More

    ಹಾಥರಸ್ ಹತ್ಯೆ ಮುಚ್ಚಿ ಹಾಕಲು ಯತ್ನ

    ಶಿವಮೊಗ್ಗ: ಉತ್ತರ ಪ್ರದೇಶದ ಹಾಥರಸ್​ನಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆಪಾಧಿತರಿಗೆ ಕಠಿಣ ಶಿಕ್ಷೆ ವಿಧಿಸುವುದು ಹಾಗೂ ರಾತ್ರೋ ರಾತ್ರಿ ಸಂತ್ರೆಸ್ತೆಯ ಅಂತ್ಯಸಂಸ್ಕಾರ ನೆರವೇರಿಸಿದ ಮತ್ತು ಆಕೆಯ ಕುಟುಂಬವನ್ನು ಭೇಟಿ ಮಾಡದಂತೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರನ್ನು ತಡೆದ ಪೊಲೀಸರ ಕ್ರಮ ಖಂಡಿಸಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾದ್ಯಂತ ಪ್ರತಿಭಟನೆ ನಡೆಸಿದರು.

    ಶಿವಮೊಗ್ಗದ ಗಾಂಧಿ ಪಾರ್ಕ್, ಶಿಕಾರಿಪುರದ ತಾಲೂಕು ಕಚೇರಿ ಮುಂಭಾಗ, ಸಾಗರ, ಸೊರಬ, ತೀರ್ಥಹಳ್ಳಿ ಸೇರಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು, ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ವಿರುದ್ಧ ಕಿಡಿಕಾರಿದರು.

    ಯುವತಿ ಮೇಲೆ ದುಷ್ಕರ್ವಿುಗಳು, ಅತ್ಯಾಚಾರವೆಸಗಿ ಆನಂತರ ಹತ್ಯೆ ಮಾಡಿ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಕೃತ್ಯ ಖಂಡಿಸಿ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ತೆರಳುತ್ತಿದ್ದ ಎಐಸಿಸಿ ನಾಯಕರಾದ ರಾಹುಲ್​ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರನ್ನು ತಡೆದಿದ್ದಾರೆ. ಅಲ್ಲದೇ, ರಾಹುಲ್ ಗಾಂಧಿ ಅವರ ಕೊರಳಪಟ್ಟಿ ಹಿಡಿದು ನೆಲಕ್ಕೆ ಉರುಳಿಸಿದ್ದು, ಇದು ಜನಧ್ವನಿ ಧಮನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಉತ್ತರ ಪ್ರದೇಶದಲ್ಲಿ ದಲಿತ ಯುವತಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಕೂಡಲೇ ರಾಜಿನಾಮೆ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಆಗ್ರಹಿಸಿದರು.

    ಗಾಂಧಿ ಪಾರ್ಕ್​ನ ಗಾಂಧಿ ಪ್ರತಿಮೆ ಬಳಿ ಶಾಂತಿಯುತ ಪ್ರತಿಭಟನೆ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಹಾಥರಸ್ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ. ಅಲ್ಲಿರುವುದು ನೀಚ ಸರ್ಕಾರ. ದಲಿತ ಯುವತಿ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಆ ಸರ್ಕಾರ ಹೋಗಿರುವುದು ತೀರಾ ಖಂಡನೀಯ ಎಂದರು.

    ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಅತ್ಯಾಚಾರ, ಕೊಲೆ, ದರೋಡೆ ಮುಂತಾದ ಪ್ರಕರಣಗಳು ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಮೌನ ವಹಿಸಿದೆ. ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಇಡೀ ದೇಶದ ಜನರ ನೆಮ್ಮದಿಯನ್ನೇ ಹಾಳು ಮಾಡಿದೆ. ಸ್ತ್ರೀಯರಿಗೆ ಗೌರವ ಕೊಡುತ್ತೇವೆ ಎಂದು ಹೇಳುವ ಬಿಜೆಪಿ ಪಕ್ಷವೇ ಈ ರೀತಿ ಅನಾಚಾರವಾಗಿ ವರ್ತಿಸುತ್ತಿದೆ ಎಂದು ಟೀಕಿಸಿದರು.

    ಎಂಎಲ್​ಸಿ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಜಿಪಂ ಉಪಾಧ್ಯಕ್ಷೆ ವೇದಾ ವಿಜಯ್ಕುಮಾರ್, ಮುಖಂಡರಾದ ಕಲಗೋಡು ರತ್ನಾಕರ್, ವೈ.ಎಚ್.ನಾಗರಾಜ್, ಡಾ. ಶ್ರೀನಿವಾಸ್ ಕರಿಯಣ್ಣ, ವಿಶ್ವನಾಥ್ ಕಾಶಿ, ಎಚ್.ಸಿ.ಯೋಗೀಶ್, ಆರ್.ಸಿ.ನಾಯ್್ಕ ಯಮುನಾ ರಂಗೇಗೌಡ, ಮೆಹಖ್ ಷರೀಫ್, ಸಿ.ಎಸ್.ಚಂದ್ರಭೂಪಾಲ್, ಎಲ್.ರಾಮೇಗೌಡ, ಪಲ್ಲವಿ, ಡಿ.ಸಿ.ನಿರಂಜನ್, ಚಂದನ್, ಎಚ್.ಪಿ.ಗಿರೀಶ್, ಕೆ.ರಂಗನಾಥ್, ಮಧುಸೂದನ್, ಕೆ.ಚೇತನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts