More

    ಹದವಾದ ಮಳೆ, ಬಿತ್ತನೆ ಚುರುಕು

    ಶಿಗ್ಗಾಂವಿ: ಕಳೆದ ಬಾರಿ ಅತಿವೃಷ್ಟಿಯಿಂದ ಅಪಾರ ನಷ್ಟಕ್ಕೊಳಗಾಗಿದ್ದ ತಾಲೂಕಿನ ರೈತ ಸಮೂಹ ಎರಡು ದಿನಗಳಿಂದ ಆರಂಭಗೊಂಡಿರುವ ಉತ್ತಮ ಮಳೆಯಿಂದ ಸಂತಸಗೊಂಡಿದ್ದು, ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

    ಈಗಾಗಲೇ ವಾಡಿಕೆಯಂತೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಜಮೀನು ಹದಗೊಳಿಸಿದ್ದ ರೈತರಿಗೆ ಭಾನುವಾರ ಸಂಜೆ ಸುರಿದ ಮಳೆಯಿಂದ ಬಿತ್ತನೆಗೆ ಪೂರಕ ವಾತಾವರಣ ನಿರ್ವಣಗೊಂಡಿದೆ. ಸೋಮವಾರ ಬೆಳಗ್ಗೆಯಿಂದಲೇ ಬೀಜ, ಗೊಬ್ಬರ ಖರೀದಿಗೆ ರೈತರು ಮುಗಿಬಿದ್ದಿದ್ದಾರೆ.

    ಶಿಗ್ಗಾಂವಿ, ಬಂಕಾಪುರ, ದುಂಡಸಿ ಹೋಬಳಿ ಭಾಗದ ರೈತರು ಹತ್ತಿ, ಗೋವಿನಜೋಳ, ಭತ್ತ, ಸೋಯಾಬೀನ್, ಶೇಂಗಾ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಕಳೆದ ಬಾರಿ ಸೋಯಾಬೀನ್, ಇನ್ನಿತರ ಬೀಜಗಳನ್ನು ಸಕಾಲಕ್ಕೆ ಪೂರೈಸದ ಕೃಷಿ ಇಲಾಖೆ ರೈತರಿಂದ ಭಾರಿ ಪ್ರತಿಭಟನೆ ಎದುರಿಸಿತ್ತು. ಆದರೆ, ಈ ಬಾರಿ ಎಚ್ಚೆತ್ತುಕೊಂಡಿರುವ ತಾಲೂಕು ಕೃಷಿ ಇಲಾಖೆ ಮುಂಗಾರು ಹಂಗಾಮಿಗೆ ಮುನ್ನವೇ ರಿಯಾಯತಿ ದರದಲ್ಲಿ ಬೀಜಗಳನ್ನು ವಿತರಿಸುತ್ತಿದ್ದಾರೆ.

    ತಾಲೂಕಿನಲ್ಲಿ ಒಟ್ಟು 58920 ಹೆಕ್ಟೇರ್ ಭೂಮಿ ಇದ್ದು, ಅದರಲ್ಲಿ 42507 ಹೆಕ್ಟೇರ್ ಸಾಗುವಳಿ ಭೂಮಿ ಇದೆ. ಅದರಲ್ಲಿ 38870 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಭೂಮಿಯಲ್ಲಿ ಬಿತ್ತನೆಗೆ ಬೇಕಾಗುವ ಸೋಯಾಬಿನ್ 2301 ಕ್ವಿಂಟಾಲ್, ಶೇಂಗಾ 282 ಕ್ವಿಂಟಾಲ್, ಹೆಸರು 102 ಕ್ವಿಂಟಾಲ್, ಗೋವಿನಜೋಳ 476 ಕ್ವಿಂಟಾಲ್, ಭತ್ತ 476 ಕ್ವಿಂಟಾಲ್ ಹಾಗೂ ಸಾಕಷ್ಟು ರಾಸಾಯನಿಕ ಗೊಬ್ಬರ, ಬೀಜೋಪಚಾರದ ಔಷಧಗಳನ್ನು ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ರೈತರು ಕೃಷಿ ಇಲಾಖೆ ಮಾತ್ರವಲ್ಲದೇ ಖಾಸಗಿ ಮಾರಾಟ ಮಳಿಗೆಗಳಿಂದಲೂ ಬೀಜ ಖರೀದಿಸುತ್ತಿದ್ದಾರೆ.

    ಈಗಾಗಲೇ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ರೈತರು ಬೀಜ ಖರೀದಿಸುವ ಮುನ್ನ ನಕಲಿ ಬೀಜಗಳ ಕುರಿತು ಎಚ್ಚರ ವಹಿಸಬೇಕು. ಕಡ್ಡಾಯವಾಗಿ ಖರೀದಿಯ ರಸೀದಿ ಪಡೆದುಕೊಳ್ಳಬೇಕು. ಕೃಷಿ ಇಲಾಖೆಯಲ್ಲಿ ಬೀಜ ಖರೀದಿಸಲು ರೈತರು ಖಾತೆ ಉತಾರ, ಬ್ಯಾಂಕ್ ಪಾಸ್​ಬುಕ್ ಝುರಾಕ್ಸ್, ಆಧಾರ್ ಕಾರ್ಡ್ ನೀಡಬೇಕು.
    | ಸುರೇಶಬಾಬುರಾವ್ ದಿಕ್ಷೀತ್ ಕೃಷಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts