More

    ಹಾನಿಗೀಡಾದ ಮೆಕ್ಕೆಜೋಳಕ್ಕೆ ಪರಿಹಾರ ಕೊಡಿ

    ದಾವಣಗೆರೆ: ಜಿಲ್ಲೆಯಲ್ಲಿ ಮಳೆಯಿಂದಾಗಿ ಸಂಪೂರ್ಣ ಹಾನಿಗೀಡಾದ ಮೆಕ್ಕಜೋಳಕ್ಕೆ ಫಸಲ್ ಬಿಮಾ ಯೋಜನೆಯಡಿ ಪರಿಹಾರ ನೀಡುವಂತೆ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
    ಬುಧವಾರ ತಾಲ್ಲೂಕಿನ ಹುಚ್ಚವ್ವನಹಳ್ಳಿಯ ರೈತ ಎಚ್.ಎನ್.ಮೂರ್ತಿ ಸೇರಿ ಹಲವು ರೈತರ ಜಮೀನುಗಳಲ್ಲಿ ಮಳೆಯಿಂದ ಆಗಿರುವ ಬೆಳೆಹಾನಿ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
    ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1 ಲಕ್ಷದ 12 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, 15 ದಿನಗಳಿಂದ ನಿರಂತರ ಸುರಿದ ಮಳೆಯಿಂದ 1 ಲಕ್ಷಕ್ಕೂ ಅಧಿಕ ಪ್ರದೇಶದಲ್ಲಿ ಬೆಳೆ ಸಂಪೂರ್ಣ ಹಾನಿಯಾಗಿದೆ ಎಂದು ಅವರು ಹೇಳಿದರು.
    ಗೇಣುದ್ದ ಬೆಳೆದಿದ್ದ ಮೆಕ್ಕಜೋಳ ಸಂಪೂರ್ಣ ಕೊಳೆತು ಹೋಗಿದೆ. ದಾವಣಗೆರೆ ತಾಲ್ಲೂಕು ಒಂದರಲ್ಲಿಯೇ 29 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಕೊಳೆತುಹೋಗಿದೆ. ಎಷ್ಟೆ ಗೊಬ್ಬರ, ಔಷಧ ಸಿಂಪಡಿಸಿದರೂ ಪ್ರಯೋಜನವಾಗುವುದಿಲ್ಲ. ಅಧಿಕಾರಿಗಳನ್ನು ಕೇಳಿದರೆ ಇದು ಎನ್ಡಿಆರ್ ಎಫ್ ನಿಯಮಕ್ಕೆ ಅನ್ವಯಿಸುವುದಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ನಮಗೆ ಅದರ ಬದಲು ಫಸಲ್ ಬಿಮಾ ಯೋಜನೆಯಡಿ ವಿಮಾ ಕಂತು ತುಂಬಿದ್ದ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದರು.
    ಫಸಲ್ ಬಿಮಾ ಯೋಜನೆ ಕಂತು ತುಂಬಲು ಜು.೩೧ ಕಡೆ ದಿನಾಂಕ ನಿಗದಿ ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ ಹೊಲದಲ್ಲಿ ಕೊಳೆತು ಹೋದ ಬೆಳೆಯನ್ನು ಹಾಗಯೇ ಬಿಟ್ಟುಕೊಂಡು ಇರಬೇಕಾ? ವಿಮಾ ಸಂಸ್ಥೆಯ ಅಧಿಕಾರಿಗಳ ಸ್ಥಳ ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡುವುದು, ರೈತರಿಗೆ ಪರಿಹಾರ ದೊರಕುವುದು ಯಾವಾಗ. ಕೂಡಲೆ ವಿಮಾ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಮಂಜುನಾಥ್ ಒತತಾಯಿಸಿದರು.
    ಬೆಳೆ ನಷ್ಟ ಪರಿಹಾರಕ್ಕಾಗಿ ಸಿಎಂ 500 ಕೋಟಿ ರೂ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಇದುವರೆಗೂ ಯಾವ ಅಧಿಕಾರಿಯೂ ಸಮೀಕ್ಷೆಗೆ ಬಂದಿಲ್ಲ. 31 ರ ನಂತರ ಸಹಾಯವಾಣಿ ನಂಬರ್ ಬರುತ್ತದೆ ಅದಕ್ಕೆ ಕರೆ ಮಾಡಿ ದೂರು ದಾಖಲಿಸಿದವರಿಗೆ ಪರಿಹಾರ ನೀಡುತ್ತೇವೆ ಎನ್ನುವುದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
    ಕೂಡಲೇ ನಷ್ಟದ ಸಮೀಕ್ಷೆ ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಮಂಜುನಾಥ್ ಎಚ್ಚರಿಕೆ ನೀಡಿದರು.
    ಹುಚ್ಚವ್ವನಹಳ್ಳಿ ಗ್ರಾಪಂ ಅಧ್ಯಕ್ಷ ವಿ.ಸಿ.ಗಣೇಶ್, ಸದಸ್ಯೆ ಲತಾ, ರಜಾಕ್, ಎಂ.ಎಚ್.ಸಿದ್ದಪ್ಪ ನಾಯಕ, ಗೊಲ್ಲರ ರಂಗಣ್ಣ, ಕೆ.ಜಿ.ಸತೀಶ್, ಟೈಲರ್ ತಿಮ್ಮೇಶ್ , ಗ್ರಾಮಸ್ಥರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts