More

    ಹಳ್ಳದ ನೀರಿನಿಂದ ನೂರಾರು ಎಕರೆ ಜಮೀನು ಪಾಳು

    ಲಕ್ಷ್ಮೇಶ್ವರ: ತಾಲೂಕಿನ ಅಡರಕಟ್ಟಿ ಗ್ರಾಮದ 150 ಎಕರೆ ಜಮೀನಿನಲ್ಲಿ ಹಳ್ಳದ ನೀರು ನಿಲ್ಲುವುದರಿಂದ ಕಳೆದ ಮೂರ್ನಾಲ್ಕು ವರ್ಷದಿಂದ ಜಮೀನುಗಳು ಪಾಳು ಬಿದ್ದಿವೆ. ಜಿಲ್ಲಾಧಿಕಾರಿಗಳೇ ಖುದ್ದಾಗಿ ಆಗಮಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.

    ಏನು ಸಮಸ್ಯೆ?: ಪಟ್ಟಣದ ಕೊಳಚೆ ಮತ್ತು ಮಳೆ ನೀರು ಲಂಡಿ ಹಳ್ಳ ಸೇರುತ್ತದೆ. ಇಲ್ಲಿಂದ ನೀರು ಹರಿದು ಹೋಗಲು ಸರಿಯಾದ ಮಾರ್ಗವಿಲ್ಲದ್ದರಿಂದ ಲಕ್ಷ್ಮೇಶ್ವರ, ಮಂಜಲಾಪುರ ಮತ್ತು ಅಡರಕಟ್ಟಿ ಭಾಗದ 150 ಎಕರೆಗೂ ಹೆಚ್ಚಿನ ಜಮೀನಿನಲ್ಲಿ ನಿಲ್ಲುತ್ತದೆ. ಈ ಮೊದಲು ರೈತರು ಪ್ರತಿ ವರ್ಷ ಈ ಜಮೀನಿನಲ್ಲಿ 2 ಪ್ರಮುಖ ಬೆಳೆ ಬೆಳೆಯುತ್ತಿದ್ದರು. ಆದರೆ, ಪಟ್ಟಣ ಬೆಳೆದಂತೆ ಮತ್ತು ಹೆಚ್ಚು ಮಳೆಯಿಂದ ಈ ಜಮೀನುಗಳಲ್ಲಿ ಜಾಲಿಕಂಟಿ, ಆಪು, ಹುಲ್ಲಿನ ಜಬ್ಬಲ ಬೆಳೆದು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ.

    50ಕ್ಕೂ ಹೆಚ್ಚು ರೈತರು ಇಲ್ಲಿ ತುಂಡು ಜಮೀನು ಹೊಂದಿದ್ದಾರೆ. ಫಲವತ್ತಾದ ಮತ್ತು ಬೆಲೆ ಬಾಳುವ ಜಮೀನನ್ನೇ ನಂಬಿ ಬದುಕುತ್ತಿರುವ ರೈತರ ಜಮೀನುಗಳು ಈಗ ಇದ್ದೂ ಇಲ್ಲದಂತಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಮೀನಿನಲ್ಲಿ ಆಳೆತ್ತರ ಹುಲ್ಲು ಬೆಳೆದು ಭೂಮಿ ಜವುಳಾಗಿದೆ. ಇರುವ ತುಂಡು ಜಮೀನಿನಲ್ಲಿ ವರ್ಷಕ್ಕೆ ಎರಡು ಬೆಳೆ ತೆಗೆದು ಬದುಕು ಸಾಗಿಸುತ್ತಿದ್ದ ನಾವೀಗ ಅನಾಥರಾಗಿದ್ದೇವೆ ಎಂಬುದು ರೈತರ ಅಳಲು.

    ಜಿಲ್ಲಾಧಿಕಾರಿಗಳಿಗೆ ಮನವಿ

    ಈ ಸಮಸ್ಯೆ ಪರಿಹಾರಕ್ಕೆ ಪುರಸಭೆ, ತಾಲೂಕಾಡಳಿತ, ಜಿಲ್ಲಾಡಳಿತವಷ್ಟೇ ಅಲ್ಲದೆ, ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ಕೊಳಚೆ ನೀರು ಹರಿದು ಹೋಗಲು ಪೂರಕ ವ್ಯವಸ್ಥೆ ಕಲ್ಪಿಸಿ ಜಮೀನು ಉಳಿಸಿಕೊಡಬೇಕೆಂದು ಗ್ರಾಮದ ರೈತರಾದ ಚನ್ನಪ್ಪ ಹಳಮನಿ, ರಾಮಣ್ಣ ಹವಳದ, ಬಸವರಾಜ ಮಂಟೂರ, ಚಂದ್ರಗೌಡ ಪಾಟೀಲ, ನಿಂಗನಗೌಡ ಪಾಟೀಲ, ಯಲ್ಲಪ್ಪ ರೊಳ್ಳಿ, ರಾಮಣ್ಣ ಚಿಕ್ಕಣ್ಣವರ, ಎಂ.ಸಿ. ಕುಂಬಾರ, ಬಿ.ಎಫ್. ಮುಳಗುಂದ ಇತರರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts