More

    ಹಂದಿಗೋಣದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ

    ಕುಮಟಾ: ತಾಲೂಕಿನ ಹಂದಿಗೋಣದಲ್ಲಿ ಶನಿವಾರ ಅಡುಗೆ ಅನಿಲ ತುಂಬಿದ ಇಂಡಿಯನ್ ಗ್ಯಾಸ್ ಟ್ಯಾಂಕರ್ (ಕೆಎ01,ಎಎಚ್-8361) ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಲ್ಟಿಯಾಗಿದೆ.

    ಘಟನೆಯಲ್ಲಿ ಟ್ಯಾಂಕರ್ ಚಾಲಕ, ಜಾರ್ಖಂಡ್ ರಾಜ್ಯದ ಕೊಡರಾಮ ಜಿಲ್ಲೆಯ ಪಪಲು ನಿವಾಸಿ ಅಜಿತ್​ಕುಮಾರ ಭುವನೇಶ್ವರ ಜಾಧವ್(27)ಗೆ ಗಾಯಗಳಾಗಿದ್ದು, ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪಲ್ಟಿಯಾದ ಟ್ಯಾಂಕರ್ ಅನಿಲ ತುಂಬಿಕೊಂಡು ಮಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿತ್ತು.

    ಟ್ಯಾಂಕರ್ ಪಲ್ಟಿಯಾದ ಸಂದರ್ಭದಲ್ಲಿ ಗ್ಯಾಸ್ ಸೋರಿಕೆಯ ಭೀತಿ ಎದುರಾಗಿದ್ದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಭಯಗೊಂಡಿದ್ದರು. ಘಟನೆಯ ನಡೆದ ಕೆಲ ಸಮಯದಲ್ಲೇ ಸ್ಥಳಕ್ಕೆ ತಹಸೀಲ್ದಾರ್ ಮೇಘರಾಜ ನಾಯ್ಕ, ಕುಮಟಾ ಹಾಗೂ ಅಂಕೋಲಾದ ಅಗ್ನಿಶಾಮಕ ದಳ ಹಾಗೂ ಪೊಲೀಸರು ತೆರಳಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು. ಅಲ್ಲದೆ, ಆಸುಪಾಸಿನ ಮನೆಯವರನ್ನು ತೆರವುಗೊಳಿಸಿದರು. ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯಾಗಿ 5 ಕಿಮೀಗೂ ಹೆಚ್ಚು ದೂರದವರೆಗೆ ಸರತಿಯಲ್ಲಿ ನಿಂತಿದ್ದ ವಾಹನಗಳಿಗೆ ಪರ್ಯಾಯ ಮಾರ್ಗ ನಿರ್ದೇಶಿಸಿದರು. ವಾಹನಗಳನ್ನು ಚಂದಾವರ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಟ್ಟರು.

    ಅಪಘಾತದಿಂದ ಟ್ಯಾಂಕರ್​ನಲ್ಲಿ ಚಿಕ್ಕದಾಗಿ ಸೋರಿಕೆಯ ಅನುಮಾನ ವ್ಯಕ್ತವಾಗಿದ್ದರಿಂದ ಇಂಡಿಯನ್ ಗ್ಯಾಸ್ ಕಂಪನಿಯ ತಂತ್ರಜ್ಞ ರು ಆಗಮಿಸಿ ಪರಿಶೀಲಿಸಿದರು. ಸಂಭವನೀಯ ಸೋರಿಕೆಯ ತುರ್ತು ಕ್ರಮಗಳೊಂದಿಗೆ ಸಂಜೆಯ ಹೊತ್ತಿಗೆ ಟ್ಯಾಂಕರ್ ತೆರವುಗೊಳಿಸಿ ಹೆದ್ದಾರಿಯಲ್ಲಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಯಿತು.

    ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬರ್ಗಿ ದುರಂತದ ನೆನಪು

    2015 ರ ಆಗಸ್ಟ್ 31 ರಂದು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಮಟಾ ತಾಲೂಕಿನ ಬರ್ಗಿ ಬಳಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿತ್ತು. ಟ್ಯಾಂಕರ್​ನಿಂದ ಹೊರ ಬಂದ ಗ್ಯಾಸ್​ನಿಂದ ಊರಲೆಲ್ಲ ಬೆಂಕಿ ಹೊತ್ತಿಕೊಂಡು 14 ಜನ ಮೃತಪಟ್ಟಿದ್ದರು. ಒಂದು ಕುಟುಂಬ ಸಂಪೂರ್ಣ ನಾಶವಾಗಿತ್ತು. ಇದರಿಂದ ಗ್ಯಾಸ್ ಟ್ಯಾಂಕರ್ ಎಲ್ಲೇ ಉರುಳಿ ಬಿದ್ದರೂ ಸುತ್ತಲಿನ ಜನ ಆತಂಕಪಡುವಂತಾಗಿದೆ. ಬರ್ಗಿ ಘಟನೆಯ ನಂತರ ಜಿಲ್ಲೆಯ ಹೆದ್ದಾರಿಯಲ್ಲಿ ಓಡಾಡುವ ಟ್ಯಾಂಕರ್​ಗಳಲ್ಲಿ ಕಡ್ಡಾಯವಾಗಿ ಇಬ್ಬರು ಚಾಲಕರನ್ನು ಹೊಂದಿರಬೇಕು. ಅನಿಲ ಕಂಪನಿಗಳು ಜಿಲ್ಲೆಯಲ್ಲಿ ಅನಿಲ ದುರಂತ ಸಂಭವಿಸಿದಾಗ ಸ್ಪಂದನೆಗಾಗಿ ಒಂದು ತಂಡವನ್ನು ರಚಿಸಬೇಕು ಎಂಬುದು ಸೇರಿ ಹಲವು ಷರತ್ತುಗಳನ್ನು ಜಿಲ್ಲಾಡಳಿತ ವಿಧಿಸಿತ್ತು. ರಾತ್ರಿ ಸಂಚಾರ ನಿಷೇಧಿಸಲಾಗಿತ್ತು. ಕೆಲ ದಿನ ಪಾಲಿಸಿದ ಅನಿಲ ಕಂಪನಿಗಳು ನಂತರ ಅವೆಲ್ಲವನ್ನೂ ಗಾಳಿಗೆ ತೂರಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts