More

    ಪ್ರಯೋಜನಕ್ಕೆ ಬಾರದ ಹೋಟೆಗಾಳಿ ಡ್ಯಾಂ

    ಕಾರವಾರ: ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋಟೆಗಾಳಿ ಗ್ರಾಮದಲ್ಲಿರುವ ಡ್ಯಾಂನ ನೀರು ಸಾರ್ವಜನಿಕರ ಪ್ರಯೋಜನಕ್ಕೆ ಬಾರದಂತಾಗಿದೆ.

    ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 15 ವರ್ಷಗಳ ಹಿಂದೆಯೇ 3 ಕೋಟಿ ರೂಪಾಯಿ ವೆಚ್ಚದಲ್ಲಿ ಭೀಮಕೋಲ್ ಸಮೀಪ 40 ಮೀಟರ್ ಎತ್ತರದಲ್ಲಿ ಮಣ್ಣಿನ ಅಣೆಕಟ್ಟೆ ನಿರ್ವಿುಸಿ ನೀರು ಸಂಗ್ರಹಿಸಲಾಗುತ್ತಿದೆ. ಗ್ರಾಮದ ಅತಿ ಎತ್ತರದಲ್ಲಿ ಡ್ಯಾಂ ಇದ್ದು, ಕೆಳಗಡೆ ನೂರಾರು ಎಕರೆ ಜಮೀನಿಗೆ ನೀರುಣಿಸುವ ಸಾಮರ್ಥ್ಯ ಹೊಂದಿದೆ.

    ಆದರೆ, ಡ್ಯಾಂ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಅಣೆಕಟ್ಟೆಯ ಗೇಟ್​ಗಳು ತುಕ್ಕು ಹಿಡಿದಿವೆ. ಮಣ್ಣಿನ ದಿಬ್ಬದ ಮೇಲೆ ಗಿಡ ಗಂಟಿಗಳು ಬೆಳೆದುಕೊಂಡಿವೆ. ಸಿಮೆಂಟ್​ನಿಂದ ಮಾಡಿದ ಕಾಲುವೆ ಕಿತ್ತು ಹೋಗಿದೆ. ಮಳೆಗಾಲದಲ್ಲಿ ನೀರು ಉಕ್ಕಿ ಹರಿಯುವ ಮಾರ್ಗ ಕಿತ್ತು ಆತಂಕ ಹುಟ್ಟಿಸುವಂತಿದೆ. ಇದರಿಂದ ದೊಡ್ಡ ಡ್ಯಾಂ ಇದ್ದರೂ ಗ್ರಾಮದ ಸಾಕಷ್ಟು ಭೂಮಿ ಕೃಷಿ ಇಲ್ಲದೇ ಪಾಳು ಬಿದ್ದಿದೆ. ಬೇಸಿಗೆಯಲ್ಲಂತೂ ಒಂದು ಬೆಳೆ ಕಾಣಲೂ ಸಾಧ್ಯವಿಲ್ಲ. ನಾವು ಸಣ್ಣಂದಿನಿಂದಲೂ ನೋಡು ತ್ತಿದ್ದೇವೆ ಅಣೆಕಟ್ಟೆಯ ನೀರು ಇದುವರೆಗೂ ಗದ್ದೆಗಳಿಗೆ ಬಂದು ತಲುಪಿಲ್ಲ. ಬೇಸಿಗೆಯಲ್ಲಿ ಕಲ್ಲಂಗಡಿ ಬೆಳೆದು ಕೆಲವರು ಕೈ ಸುಟ್ಟು ಕೊಂಡಿದ್ದಾರೆ. ಡ್ಯಾಂ ನೀರು ಬಳಸಿ ಕೃಷಿ ಮಾಡುವ ಗೋಜಿಗೆ ಯಾರೂ ಹೋಗುವುದಿಲ್ಲ ಎನ್ನುತ್ತಾರೆ ಗ್ರಾಮದ ಯುವಕರು.

    ನೀರಿಗೆ ಅಭಾವ: ಇಷ್ಟು ದೊಡ್ಡ ಅಣೆಕಟ್ಟೆ ಬುಡದಲ್ಲೇ ಇದ್ದರೂ ಹೋಟೆಗಾಳಿ ಗ್ರಾಮದಲ್ಲಿ ಬೇಸಿಗೆಯಲ್ಲಿ ನೀರಿಗೆ ಭಾರಿ ಅಭಾವ ಉಂಟಾಗುತ್ತದೆ. ಗ್ರಾಮದ ಭೀಮಕೋಲ, ಬಂದರುವಾಡ ಭಾಗದಲ್ಲಿ ಕುಡಿಯುವ ನೀರಿಗಾಗಿ ಜನ ಪರಿತಪಿಸುತ್ತಾರೆ. ಗ್ರಾಮ ಪಂಚಾಯಿತಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತದೆ. ಅಣೆಕಟ್ಟೆಯ ಮೂಲಕ ಗ್ರಾಮಕ್ಕೆ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಬಹಳ ವರ್ಷದಿಂದ ಇದೆ.

    ಹೋಟೆಗಾಳಿ ಗ್ರಾಮದಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುತ್ತದೆ. ಗ್ರಾಪಂನಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತೇವೆ. ಸಮೀಪದಲ್ಲೇ ಇರುವ ಅಣೆಕಟ್ಟೆಯಿಂದ ಗ್ರಾಮಕ್ಕೆ ನೀರು ಪೂರೈಕೆ ಮಾಡಿದಲ್ಲಿ ಈ ಅಭಾವ ತಪ್ಪಲಿದೆ.

    | ರಂಜನಾ ರತ್ನಾಕರ ಪವಾರ

    ಹಣಕೋಣ, ಗ್ರಾಪಂ ಅಧ್ಯಕ್ಷೆ

    ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಶಸ್ತ ಸ್ಥಳ

    ಸದಾಶಿವಗಡ-ಕದ್ರಾ ರಾಜ್ಯ ಹೆದ್ದಾರಿಯಲ್ಲಿ ಹೋಟೆಗಾಳಿ ಕ್ರಾಸ್​ನಿಂದ 2 ಕಿಮೀ ಭೀಮಕೋಲ ಮಾರ್ಗದಲ್ಲಿ ಚಲಿಸಿದರೆ ಹೋಟೆಗಾಳಿ ಅಣೆಕಟ್ಟೆ ಸಿಗುತ್ತದೆ. ಪಶ್ಚಿಮ ಘಟ್ಟದ ಹಚ್ಚ ಹಸಿರಿನ ಗುಡ್ಡದ ನಡುವೆ ಜಲರಾಶಿ ಕಾಣುವ ಮನಮೋಹಕ ತಾಣ ಇದಾಗಿದೆ. ಬೆಟ್ಟಗಳ ಸಾಲು, ದೂರದಲ್ಲಿ ಕಾಣುವ ಕಾಳಿ ನದಿ, ನೀರಿನ ಹರಿವಿನ ಜುಳುಜುಳು ನಾದ. ಜನರನ್ನು ಸೆಳೆಯುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಶಸ್ತ ಸ್ಥಳವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts