More

    ಹಳ್ಳಿಗಳು ಅಭಿವೃದ್ಧಿ ಕಾಣಲಿ

    ಯಾದಗಿರಿ/ಕೊಡೇಕಲ್: ಕೋವಿಡ್ ಕಾರಣಕ್ಕೆ ರದ್ದಾಗಿದ್ದ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲಾಧಿಕಾರಿ ನಡೆ-ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಶನಿವಾರ ಮಾರನಾಳ ಮೂಲಕ ಪುನರಾರಂಭಗೊಂಡಿತು.

    ಬೆಳಗ್ಗೆ 10ಕ್ಕೆ ಮಾರನಾಳಕ್ಕೆ ಆಗಮಿಸಿದ ಡಿಸಿ ಡಾ.ರಾಗಪ್ರಿಯ ಹಾಗೂ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು. ಡಿಸಿ ಬರುವ ಹಿನ್ನೆಲೆಯಲ್ಲಿ ಇಡೀ ಊರು ಸಂಭ್ರಮದಲ್ಲಿದ್ದಂತೆ ಕಂಡಿತು. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಲೆಕ್ಟರ್ ಸಾಹೇಬರನ್ನು ಕಾಣಲು ಹಳ್ಳಿಗರು ಕಾತರದಿಂದ ಕಾದು ಕುಳಿತ್ತಿದ್ದರು.

    ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಡಾ.ರಾಗಪ್ರಿಯ ಆರ್., ಗ್ರಾಮೀಣ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ನಿರಂತರ ಶ್ರಮಿಸುತ್ತಿದೆ. ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಹಳ್ಳಿಗಳ ಉದ್ಧಾರದಲ್ಲೇ ದೇಶದ ಪ್ರಗತಿ ಅಡಗಿದೆ ಎಂದರು.

    ಊರಲ್ಲಿ ಸ್ಮಶಾನಕ್ಕಾಗಿ ಸರ್ವೇ ನಂ.5ರಲ್ಲಿ 1.36 ಗುಂಟೆ ಜಮೀನು ಮಂಜೂರಿ ಜತೆಗೆ ಅಭಿವೃದ್ಧಿಗೆ 5 ಲಕ್ಷ ರೂ. ಮತ್ತು ಶಾಲೆ ಮೂಲಸೌಕರ್ಯಕ್ಕಾಗಿ 10 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. 3 ಮತ್ತು 9 ಕಲಂ, ಮಿಸ್ ಮ್ಯಾಚ್, ಪೈಕಿ ಪಹಣಿ, ಮೋಜನಿ ಕಡತ, ಪಿಂಚಣಿ, ಆಶ್ರಯ ಯೋಜನೆ, ಮತದಾರರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹ ಪರಿಶೀಲನೆ ಹಾಗೂ ಪರಿಹಾರ ನೀಡಿಕೆ, ಅರ್ಹರಿಗೆ ಬಿಪಿಎಲ್ ಕಾಡರ್್ ಹಂಚಿಕೆ, ಪೋಡಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

    ಶಾಸಕ ನರಸಿಂಹ ನಾಯಕ ಮಾತನಾಡಿ, ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಹಳ್ಳಿಗೆ ಬಂದಿದ್ದು ಐತಿಹಾಸಿಕ ಕ್ಷಣ. ಹಳ್ಳಿ ಜನರು ಅಧಿಕಾರಿಗಳಿಗೆ ತುಂಬ ಗೌರವ ಕೊಡುತ್ತಾರೆ. ಅದಕ್ಕೆ ಪ್ರತಿಯಾಗಿ ಅಧಿಕಾರಿಗಳು ಅವರ ಸಮಸ್ಯೆಗಳನ್ನು ಪರಿಹರಿಸಿದಾಗ ಆ ಗೌರವಕ್ಕೆ ಅರ್ಥ ಬರುತ್ತದೆ. ಇನ್ನು ಸರ್ಕಾರ ಬಡ ಕುಟುಂಬಗಳಿಗೆ ಬೆಳಕು ಯೋಜನೆಯಡಿ ವಿದ್ಯುತ್ ಸೌಲಭ್ಯ ಕಲ್ಪಿಸುತ್ತಿದೆ. ಕೆಲವೇ ದಿನಗಳಲ್ಲಿ ತೋಟದ ಮನೆ ಯೋಜನೆ ಸಹ ಅನುಷ್ಠಾನಗೊಳ್ಳಲಿದೆ ಎಂದು ವಿವರಿಸಿದರು.

    ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ ಕವಿತಾಳ, ತಹಸೀಲ್ದಾರ್ ಅಶೋಕ ಸುರಪುರಕರ, ಮಹಾದೇವಪ್ಪಗೌಡ ಬಿರಾದಾರ ಇದ್ದರು. 50 ಫಲಾನುಭವಿಗಳಿಗೆ ಪಿಂಚಣಿ ಪ್ರಮಾಣಪತ್ರ ಹಾಗೂ ವೀಲ್ ಚೇರ್ ವಿತರಿಸಲಾಯಿತು.

    269 ಅರ್ಜಿ ಸ್ವೀಕಾರ
    ಕಂದಾಯ ಇಲಾಖೆಗೆ ಸಂಬಂಧಿಸಿದ 150 ಅರ್ಜಿ ಬಂದಿವೆ. ಜಮೀನು ಸರ್ವೇ, ಟಿಪ್ಪಣಿ, ಪಹಣಿ ತಿದ್ದುಪಡಿ, ರಸ್ತೆ, ಚರಂಡಿ, ಮನೆ ಮಂಜೂರಿ, ವಿದ್ಯುತ್ ಸಮಸ್ಯೆ, ಶಿಕ್ಷಣ ಸೇರಿ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ 269 ಅರ್ಜಿ ಸ್ವೀಕರಿಸಲಾಗಿದ್ದು, ಪರಿಶೀಲಿಸಿ ಇತ್ಯರ್ಥ ಮಾಡಲಾಗುವುದು. ಅನ್ಯ ಸಮಸ್ಯೆಗಳಿದ್ದರೂ ಜಿಲ್ಲಾಡಳಿತದ ಗಮನಕ್ಕೆ ತರಬಹುದಾಗಿದೆ ಎಂದು ಡಿಸಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts