More

    ಹನೂರಲ್ಲಿ ಮರ ತೆರವು ಕಾರ್ಯಕ್ಕೆ ಚಾಲನೆ

    ಕೆ.ಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆ


    ಹನೂರು: ಕೆ.ಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಗುರುವಾರ ಪಟ್ಟಣದ ಮಲೆ ಮಹದೇಶ್ವರಬೆಟ್ಟ ಮುಖ್ಯ ರಸ್ತೆ ಬದಿಯಲ್ಲಿದ್ದ ಮರಗಳನ್ನು ತೆರವು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

    ಕೊಳ್ಳೇಗಾಲದಿಂದ ಹನೂರಿನವರೆಗೆ 108 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಮಧುವನಹಳ್ಳಿಯಿಂದ ಹನೂರಿನವರೆಗೆ ಅಲ್ಲಲ್ಲಿ ತುಸು ದೂರ ಹೊರತುಪಡಿಸಿದರೆ ಉಳಿದೆಡೆ ಕಾಮಗಾರಿ ಪೂರ್ಣಗೊಂಡಿದೆ.

    ಕಾಮಗೆರೆ, ಮಂಗಲ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡಿದ್ದ ಜಮೀನು, ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, ಹನೂರು ಪಟ್ಟಣದಲ್ಲಿ ಕಾರಣಾಂತರದಿಂದ ರಸ್ತೆ ಬದಿಯಲ್ಲಿನ ವಾಣಿಜ್ಯ ಮಳಿಗೆ ಕಟ್ಟಡಗಳನ್ನು ತೆರೆವುಗೊಳಿಸಿರಲಿಲ್ಲ. ಇದರಿಂದ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಪರಿಣಾಮ ಕಾಮಗಾರಿ ಕುಂಟುತ್ತ ಸಾಗಿತ್ತು. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು.

    ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಂಗಳ ಹಿಂದೆ ನಡೆದ ಸಭೆಯಲ್ಲಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿ ಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಈ ದಿಸೆಯಲ್ಲಿ ವಾರದಿಂದ ಪಟ್ಟಣದಲ್ಲಿ ಕಟ್ಟಡಗಳ ತೆರವು ಕಾರ್ಯ ನಡೆಯುತ್ತಿದ್ದು, ಇದೀಗ ರಸ್ತೆ ಬದಿಯಲ್ಲಿದ್ದ ಮರಗಳ ತೆರೆವು ಕಾರ್ಯವನ್ನು ಕೆ.ಶಿಪ್ ಅಧಿಕಾರಿಗಳು ಆರಂಭಿಸಿದ್ದಾರೆ. ಅಲ್ಲದೆ ಆರ್.ಎಸ್.ದೊಡ್ಡಿ, ಮಂಗಲ ಗ್ರಾಮದ ಬಳಿ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ.

    ಸಾಲುಗಟ್ಟಿ ನಿಂತ ವಾಹನಗಳು: ಪಟ್ಟಣದ ಮುಖ್ಯ ರಸ್ತೆ ಬದಿಯಲ್ಲಿದ್ದ ಮರಗಳ ತೆರವು ಕಾರ್ಯವನ್ನು ಅರಂಭಿಸಿದ ಹಿನ್ನೆಲೆಯಲ್ಲಿ ಆಗಾಗ್ಗೆ ಕೆಲಕಾಲ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ಇದರಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸಿದರಲ್ಲದೆ, ಸಾರ್ವಜನಿಕರು ಸಂಚರಿಸಲು ತೊಂದರೆ ಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts