More

    ಹಣ ಪಡೆಯದೇ ಸಂಗೀತ ಸುಧೆ ಹರಿಸಿದ್ದ ಎಸ್​ಪಿಬಿ

    ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸ್ವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಗಾನ ಗಾರುಡಿಗ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಪಾಲ್ಗೊಂಡಿದ್ದರು. ಅಂದು ಅವರು ಹಣ ಪಡೆಯದೇ ಸಂಗೀತ ಕಾರ್ಯಕ್ರಮ ನೀಡಿದ್ದು ವಿಶೇಷವಾಗಿತ್ತು.

    2018 ಜನೆವರಿ 26ರಂದು ದೇಶಪಾಂಡೆ ನಗರ ಜಿಮ್ಖಾನಾ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಂದು ಎಸ್​ಪಿಬಿ ಅವರು ಸುಮಾರು 2 ತಾಸು ಕನ್ನಡದ ಜನಪ್ರಿಯ ಹಾಡುಗಳನ್ನು ಹಾಡಿ ರಂಜಿಸಿದ್ದರು. ಕಿಕ್ಕಿರಿದು ತುಂಬಿದ್ದ ಜಿಮ್ಖಾನಾ ಮೈದಾನ ಎಸ್​ಪಿಬಿ ಅವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಗಾಯಕಿ ಅರ್ಚನಾ ಉಡುಪ ಇನ್ನಿತರರು ಸಾಥ್ ನೀಡಿದ್ದರು.

    ಆ ಸಂದರ್ಭದಲ್ಲಿ ಡಾ. ಎಂ.ಎಂ. ಜೋಶಿ ಅವರ ಮನೆಗೆ ಭೇಟಿ ನೀಡಿದ್ದ ಎಸ್​ಪಿಬಿ ಅವರು ಕಾಖಂಡಕಿಯಿಂದ ಆಗಮಿಸಿದ್ದ ಮಹಿಪತಿ ಮಹಾರಾಜರ ಪಾದುಕೆಯ ದರ್ಶನ ಪಡೆದಿದ್ದರು. ಕಳೆದ ಎರಡೂವರೆ ವರ್ಷಗಳಲ್ಲಿ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಮತ್ತೆ ಹುಬ್ಬಳ್ಳಿಗೆ ಬಂದಿರಲಿಲ್ಲ. ಹಾಗಾಗಿ ಹುಬ್ಬಳ್ಳಿಯಲ್ಲಿ ಎಸ್​ಪಿಬಿ ಅವರ ಕೊನೆಯ ಕಾರ್ಯಕ್ರಮವೂ ಇದೇ ಆಗಿದೆ.

    ರಾಮೋಜಿ ಫಿಲ್ಮ್ ಸಿಟಿಯಲ್ಲಿ ರೆಕಾರ್ಡಿಂಗ್ ನಡೆಯುತ್ತಿದ್ದ ವೇಳೆ ಡಾ. ಎಸ್​ಪಿಬಿ ಅವರನ್ನು ಭೇಟಿ ಮಾಡಿದ್ದೆ. ಹೃದಯ ಶ್ರೀಮಂತಿಕೆಯುಳ್ಳ ಮೇರು ವ್ಯಕ್ತಿತ್ವ ಅವರದು. ಶಾಸ್ತ್ರೀಯ ಸಂಗೀತ ಕಲಿತ ತಮಗಿಂತ ಚಿಕ್ಕ ವಯಸ್ಸಿನವರನ್ನೂ ಗುರು ಎನ್ನುತ್ತಿದ್ದರು. 40ರ ವಯೋಮಾನದ ನಂತರ ವಿನಯದಿಂದ ಶಾಸ್ತ್ರೀಯ ಸಂಗೀತ ಕಲಿತು ಹಾಡಿದರು. ಪ್ರಾಣಿ, ಪಕ್ಷಿ, ಗಾಯಕರು, ನಟರ ಅನುಕರಣೆ ಮಾಡುತ್ತಿದ್ದ ಅವರೊಬ್ಬ ಮಿಮಿಕ್ರಿ ಕಲಾವಿದ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಪಿ.ಬಿ. ಶ್ರೀನಿವಾಸ್, ಪಿ. ಸುಶೀಲಾ, ಕೆ.ಜೆ. ಯೇಸುದಾಸ್, ಎಸ್. ಜಾನಕಿ ಅವರಿದ್ದ ವೇದಿಕೆಗೆ ಚಪ್ಪಲಿ ಧರಿಸದೆ ಹೋಗುತ್ತಿದ್ದುದು ಅವರ ಸ್ವಭಾವಕ್ಕೆ ಕನ್ನಡಿ. 16 ಭಾಷೆಗಳಲ್ಲಿ ಸುಮಾರು 40 ಸಾವಿರ ಹಾಡು ಹಾಡಿದ ಅವರ ಅಗಲಿಕೆ ತುಂಬಲಾರದ ಹಾನಿಯುಂಟುಮಾಡಿದೆ. | ಡಾ. ಶಶಿಧರ ನರೇಂದ್ರ ಹಿರಿಯ ರಂಗಕರ್ವಿು, ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts