More

    ಹಣ ವಿತ್​ಡ್ರಾ ಶುಲ್ಕಕ್ಕೆ ವರ್ತಕರ ವಿರೋಧ

    ಹುಬ್ಬಳ್ಳಿ: ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ಬ್ಯಾಂಕ್​ಗಳಲ್ಲಿ ಹಣ ವಿತ್​ಡ್ರಾ ಮಾಡಿದರೆ ವಿಧಿಸಲಾಗುತ್ತಿರುವ ಸೇವಾ ಶುಲ್ಕಕ್ಕೆ ವ್ಯಾಪಾರಸ್ಥರ ಸಂಘ ವಿರೋಧ ವ್ಯಕ್ತಪಡಿಸಿದೆ.

    ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಿ ಹಣಕಾಸು ಇಲಾಖೆಯಿಂದ ಬ್ಯಾಂಕ್​ಗಳಿಗೆ ಸೂಕ್ತ ಮಾರ್ಗದರ್ಶನ ಕೊಡಿಸಬೇಕೆಂದು ಕೋರಿದ್ದಾರೆ.

    ಎಪಿಎಂಸಿಯಲ್ಲಿನ ಕೆನರಾ ಬ್ಯಾಂಕ್​ನೊಂದಿಗೆ ವಿಲೀನಗೊಂಡ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಶೇ. 90ರಷ್ಟು ಎಪಿಎಂಸಿ ದಲ್ಲಾಲಿ ವರ್ತಕರು ಖಾತೆ ಹೊಂದಿದ್ದಾರೆ. ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ತರುವ ಬಹಳಷ್ಟು ರೈತರು ಬ್ಯಾಂಕ್ ವ್ಯವಹಾರ ನಡೆಸುವುದಿಲ್ಲ. ವರ್ತಕರು ಎಷ್ಟೇ ಒತ್ತಾಯಿಸಿದರೂ ಚೆಕ್, ಆರ್.ಟಿ.ಜಿ.ಎಸ್. ಮುಖಾಂತರ ಹಣ ಪಡೆಯಲು ರೈತರು ಒಪ್ಪುವುದಿಲ್ಲ.

    ಶೇ. 70ರಷ್ಟು ರೈತರು ಬ್ಯಾಂಕಿನ ವ್ಯವಹಾರಕ್ಕೆ ಹೊಂದಿಕೊಂಡಿರುವುದಿಲ್ಲ. ಅದಕ್ಕಾಗಿ ದಲ್ಲಾಲರು ರೈತರಿಗೆ ಹಣ ನೀಡಲು ಬ್ಯಾಂಕಿನಿಂದ ವಿತ್​ಡ್ರಾ ಮಾಡಬೇಕಾಗುತ್ತದೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುತ್ತದೆ.

    ಆದರೆ, ಈಗ ದಲ್ಲಾಳಿ ವರ್ತಕರಿಗೆ 100ಕ್ಕೆ 1 ರೂ. ಯಂತೆ ಬ್ಯಾಂಕಿನವರು ಶುಲ್ಕ ವಿಧಿಸುತ್ತಿದ್ದಾರೆ. ಇದನ್ನು ನಿಲ್ಲಿಸಬೇಕೆಂದು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.

    ರೈತರಿಗೆ ಚೆಕ್ ಹಾಗೂ ಆರ್.ಟಿ.ಜಿ.ಎಸ್ ಮೂಲಕ ಹಣ ನೀಡಲು ಹಂತ ಹಂತವಾಗಿ ಜಾರಿ ಮಾಡುತ್ತೇವೆ. ಡಿಜಿಟಲೀಕರಣಕ್ಕೆ ನಾವು ಕೂಡ ಪ್ರಯತ್ನ ನಡೆಸಿದ್ದೇವೆ. ಅಂಗಡಿಯಲ್ಲಿ ಕೇಂದ್ರ ಸರ್ಕಾರದ ಪ್ರಕಟಣೆಗಳನ್ನು ಪ್ರಕಟಿಸುತ್ತಿದ್ದೇವೆ. ವ್ಯವಸ್ಥೆ ಸರಿ ಹೋಗುವವರೆಗೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ, ಪ್ರಭುಲಿಂಗಪ್ಪ ಅಂಕಲಕೋಟಿ, ಮೋಹನ ಸೋಳಂಕಿ, ಸುರೇಶ ಓಸ್ತುವಾಲ, ಸುರೇಶ ಹಬೀಬ, ಸನೀಲ ಲದ್ದಡ ಇತರರು ಆಗ್ರಹಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts