More

    ಹಸಿವು ನೀಗಿಸುತ್ತಿದೆ ಇಂದಿರಾ ಕ್ಯಾಂಟೀನ್

    ಬೆಳಗಾವಿ: ಮಹಾಮಾರಿ ಕರೊನಾದಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದಲ್ಲದೆ, ಹಸಿವಿನಿಂದ ಬಳಲುತ್ತಿದ್ದ ಅದೆಷ್ಟೋ ಬಡಜನರ ಹೊಟ್ಟೆ ತುಂಬಿಸುವ ಕಾರ್ಯದಲ್ಲಿ ‘ಇಂದಿರಾ ಕ್ಯಾಂಟೀನ್’ಗಳು ತೊಡಗಿಕೊಂಡಿವೆ. ಪ್ರತಿದಿನವೂ ಜನರ ಹಸಿವು ನೀಗಿಸುತ್ತಿದ್ದು, ಸರ್ಕಾರ ನೀಡುತ್ತಿರುವ ಉಚಿತ ಊಟ-ಉಪಾಹಾರ ಆಸರೆಯಾಗಿದೆ.

    ಕೋವಿಡ್ ಹರಡುವುದನ್ನು ತಡೆಯಲು ಸರ್ಕಾರ ಲಾಕ್‌ಡೌನ್ ಘೋಷಿಸಿದ್ದರಿಂದ ಭಿಕ್ಷುಕರು, ಬಡವರು, ಕಾರ್ಮಿಕರು, ವಾಹನ ಹಾಗೂ ಆಟೋ ಚಾಲಕರು ಸೇರಿ ಇನ್ನಿತರ ಕುಟುಂಬಗಳಿಗೆ ಆದಾಯ ಇಲ್ಲದಾಗಿದೆ. ಹೀಗಾಗಿ ಅವರ‌್ಯಾರೂ ಊಟ ಇಲ್ಲದೆ ಉಪವಾಸ ಉಳಿಯಬಾರದೆಂಬ ಉದ್ದೇಶದಿಂದ ಸರ್ಕಾರ ಉಚಿತವಾಗಿ ಊಟ ನೀಡುತ್ತಿದೆ. ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ‘ಇಂದಿರಾ ಕ್ಯಾಂಟೀನ್’ಗಳ ಮೂಲಕ ದಿನದ ಮೂರು ಹೊತ್ತು ಉಚಿತವಾಗಿ ಉಪಹಾರ, ಊಟದ ವ್ಯವಸ್ಥೆ ಮಾಡಿದೆ.

    ಅನ್ನದಾನ ಕೇಂದ್ರ: ರಾಜ್ಯದಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 100ಕ್ಕೂ ಅಧಿಕ ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿತ್ಯವೂ 18ರಿಂದ 20 ಸಾವಿರದಷ್ಟು ಕಾರ್ಮಿಕರು, ಭಿಕ್ಷುಕರು, ಬಡವರು ಹಸಿವಿನಿಂದ ಮುಕ್ತರಾಗಿದ್ದಾರೆ. ಅಲ್ಲದೆ, ಉದ್ಯೋಗ ಹುಡುಕಿಕೊಂಡು ಮಹಾರಾಷ್ಟ್ರ, ಗೋವಾ, ಗುಜರಾತ್, ಬಿಹಾರ ಸೇರಿದಂತೆ ಅನೇಕ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದಿರುವವರಿಗೂ ಇಂದಿರಾ ಕ್ಯಾಂಟೀನ್‌ಗಳೇ ಅನ್ನದಾನ ಕೇಂದ್ರಗಳಾಗಿವೆ.

    ಪ್ರತ್ಯೇಕ ಅನುದಾನ ಇಲ್ಲ: ಬೆಳಗಾವಿ ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ ಸೇರಿದಂತೆ ಸವದತ್ತಿ, ಬೈಲಹೊಂಗಲ, ಗೋಕಾಕ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 9 ಇಂದಿರಾ ಕ್ಯಾಂಟೀನ್‌ಗಳಿವೆ. ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೇ 6 ಇಂದಿರಾ ಕ್ಯಾಂಟೀನ್ ಇದ್ದು, ಪ್ರತಿನಿತ್ಯ 1 ಲಕ್ಷ ರೂ. ವರೆಗೆ ವ್ಯಯಿಸಿ ಪಾಲಿಕೆ ವತಿಯಿಂದ ಊಟ ನೀಡಲಾಗುತ್ತಿದೆ. ಪ್ರತಿದಿನವೂ ಒಂದು ಕ್ಯಾಂಟೀನ್‌ನಲ್ಲಿ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ 500 ಜನರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಆಯಾ ಸ್ಥಳೀಯ ಸಂಸ್ಥೆಗಳೇ ಇಂದಿರಾ ಕ್ಯಾಂಟೀನ್‌ಗಳಲ್ಲಿ ತಯಾರಿಸುವ ಊಟೋಪಹಾರದ ಖರ್ಚು ನೋಡಿಕೊಳ್ಳುತ್ತಿದೆ. ಇದಕ್ಕೆ ಸರ್ಕಾರ ಪ್ರತ್ಯೇಕ ಅನುದಾನ ನೀಡಿಲ್ಲ ಎಂದು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಕಾರ್ಮಿಕರ ಆರೋಗ್ಯ ತಪಾಸಣೆಗೆ ಸಾರ್ವಜನಿಕರ ಆಗ್ರಹ

    ಬೆಳಗಾವಿ ನಗರದ ಮಾರುಕಟ್ಟೆ, ವಾಣಿಜ್ಯ ಮಳಿಗೆಗಳು, ಪುಟ್‌ಪಾತ್, ಉದ್ಯಾನಗಳಲ್ಲಿಯೇ ಆಶ್ರಯ ಪಡೆದಿರುವ ಭಿಕ್ಷುಕರು, ರಸ್ತೆ ಬದಿ ವ್ಯಾಪಾರಿಗಳು, ವಿವಿಧ ವಲಯದ ಕಾರ್ಮಿಕರುಗಳಿಗೆ ಜ್ವರ, ಕೆಮ್ಮು ಹಾಗೂ ಇನ್ನಿತರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಕರೊನಾ ಸೋಂಕಿಗೆ ಹೆದರಿಕೊಂಡು ಇವರುಗಳು ಆಸ್ಪತ್ರೆಗಳಿಗೆ ಹೋಗುತ್ತಿಲ್ಲ. ಔಷಧ ಅಂಗಡಿಗಳಿಗೆ ತೆರಳಿ ಜ್ವರದ ಮಾತ್ರೆ ಖರೀದಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಅವರೆಲ್ಲರ ಆರೋಗ್ಯ ತಪಾಸಣೆ ಮಾಡಲು ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಸಗಟು, ಚಿಲ್ಲರೆ ಮಾರುಕಟ್ಟೆಯಲ್ಲಿ ನಿತ್ಯ ಕೆಲಸ ಮಾಡಿಕೊಂಡು ದಿನ ಕಳೆಯುತ್ತಿದ್ದೇವೆ. ಆದರೆ, ಲಾಕ್‌ಡೌನ್‌ನಿಂದಾಗಿ ದಿನದ ಊಟ ಸಿಗದೆ ಪರದಾಡುವಂತಾಗಿತ್ತು. ಹೀಗಾಗಿ ಅನೇಕ ಕಾರ್ಮಿಕರು ಊರುಗಳಿಗೆ ತೆರಳಿದ್ದಾರೆ. ಈ ಮೊದಲು ಮಾಲೀಕರೇ ಊಟ ಕೊಡುತ್ತಿದ್ದರು. ಇದೀಗ ಇಂದಿರಾ ಕ್ಯಾಂಟೀನ್‌ಗಳಲ್ಲಿ ನಮಗೆ ಉಚಿತವಾಗಿ ಊಟ ಸಿಗುತ್ತಿದ್ದು ದಿನ ಕಳೆಯುತ್ತಿದ್ದೇವೆ.
    | ಮುಕ್ಬುಲ್ ಎಸ್., ರಾಮಚಂದ್ರ ಕೊಡವಿ, ಗುರಪ್ಪ ಮಾಲದಿನ್ನಿ ಕಾರ್ಮಿಕರು

    ಜಿಲ್ಲೆಯಲ್ಲಿರುವ 9 ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಬೆಳಗ್ಗೆ ಉಪಾಹಾರ, ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ನಿತ್ಯ 2 ಸಾವಿರಕ್ಕೂ ಅಧಿಕ ಜನರು ಆಹಾರ ಸ್ವೀಕರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ.
    | ಈಶ್ವರ ಉಳ್ಳಾಗಡ್ಡಿ ಯೋಜನಾ ನಿರ್ದೇಶಕ, ಜಿಲ್ಲಾ ನಗರಾಭಿವೃದ್ಧಿ ಕೋಶ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts