More

    ಹರೂರು ಬಳಿ ಬಿರುಕು ಬಿಟ್ಟ ರಸ್ತೆ

    ಕಾರವಾರ: ಕೈಗಾ-ಯಲ್ಲಾಪುರ ರಸ್ತೆ ಮಲ್ಲಾಪುರ ಗ್ರಾಪಂ ವ್ಯಾಪ್ತಿಯ ಹರೂರು ಸಮೀಪ ರಸ್ತೆ ಬಿರುಕು ಬಿಟ್ಟು ಕುಸಿದು ತಿಂಗಳು ಕಳೆದಿದೆ. ಇನ್ನೂ ರಿಪೇರಿಯಾಗದ ಕಾರಣ ಸ್ಥಳೀಯರು ಓಡಾಟಕ್ಕೆ ತೊಂದರೆ ಅನುಭವಿಸುವಂತಾಗಿದೆ. ಶೀಘ್ರವೇ ರಸ್ತೆಯನ್ನು ಸಂಚಾರ ಯೋಗ್ಯ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಘಟ್ಟ ಪ್ರದೇಶದಲ್ಲಿ ರಸ್ತೆಯ ನಡುವೆ ಸುಮಾರು 40 ಮೀಟರ್ ಉದ್ದದವರೆಗೆ 6 ಮೀಟರ್​ನಷ್ಟು ಅಗಲದಲ್ಲಿ ಬಿರುಕುಬಿಟ್ಟಿದೆ. ಯಾವುದೇ ಕ್ಷಣದಲ್ಲಿ ಕುಸಿಯುವ ಸಾಧ್ಯತೆ ಇರುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

    ಹೀಗಾಗಿ 40ರಷ್ಟು ಮನೆಗಳನ್ನು ಹೊಂದಿದ ಹರೂರು ಗ್ರಾಮದ ಜನ ತೀವ್ರ ತೊಂದರೆಯಲ್ಲಿದ್ದಾರೆ. ಈ ಭಾಗದ ಜನ ಕೃಷಿ ನಂಬಿಕೊಂಡಿದ್ದಾರೆ. ಅವರು ಕಾರವಾರ ತಾಲೂಕಿನಲ್ಲಿದ್ದರೂ ಕೃಷಿ ಉತ್ಪನ್ನ ಮಾರಾಟ ಹಾಗೂ ಕೃಷಿ ಪರಿಕರಗಳ ಖರೀದಿಗೆ ಯಲ್ಲಾಪುರದ ಜತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಹರೂರಿನಿಂದ ಯಲ್ಲಾಪುರಕ್ಕೆ 55 ಕಿಮೀ ದೂರವಾಗುತ್ತದೆ. ಆದರೆ, ಈಗ ರಸ್ತೆ ಬಂದಾಗಿರುವುದರಿಂದ ಇಲ್ಲಿನ ಜನ 135 ಕಿಮೀ ಸುತ್ತಿ ಯಲ್ಲಾಪುರ ತಲುಪುವ ಪರಿಸ್ಥಿತಿ ಉಂಟಾಗುತ್ತಿದೆ. ಕೃಷಿ ಉತ್ಪನ್ನ ಮಾರಾಟದ ಬೆಲೆಗಿಂತ ಅದರ ಸಾಗಣೆ ವೆಚ್ಚವೇ ಹೆಚ್ಚಾಗುತ್ತಿದೆ ಎಂಬುದು ಗ್ರಾಮಸ್ಥರ ಗೋಳು. ನಮ್ಮ ಆಕಳನ್ನು ಮಾರಾಟ ಮಾಡಿ ಒಂದು ತಿಂಗಳು ಕಳೆದಿದೆ. ಆದರೆ, ಅದನ್ನು ಸಾಗಿಸಲು ಕಷ್ಟವಾಗುತ್ತಿದೆ ಎನ್ನುತ್ತಾರೆ ಕುಚೆಗಾರಿನ ಮಹಾಬಲೇಶ್ವರ ಭಟ್.

    ಕಾಮಗಾರಿಗಳಿಗೆ ವಿಳಂಬ: ಕೈಗಾ ಸಿಎಸ್​ಆರ್ ನಿಧಿಯಡಿ ಹಲವು ಕಾಮಗಾರಿಗಳು ಹರೂರು, ಕುಚೇಗಾರ, ಯಲ್ಲಾಪುರದ ಕಳಚೆ ಭಾಗದಲ್ಲಿ ನಡೆಯುತ್ತಿವೆ. ಅವುಗಳನ್ನು ಕೈಗೊಳ್ಳಲೂ ಹಿನ್ನಡೆಯಾಗಿದೆ ಎಂದು ಕೈಗಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೇಬಲ್ ಎಳೆದ ಕಂಪನಿ ಕಾರಣ: ಕೈಗಾ-ಯಲ್ಲಾಪುರ ರಸ್ತೆಯ ಪಕ್ಕದಲ್ಲಿ ಖಾಸಗಿ ಕಂಪನಿ ಗುಂಡಿ ತೋಡಿ ಆಪ್ಟಿಕಲ್ ಕೇಬಲ್ ಎಳೆದಿದೆ. ಆದರೆ, ಕೇಬಲ್ ಎಳೆಯಲು ತುಂಬಿದ ಗುಂಡಿಗಳನ್ನು ಸರಿಯಾಗಿ ಮುಚ್ಚದ ಕಾರಣ ಆ ಗುಂಡಿಯಲ್ಲಿ ಗುಡ್ಡದ ಮೇಲಿಂದ ಹರಿದು ಬಂದ ನೀರು ನಿರಂತರವಾಗಿ ಹರಿದು ಕುಸಿಯಲು ಕಾರಣವಾಗಿದೆ. ಈ ಕುರಿತು ಕೇಬಲ್ ಕಂಪನಿಗೆ ನೋಟಿಸ್ ನೀಡಲಾಗಿದೆ ಎಂದು ಪಿಡಬ್ಲ್ಯುಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲಿ ರಸ್ತೆಯನ್ನು ವಿಸ್ತರಣೆ ಮಾಡಲು ಅರಣ್ಯ ಇಲಾಖೆಯ ಅನುಮತಿ ದೊರೆಯುವುದಿಲ್ಲ. ಹೀಗಾಗಿ, ಲಭ್ಯವಿರುವ ಜಾಗದಲ್ಲೇ ಕಾಂಕ್ರೀಟ್ ಚರಂಡಿ ನಿರ್ಮಾಣ ಮಾಡಿ, ಬಿರುಕು ಬಿಟ್ಟಷ್ಟು ಜಾಗದಲ್ಲಿ ರಸ್ತೆ ನಿರ್ವಿುಸಲು ಕ್ರಮ ವಹಿಸಲಾಗಿದೆ ಎಂದು ಪಿಡಬ್ಲ್ಯುಡಿ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ ಜಹಗೀರದಾರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಕೈಗಾ-ಯಲ್ಲಾಪುರ ರಸ್ತೆ ಕೇವಲ ಹರೂರು ಗ್ರಾಮದ ಸಂಪರ್ಕಕ್ಕೆ ಮಾತ್ರವಲ್ಲ. ಕೈಗಾ ಅಣು ವಿದ್ಯುತ್ ಸ್ಥಾವರದಿಂದ ಯಲ್ಲಾಪುರ, ಹುಬ್ಬಳ್ಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆ. ಇದು ಬಂದಾಗಿರುವುದರಿಂದ ಕೈಗಾದಲ್ಲಿ ಅವಘಡ ಸಂಭವಿಸಿದರೆ ಈಗ ಪರ್ಯಾಯ ರಸ್ತೆ ಇಲ್ಲ. ಇದರಿಂದ ಶೀಘ್ರ ರಸ್ತೆ ರಿಪೇರಿ ಮಾಡುವಂತೆ ಕೈಗಾ ಎನ್​ಪಿಸಿಐಎಲ್ ಅಧಿಕಾರಿಗಳು, ಮುಂಬೈನ ಅಣು ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೂ ಪತ್ರ ಬರೆಯುತ್ತೇನೆ.
    | ರಾಜೇಶ ಗಾಂವಕರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಲ್ಲಾಪುರ

    ಕೈಗಾ-ಯಲ್ಲಾಪುರ ರಸ್ತೆಯ ರಿಪೇರಿ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ. ಮಳೆ ಇರುವುದರಿಂದ ಒಮ್ಮೆಲೇ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ವಾಹನ ಸಂಚಾರಕ್ಕೆ ಸ್ವಲ್ಪ ದಿನ ವಿಳಂಬವಾಗುತ್ತಿದೆ.
    | ಸತೀಶ ಜಹಗೀರದಾರ, ಪಿಡಬ್ಲ್ಯುಡಿ ಇಇ ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts