More

    ಹಬ್ಬದ ಖುಷಿ ಕಸಿದ ಮಳೆ

    ಹುಬ್ಬಳ್ಳಿ: ಈ ವರ್ಷದ ಮಳೆಗಾಲಕ್ಕೆ ಏನೂ ಉಳಿದಿಲ್ಲರಿ, ಎಲ್ಲ ಕೊಚ್ಚಿಕೊಂಡು ಹೊಂಟಾವ್ರಿ, ಕಿತ್ತಿಟ್ಟ ಶೇಂಗಾ, ಬೆಳೆದು ನಿಂತ ಹತ್ತಿ, ಮೆಣಸಿನಕಾಯಿ, ಉಳ್ಳಾಗಡ್ಡಿ ಎಲ್ಲವೂ ನೀರಲ್ಲಿ ನಿಂತಾವು, ಕೈಗೆ ಬಂದಿದ್ದು ಬಾಯಿಗೆ ಬರದಂಗ್ಹಾಗೇತಿ, ನಮ್ಮ ಕಷ್ಟಾ ಒಂದಿಷ್ಟು ಬಂದು ನೋಡ್ರಿ ಯಪ್ಪಾ….

    ಧಾರವಾಡ ಜಿಲ್ಲೆಯ ಬಹುತೇಕ ಗ್ರಾಮಗಳನ್ನು ಅತಿವೃಷ್ಟಿ ಕಾಡಿದೆ. ಮುಂಗಾರು ಹಂಗಾಮಿನಲ್ಲಿ ಸತತ ಮಳೆಯ ಮಧ್ಯೆಯೂ ಅಷ್ಟು ಇಷ್ಟು ಬಂದಿದ್ದ ಬೆಳೆ ಕೈಗೆ ಬರುವ ಹೊತ್ತಿಗೆ ಮತ್ತೆ ಸುರಿದು ಹಾಳು ಮಾಡಿದೆ. ಇಂತಹ ದುಃಸ್ಥಿತಿಯಲ್ಲಿ ದಿಕ್ಕು ತೋಚದಂತಾಗಿರುವ ಕೃಷಿಕರು ‘ನಮ್ಮೂರಿಗೂ ಬರ್ರಿ, ನಮ್ಮ ಸ್ಥಿತಿ ನೋಡ್ರಿ’ ಎಂದು ಸರ್ಕಾರಕ್ಕೆ ಅಂಗಲಾಚುತ್ತಿದ್ದಾರೆ.

    ಮುಂಗಾರಿನ ಪ್ರಮುಖ ಬೆಳೆಗಳಾದ ಹೆಸರು, ಶೇಂಗಾ, ಸೋಯಾಬೀನ್, ಉದ್ದು, ಅಲಸಂದಿ, ಉಳ್ಳಾಗಡ್ಡಿ ಬೆಳೆಗಳು ದಸರಾ ಹೊತ್ತಿಗೆ ಕೈಗೆ ಸಿಕ್ಕು ಒಂದಿಷ್ಟು ಹಣ ರೈತರ ಜೇಬಿಗೆ ಸೇರುತ್ತಿತ್ತು. ಅದರಿಂದ ನವರಾತ್ರಿ ಉತ್ಸವವನ್ನು ಹುಮ್ಮಸ್ಸಿನಿಂದ ಆಚರಿಸಲು ಅನುಕೂಲವಾಗುತ್ತಿತ್ತು. ಆದರೆ, ಈ ವರ್ಷದ ಮಳೆಗಾಲ ಈ ಉತ್ಸಾಹಕ್ಕೆ ತಣ್ಣೀರು ಎರಚಿದೆ. ಜಿಲ್ಲೆಯ ಬಹುಭಾಗದಲ್ಲಿ ಯಾವುದೇ ಬೆಳೆ ಹೊಲದಲ್ಲಿ ಉಳಿದಿಲ್ಲ. ಬಹುತೇಕ ಮಳೆಗೆ ಸಿಕ್ಕು ಹಾಳಾಗಿದ್ದರಿಂದ ಹಬ್ಬ ಆಚರಣೆಗೆ ರೈತರಲ್ಲಿ ಉತ್ಸಾಹವೇ ಉಳಿದಿಲ್ಲ.

    ಮೊದಲ ಬೀಡಿನ ಹತ್ತಿ ಬಿಡಿಸುವ ಹೊತ್ತಿಗೆ ಸುರಿಯುತ್ತಿರುವ ಮಳೆ ಎಲ್ಲವನ್ನೂ ನೀರು ಪಾಲು ಮಾಡಿದೆ. ಇದಕ್ಕೂ ಮುಂಚೆ ಶೇಂಗಾ, ಹೆಸರು, ಸೋಯಾಬೀನ್ ಬೆಳೆಗಳು ನೀರಲ್ಲಿ ನಿಂತು ರೈತರನ್ನು ಕಂಗಾಲಾಗಿಸಿದ್ದವು. ಇನ್ನು ಉಳ್ಳಾಗಡ್ಡಿ ಹೊಲದಲ್ಲೇ ಕೊಳೆತು ಹೋಗಿದ್ದರಿಂದ ಸದ್ಯದ ದರ ಏರಿಕೆಯ ಪ್ರಯೋಜನ ಅನ್ನದಾತನಿಗೆ ಸಿಗದಂತಾಗಿದೆ. ಹಾಗಾಗಿ ಧಾರವಾಡ ಜಿಲ್ಲೆಯ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಜಿಲ್ಲೆಯಲ್ಲಿ ಬೆಳೆ ಹಾನಿಯನ್ನು ಕೃಷಿ ಇಲಾಖೆ ಅಧಿಕಾರಿಗಳು, ವಿಮಾ ಕಂಪನಿಯವರು ವೀಕ್ಷಿಸಿದ್ದಾರೆ. ತಕ್ಷಣಕ್ಕೆ ಶೇ. 25ರಷ್ಟು ಪರಿಹಾರ ಒದಗಿಸುವ ಭರವಸೆಯನ್ನು ವಿಮಾ ಕಂಪನಿಯವರು ನೀಡಿದ್ದರು. ಆದರೆ, ಇದುವರೆಗೂ ಅದರ ಸುಳಿವೇ ಇಲ್ಲ ಎಂದು ಹುಬ್ಬಳ್ಳಿ ತಾಲೂಕಿನ ರೈತರು ಅಲವತ್ತುಕೊಂಡಿದ್ದಾರೆ.

    ಹೋದ ವರ್ಷವೂ ಹೀಗೆಯೇ ಆಗಿತ್ತು. ಬೆಳೆ ಬರದಿದ್ದರೂ ಫಸಲ್ ಬಿಮಾ ಯೋಜನೆಯಡಿ ಪರಿಹಾರ ಬರಲಿಲ್ಲ. ಈ ವರ್ಷವೂ ಹಾಗೇ ಆಗಿದೆ. ಈಗಲಾದರೂ ಒಂದಿಷ್ಟು ಪರಿಹಾರ ನೀಡುತ್ತಾರೆಯೇ? ಸಾಲ- ಸೋಲ ಮಾಡಿ ಬಿತ್ತನೆ ಮಾಡಲಾಗಿತ್ತು. ಗೊಬ್ಬರ, ಕೀಟನಾಶಕ, ಆಳು- ಕಾಳು ಸೇರಿ ಎಕರೆಗೆ 10ರಿಂದ 20 ಸಾವಿರ ರೂ. ವೆಚ್ಚ ಮಾಡಿದ್ದೇವೆ. ಅಷ್ಟು ಬೆಳೆ ಸಹ ಈಗ ಬರುತ್ತಿಲ್ಲ. ಇಷ್ಟೆಲ್ಲ ಮಳೆಯಾಗಿ ರೈತರು ಒದ್ದಾಡುತ್ತಿದ್ದರೂ ಯಾವೊಬ್ಬ ಜನಪ್ರತಿನಿಧಿಯೂ ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಹಾನಿಯಾದ ಹೊಲಗಳನ್ನು ವೀಕ್ಷಣೆ ಮಾಡಿಲ್ಲ. ಜಿಲ್ಲಾಡಳಿತ ಏನು ಮಾಡುತ್ತಿದೆ? ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಬಂದಿಲ್ಲವಲ್ಲ? ಕನಿಷ್ಠ ಪಕ್ಷ ಒಂದಿಷ್ಟು ತಕ್ಷಣದ ಪರಿಹಾರ ನೀಡಿ ಆನಂತರ ಪರಿಶೀಲನೆ ನಡೆಸಿ ಎಂಬುದು ರೈತ ಸಮುದಾಯದ ಒತ್ತಾಯ.

    ಜಿಲ್ಲೆಯಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪ್ರಸಕ್ತ ವರ್ಷ ಆಗಸ್ಟ್​ನಿಂದ ಅಕ್ಟೋಬರ್​ವರೆಗೆ ಸುರಿದ ಮಳೆಯಿಂದ ಧಾರವಾಡ ಜಿಲ್ಲೆಯಲ್ಲಿ 1.71 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾಗೂ 25 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಅಕ್ಟೋಬರ್​ನಲ್ಲಿ ನಿರಂತರ ಸುರಿದ ಮಳೆಗೆ ಮತ್ತಷ್ಟು ಹಾನಿಯಾಗಿದೆ. ಅಂದರೆ ಒಟ್ಟಾರೆ ಬಿತ್ತನೆ ಪ್ರದೇಶದಲ್ಲಿ ಶೇ. 90ರಷ್ಟು ಹಾನಿಯಾಗಿದೆ ಎಂದು ಕೃಷಿ ಇಲಾಖೆ ಸಮೀಕ್ಷೆ ಮಾಡಿದೆ. ಹೆಸರು, ಗೋವಿನಜೋಳ, ಸೋಯಾಬೀನ್ ಹಾಗೂ ಶೇಂಗಾ ಹೆಚ್ಚು ಹಾನಿಗೀಡಾಗಿದ್ದರೆ, ತೋಟಗಾರಿಕೆಯಲ್ಲಿ ಉಳ್ಳಾಗಡ್ಡಿ, ಆಲೂಗಡ್ಡೆ, ಕೆಂಪು ಮೆಣಸಿನಕಾಯಿ ಬೆಳೆಗಳು ದೊಡ್ಡ ಮಟ್ಟದಲ್ಲಿ ಹಾನಿಗೀಡಾಗಿವೆ ಎಂದು ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts