More

    ಹಾದಿ ತಪ್ಪಿಸುತ್ತವೆ ನಾಮಫಲಕ

    ರಾಜೇಂದ್ರ ಶಿಂಗನಮನೆ ಶಿರಸಿ

    ದಾರಿ ತೋರಿಸುವ ನಾಮಫಲಕಗಳೇ ದಿಕ್ಕು ತಪ್ಪಿಸಿದರೆ ಹೇಗೆ? ಇಂತಹ ಅವಾಂತರಕ್ಕೆ ನಗರದ ರಸ್ತೆಗಳು ಸಾಕ್ಷಿಯಾಗಿವೆ. ನಗರಾಡಳಿತದ ನಿರ್ಲಕ್ಷಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ನಗರಸಭೆಯ ನಗರೋತ್ಥಾನ ಯೋಜನೆಯಡಿ ನಗರದಲ್ಲೆಡೆ ಇತ್ತೀಚೆಗೆ ಲಕ್ಷಾಂತರ ರೂ. ವೆಚ್ಚದಲ್ಲಿ ಹೊಸ ನಾಮಫಲಕಗಳನ್ನು ಅಳವಡಿಸಲಾಗುತ್ತಿದೆ. ಆದರೆ, ಈ ಮಾರ್ಗಸೂಚಿಗಳೇ ಇದೀಗ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿವೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಇಂಥ ಪ್ರಮಾದ ನಡೆದಿದ್ದು, ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾದಂತಾಗಿದೆ.

    ಗೊಂದಲ ಸೃಷ್ಟಿ: ನಗರದ ಮರಾಠಿಕೊಪ್ಪ ವೃತ್ತ, ಗಣೇಶನಗರ, ರಾಮನಬೈಲ್, ಭಾಸ್ಕರ್ ವೃತ್ತ, ಲಯನ್ಸ್ ವೃತ್ತ ಸೇರಿದಂತೆ ಬಹುತೇಕ ಕಡೆ ಅಳವಡಿಸಿದ ಫಲಕಗಳು ತಪ್ಪು ಮಾಹಿತಿ ನೀಡುತ್ತಿವೆ. ಗಣೇಶನಗರದಲ್ಲಿ ಅಳವಡಿಸಿದ ನಾಮಫಲಕದಲ್ಲಿ ‘ಶಾಲೆ ಹಿಂದುಗಡೆ ಹೈಸ್ಕೂಲ್ ರಸ್ತೆ’, ‘ಶಾಲೆ ಹಿಂದುಗಡೆ ಚೌಡೇಶ್ವರಿ ದೇವಾಲಯಕ್ಕೆ ಹೋಗುವ ರಸ್ತೆ’ ಎಂದು ಬರೆಯಲಾಗಿದೆ. ಮರಾಠಿಕೊಪ್ಪ ವೃತ್ತಕ್ಕೆ ‘ಮಹಾಸತಿ ವೃತ್ತ’, ‘ರೇಷನ್ ಅಂಗಡಿಗೆ ಹೋಗುವ ರಸ್ತೆ’ ಎಂಬ ಹೆಸರು ಬರೆಯಲಾಗಿದೆ. ಅಲ್ಲದೆ, ರಾಮನಬೈಲ್ ಭಾಗದಲ್ಲಿ ಅಳವಡಿಸಿದ 20 ನಾಮಫಲಕಗಳಲ್ಲಿ ಬೇರೆ ಯಾವುದೇ ಕಾಲನಿಗಳ ಹೆಸರು ಹಾಕದೇ ಶ್ರೀರಾಮ ಕಾಲನಿ ಎಂದಷ್ಟೇ ನಮೂದಿಸಲಾಗಿದೆ. ಇಂತಹ ಗೊಂದಲ ಸೃಷ್ಟಿಸುವ ನಾಮಫಲಕಗಳು ನಗರದೆಲ್ಲೆಡೆ ರಾರಾಜಿಸುತ್ತಿವೆ.

    600 ನಾಮಫಲಕಗಳು: ನಗರೋತ್ಥಾನ ಕಾಮಗಾರಿ ಗುತ್ತಿಗೆದಾರರಿಗೆ ನಗರದ ಪ್ರಮುಖ ರಸ್ತೆ, ವೃತ್ತ, ಅಡ್ಡ ರಸ್ತೆಗಳಿಗೆ ನಾಮಫಲಕ ಅಳವಡಿಸುವ ಜವಾಬ್ದಾರಿ ನೀಡಲಾಗಿದೆ. 600 ನಾಮಫಲಕಗಳ ಜೋಡಣೆಗೆ ಅಂದಾಜು 50 ಲಕ್ಷ ರೂ.ಗಳ ಗುತ್ತಿಗೆ ನೀಡಲಾಗಿದೆ. ಈಗಾಗಲೇ 400ಕ್ಕೂ ಹೆಚ್ಚು ಫಲಕಗಳ ಜೋಡಣೆಯಾಗಿದೆ. ಅವುಗಳಲ್ಲಿ ಅಂದಾಜು 300ಕ್ಕೂ ಹೆಚ್ಚು ನಾಮಫಲಕಗಳು ಜನರಿಗೆ ದಾರಿ ತಪ್ಪಿಸುತ್ತಿವೆ. ಮುಖ್ಯ ರಸ್ತೆಗೆ ಅಡ್ಡ ರಸ್ತೆ, ಅಡ್ಡ ರಸ್ತೆಗೆ ಮುಖ್ಯ ರಸ್ತೆ ಎಂದು ಬರೆದಿರುವುದು ನಗೆಪಾಟಲಿಗೆ ಕಾರಣವಾಗಿದೆ.

    ಪ್ರಮಾದಕ್ಕೆ ಹೊಣೆ ಯಾರು? ಈ ಕುರಿತು ನಗರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರು ನಗರಸಭೆ ಸದಸ್ಯರು ಹಾಗೂ ಗುತ್ತಿಗೆದಾರರತ್ತ ಬೊಟ್ಟು ಮಾಡುತ್ತಾರೆ. ಆದರೆ, ಗುತ್ತಿಗೆದಾರರು ನಾವು ನಗರಾಡಳಿತ ನೀಡಿದ ಮಾಹಿತಿಯನ್ನೇ ಆಧರಿಸಿ ಫಲಕ ಸಿದ್ಧಪಡಿಸಿದ್ದಾಗಿ ಸಮಜಾಯಿಷಿ ನೀಡುತ್ತಾರೆ. ಇನ್ನು ನಗರಸಭೆ ಸದಸ್ಯರು, ನಗರದ ಮಾಹಿತಿಯನ್ನು ನಗರಸಭೆ ಅಧಿಕಾರಿಗಳು ತಿಳಿದಿರಬೇಕಿತ್ತು. ಜತೆಗೆ ಸದಸ್ಯರೆಲ್ಲರನ್ನು ಸಂರ್ಪಸಿ ಮಾಹಿತಿ ಪಡೆದು, ಪರಿಶೀಲಿಸಿ ಗುತ್ತಿಗೆದಾರರಿಗೆ ನೀಡಬೇಕಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಒಟ್ಟಾರೆ ಈ ಪ್ರಮಾದಕ್ಕೆ ಯಾರು ಹೊಣೆ ಎಂಬಂತಾಗಿದೆ.

    ನಗರದ ಪ್ರಮುಖ ವೃತ್ತಗಳ ಹೆಸರು ಸಂಪೂರ್ಣ ಬದಲಾಗಿದೆ. ಹೊರ ಪ್ರದೇಶಗಳಿಂದ ಬರುವ ಜನರಿಗೆ ಈ ನಾಮಫಲಕಗಳು ತಪ್ಪು ಮಾಹಿತಿ ನೀಡುತ್ತಿವೆ. ನಗರಾಡಳಿತದ ಅಧಿಕಾರಿಗಳು ಗುತ್ತಿಗೆದಾರರಿಗೆ ಸರಿಯಾದ ಮಾಹಿತಿ ನೀಡದ ಪರಿಣಾಮ ಇಂಥ ಅಧ್ವಾನವಾಗಿದೆ. ಈ ತಪ್ಪನ್ನು ತಕ್ಷಣ ಸರಿಪಡಿಸಬೇಕು. | ಗಣೇಶ ಎಚ್.ಎಂ. ನಗರ ನಿವಾಸಿ

    ನಗರ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ನೂತನವಾಗಿ ಅಳವಡಿಸಿದ ನಾಮಫಲಕಗಳು ಗೊಂದಲ ಮೂಡಿಸುವಂತಿದೆ. ಈ ಬಗ್ಗೆ ನಗರಾಡಳಿತ ಕ್ರಮ ವಹಿಸಬೇಕು. ಗೊಂದಲ ಮೂಡಿಸುವ ನಾಮಫಲಕಗಳನ್ನು ಬದಲಿಸಿ ಸರಿಯಾದ ನಾಮಫಲಕ ಅಳವಡಿಸುವ ಕಾರ್ಯವಾಗಬೇಕು. | ಪ್ರದೀಪ ಶೆಟ್ಟಿ ನಗರಸಭೆ ಸದಸ್ಯ

    *

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts