More

    ಸ್ವಾವಲಂಬಿ ಬದುಕಿಗೆ ಉನ್ನತ ಶಿಕ್ಷಣ ಅತ್ಯಗತ್ಯ

    ಬೆಳಗಾವಿ: ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಉನ್ನತ ಶಿಕ್ಷಣ ಅತ್ಯಗತ್ಯ. ಜ್ಞಾನ ಗಳಿಸುವುದು ಶಿಕ್ಷಣದ ಮೂಲ ಉದ್ದೇಶವಾಗಿದೆ. ಸ್ವಯಂ ಉದ್ಯೋಗದ ಕಡೆಗೆ ವಿದ್ಯಾರ್ಥಿಗಳಲ್ಲಿ ಒಲವು ಬೆಳೆಸಿ, ದೇಶದ ಪ್ರಗತಿಗೆ ಕೈ ಜೋಡಿಸಲು ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಕರೆ ನೀಡಿದರು.

    ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವ ಸಮುದಾಯ ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿಭಾಯಿಸಿ ‘ಏಕ ಭಾರತ ಶ್ರೇಷ್ಠ ಭಾರತ’ ನಿರ್ಮಿಸುವ ಗುರಿ ಹೊಂದಬೇಕು. ಘಟಿಕೋತ್ಸವ ಸಮಾರಂಭದ ಹಿನ್ನೆಲೆ ಇಂದು ನಿನ್ನೆಯದಲ್ಲ. ಗುರುಕುಲ ಕಾಲದಿಂದ ನಿರಂತರವಾಗಿ ನಡೆದುಬರುತ್ತಿದೆ. ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಇದೊಂದು ಖುಷಿ ಮತ್ತು ಭಾವನಾತ್ಮಕ ದಿನವಾಗಿದೆ ಎಂದರು. ದೆಹಲಿ ಅಂತಾರಾಷ್ಟ್ರೀಯ ಜೆನಿಟಿಕ್ ಇಂಜಿನಿಯರಿಂಗ್ ಮತ್ತು ಬಯೋಟೆಕ್ನಾಲಜಿ ಕೇಂದ್ರದ ನಿರ್ದೇಶಕ, ನ್ಯಾಕ್ ಕಾರ್ಯಕಾರಿ ಸಮಿತಿ ಚೇರ್ಮನ್ ಪ್ರೊ. ವಿ.ಎಸ್. ಚವ್ಹಾಣ ಮಾತನಾಡಿ, ಜ್ಞಾನ ಸೃಷ್ಟಿಸುವುದರ ಜತೆಗೆ ಮನುಕುಲದ ಭವಿಷ್ಯದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಯುವ ಸಮುದಾಯವನ್ನು ಅಣಿಗೊಳಿಸುವುದು ಉನ್ನತ ಶಿಕ್ಷಣದ ಉದ್ದೇಶವಾಗಿದೆ. ಭಾರತದ ಉನ್ನತ ಶೈಕ್ಷಣಿಕ ವ್ಯವಸ್ಥೆಯು ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರಸ್ತುತ ದೇಶದಲ್ಲಿ 960ಕ್ಕೂ ಅಧಿಕ ವಿಶ್ವವಿದ್ಯಾಲಯಗಳಿದ್ದು, 45 ಸಾವಿರ ಕಾಲೇಜ್‌ಗಳಲ್ಲಿ 3.7 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಗುರಿ ಸಾಧನೆಗೆ ಪರಿಶ್ರಮ ವಹಿಸಬೇಕು ಎಂದರು.

    ಮೂವರಿಗೆ ಡಾಕ್ಟರೇಟ್ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಆರ್‌ಸಿಯು ವತಿಯಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಪದ್ಮಶ್ರೀ ಪುರಸ್ಕೃತ ಡಾ. ಎಚ್.ಸುದರ್ಶನ ಬಲ್ಲಾಳ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ವಾದಿರಾಜ ದೇಶಪಾಂಡೆ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಸಂಗೀತ ಕ್ಷೇತ್ರದ ಸಾಧಕ ಪಂಡಿತ್ ರಾಜೀವ ತಾರಾನಾಥ ಅವರಿಗೂ ಗೌರವ ಡಾಕ್ಟರೇಟ್ ಪ್ರಕಟಿಸಲಾಗಿದ್ದು, ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು.

    ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚನ್ನಮ್ಮಳ ಹೆಸರಿನ ಈ ವಿವಿಗೆ ಅವಳ ಹೋರಾಟ ಪ್ರೇರಣಾಶಕ್ತಿಯಾಗಲಿ. ಸರ್ಕಾರ ನೀಡಿರುವ 127 ಎಕರೆ ಜಾಗದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ಯಾಂಪಸ್ ಶೀಘ್ರ ನಿರ್ಮಾಣಗೊಂಡು, ಎಲ್ಲ ಸೌಕರ್ಯಗಳು ವಿದ್ಯಾರ್ಥಿಗಳಿಗೆ ಲಭಿಸುವಂತಾಗಲಿ. ಝಾನ್ಸಿರಾಣಿ ಲಕ್ಷ್ಮೀಬಾಯಿಯ ಕರ್ಮಭೂಮಿ ನೋಡಿದ್ದ ನನಗೆ ರಾಣಿ ಚನ್ನಮ್ಮಳ ಕರ್ಮಭೂಮಿಗೆ ಭೇಟಿ ನೀಡಿದ ಬಳಿಕ ಧನ್ಯತಾಭಾವ ಮೂಡಿತು.
    | ಥಾವರಚಂದ್ ಗೆಹ್ಲೋತ್ ರಾಜ್ಯಪಾಲ

    ನಾನೂ ಉಪನ್ಯಾಸಕಿ ಆಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವೆ. ಉಪನ್ಯಾಸಕಿಯಾಗುವ ಗುರಿಯೊಂದಿಗೆ ನಿವೃತ್ತಿಯ ಅಂಚಿನಲ್ಲಿರುವ ತಂದೆಯ ಜವಾಬ್ದಾರಿ ಹೊರುವ ತುಡಿತವಿದೆ.
    ಸೌಮ್ಯಾ ಪರಪ್ಪ ಕುಂಬಾರ
    ಎರಡು ಸುವರ್ಣ ಪದಕ ಪಡೆದ ಬಾಗಲಕೋಟೆ ಜಿಲ್ಲೆ
    | ಬದಾಮಿ ತಾಲೂಕಿನ ಕಾರಟಗಿ ಗ್ರಾಮದ ವಿದ್ಯಾರ್ಥಿನಿ.

    ನಮ್ಮ ಮನೆತನದಲ್ಲಿ ಹೆಚ್ಚು ಕಲಿತವರಿಲ್ಲ. ಬಿಎ ಕಲಿತಿದ್ದೇ ಹೆಚ್ಚು. ಮಗಳ ಸಾಧನೆ ಖುಷಿ ತಂದಿದೆ. ಅವಳ ಬಯಕೆಯಂತೆ ಆಕೆ ಉಪನ್ಯಾಸಕಿ ಆಗಲು ಬೇಕಾದ ಎಲ್ಲ ನೆರವು ನೀಡುತ್ತೇನೆ. ಮಕ್ಕಳು ಓದಿನಲ್ಲಿ ಮುಂದುವರಿ ಯುತ್ತಿದ್ದಾರೆ ಎಂದರೆ ನಮ್ಮಂಥ ತಂದೆ-ತಾಯಿಗೆ ಅದಕ್ಕಿಂತ ಭಾಗ್ಯ ಬೇರೇನಿದೆ.
    | ಪರಪ್ಪ ಕುಂಬಾರ ಸೌಮ್ಯಾಳ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts