More

    ಹನ್ಯಾಳುವಿನಲ್ಲಿ ಮಾದರಿ ಸಮುದಾಯ ಶಾಲೆ

    ಅರಕಲಗೂಡು: ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವ ಉದ್ದೇಶದಿಂದ ಸ್ವಗ್ರಾಮ ಹನ್ಯಾಳುವಿನಲ್ಲಿ ಪ್ರಥಮವಾಗಿ ಮಾದರಿ ಸಮುದಾಯ ಶಾಲೆ ತೆರೆಯಲು ತೀರ್ಮಾನಿಸಿದ್ದು, ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಾಸಕ ಎ. ಮಂಜು ನಿರ್ದೇಶನ ನೀಡಿದರು.

    ತಾಲೂಕಿನ ದಾರಿಕೊಂಗಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ಕಸಬಾ ಮತ್ತು ಮಲ್ಲಿಪಟ್ಟಣ ಹೋಬಳಿಯ ಶಾಲಾ ಮಕ್ಕಳಿಗೆ ಸಮಾಜ ಸೇವಕ ದಿವಾಕರ್ ಅವರು ಕೊಡುಗೆ ನೀಡಿರುವ ನೋಟ್‌ಬುಕ್ ಹಾಗೂ ಪಠ್ಯೇತರ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಕ್ಷೇತ್ರದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸಮುದಾಯ ಶಾಲೆ ತೆರೆಯಬೇಕೆಂಬ ಕನಸಿದ್ದು, ಮೊದಲಿಗೆ ಸ್ವಗ್ರಾಮ ಹನ್ಯಾಳುವಿನಲ್ಲಿ ಸಮುದಾಯ ಶಾಲೆಯನ್ನು ತೆರೆಯಲು ತೀರ್ಮಾನಿಸಿದ್ದೇನೆ. ಬಿಇಒ ಅವರು ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಕಾನೂನು ರೀತಿಯಲ್ಲೇ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

    ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರ ಶೂ, ಸಮವಸ್ತ್ರ, ಬಿಸಿಯೂಟ, ಪುಸ್ತಕ ಎಲ್ಲವನ್ನೂ ನೀಡುತ್ತಿದೆ. ಆದರೆ ಪಾಲಕರು ಸದುಪಯೋಗ ಪಡೆದುಕೊಳ್ಳದೆ ಸಾಲ ಮಾಡಿ ಮಕ್ಕಳನ್ನು ಕಾನ್ವೆಂಟ್‌ಗಳಿಗೆ ಸೇರಿಸುತ್ತಿದ್ದಾರೆ. ಸಚಿವನಾಗಿದ್ದಾಗ ಹನ್ಯಾಳುವಿನಲ್ಲಿ 25 ಲಕ್ಷ ರೂ.ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಿಸಿದೆ. ಆದರೆ ಪ್ರಸ್ತುತ 25 ಮಕ್ಕಳು ಕಲಿಯುತ್ತಿದ್ದಾರೆ. ಇದರಿಂದ ಮನಸ್ಸಿಗೆ ತುಂಬ ನೋವಾಗುತ್ತದೆ. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸದಿದ್ದರೆ ಶಾಲೆಗಳು ಉಳಿಯುವುದಿಲ್ಲ. ಸರ್ಕಾರಿ ಶಾಲೆಗಳಲ್ಲೂ ಉತ್ತಮ ಶಿಕ್ಷಕರಿದ್ದು, ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮನವಿ ಮಾಡಿದರು.

    ಕೆಲ ಕಾನ್ವೆಂಟ್‌ಗಳಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದವರು ಬೋಧನೆ ಮಾಡುತ್ತಿದ್ದಾರೆ. ಬಿಇಒ ಸೂಕ್ತಕ್ರಮ ತೆಗೆದುಕೊಂಡರೆ ಆ ಶಾಲೆಗಳನ್ನು ಮುಚ್ಚಿಸಬಹುದು. ಆದರೆ, ಸರ್ಕಾರಿ ಶಾಲೆಯನ್ನು ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೊಡ್ಡ ಹುದ್ದೆಗಳಲ್ಲಿದ್ದಾರೆ. ತಾವು ವ್ಯಾಸಂಗ ಮಾಡಿದ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡಿದರೆ, ಸರ್ಕಾರದ ಅನುದಾನ ಕಾಯಬೇಕಿಲ್ಲ. ಆದರೆ ದಾನ ಮಾಡಬೇಕೆಂಬ ಮನಸ್ಸು ಎಲ್ಲರಿಗೂ ಬರುವುದಿಲ್ಲ. ಆದರೆ ದಿವಾಕರ್ ಅವರು ಮಕ್ಕಳ ಏಳಿಗೆಗೆ ಸಹಕಾರ ನೀಡುತ್ತಿರುವುದು ಸಂತೋಷ ತಂದಿದೆ. ಇದು ಹೀಗೆಯೇ ಮುಂದುವರೆಯಲಿ ಎಂದು ಆಶಿಸಿದರು.

    ಸಮಾಜ ಸೇವಕ ದಿವಾಕರ್ ಮಾತನಾಡಿ, ದಾರಿಕೊಂಗಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಮೂಲಕ ಮಕ್ಕಳ ಕಲಿಕೆಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ಇದೀಗ ಕಸಬಾ ಮತ್ತು ಮಲ್ಲಿಪಟ್ಟಣ ಹೋಬಳಿಯ ಹಲವಾರು ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಪುಸ್ತಕ, ಪಠ್ಯೇತರ ಸಾಮಗ್ರಿ ವಿತರಿಸುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಕೊಡುಗೆ ಕೊಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಲು ಸಹಕರಿಸುವುದಾಗಿ ಹೇಳಿದರು.

    ಬಿಇಒ ದೇವರಾಜ್, ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿದರು. ಬಿಆರ್‌ಸಿ ಬಾಲರಾಜ್, ಇಸಿಒ ರಾಜು, ಸಿಆರ್‌ಪಿ ಶಶಿಕಲಾ, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್, ವಿಜಾಪುರ ಗ್ರಾಪಂ ಅಧ್ಯಕ್ಷೆ ಜ್ಯೋತಿ ಮಹೇಶ್, ಮುಖಂಡರಾದ ಶಂಭುಲಿಂಗೇಗೌಡ, ಮುಖಂಡರಾದ ನರಸೇಗೌಡ, ನಾಗರಾಜ್, ಚಂದ್ರೇಗೌಡ, ಹನ್ಯಾಳು ಕುಮಾರ್, ಮುಖ್ಯ ಶಿಕ್ಷಕ ಮಂಜಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts