಳನ್ನು ಸಾಕಿಕೊಂಡಿದ್ದಾರೆ. ಇದೀಗ ಜಾನುವಾರುಗಳಿಗೂ ನೀರು ಕುಡಿಸಲು ಆಗದ ಪರಿಸ್ಥಿತಿಯಿದೆ. ಗ್ರಾಮದ ಬೋರ್​ವೆಲ್​ಗಳಲ್ಲಿ ನೀರು ದೊರಕದ ಕಾರಣ ಅಕ್ಕಪಕ್ಕದ ಜಮೀನುಗಳಿಗೆ ನೀರಿನ ಗಾಡಿ ತಳ್ಳಿಕೊಂಡು ತರುತ್ತಿದ್ದೇವೆ. ನೀರಿನ ಸಮಸ್ಯೆ ಕುರಿತು ಗ್ರಾಪಂ ಪಿಡಿಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಗ್ರಾಪಂ ಎದುರು ಧರಣಿ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

    ಗ್ರಾಮದಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದೆ. ನಾಲ್ಕೈದು ದಿನಕ್ಕೊಮ್ಮೆ ಬರುವ ನೀರಿಗಾಗಿ ಕಾಯ್ದು ಕುಳಿತುಕೊಳ್ಳಬೇಕು. ಇಲ್ಲವಾದರೆ ವಾರವಿಡಿ ನೀರು ಸಿಗುವುದಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಟ್ಯಾಂಕರ್ ಮೂಲಕ ದಿನಕ್ಕೊಂದು ಬಾರಿ ನೀರು ಪೂರೈಸಬೇಕು.
    | ಹನುಮಂತಪ್ಪ ಕೆ., ಗ್ರಾಮಸ್ಥ


    ಹಾರೋಗೊಪ್ಪ ಗ್ರಾಮದಲ್ಲಿ ನೀರಿನ ಸಮಸ್ಯೆ ಆಗಿರುವ ಕುರಿತು ಪರಿಶೀಲಿಸಲಾಗುವುದು. ಗ್ರಾಪಂ ಪಿಡಿಒಗೆ ಸೂಚಿಸಿ, ಸಮರ್ಪಕವಾಗಿ ನೀರು ಪೂರೈಸಲು ತಿಳಿಸಲಾಗುವುದು. ಅಗತ್ಯ ಬಿದ್ದರೆ ಟ್ಯಾಂಕರ್ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು.
    | ಎಸ್.ಎಂ. ಕಾಂಬಳೆ, ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts