More

    ಸ್ವಯಂಪ್ರೇರಿತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ, ದೇವನಹಳ್ಳಿಯಲ್ಲಿ ಭೂಸ್ವಾಧೀನ ವಿರೋಧಿ ಪ್ರತಿಭಟನೆ, ವಿವಿಧ ಸಂಘಟನೆಗಳ ಸಾಥ್

    ದೇವನಹಳ್ಳಿ: ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಚನ್ನರಾಯಪಟ್ಟಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 75ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ಕರೆ ನೀಡಿದ್ದ ದೇವನಹಳ್ಳಿ ಸ್ವಯಂಪ್ರೇರಿತ ಬಂದ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು.

    ವರ್ತಕರ ಸಂಘ ಹಾಗೂ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿ ಪ್ರತಿಭಟನಾ ಮೆರವಣಿಗೆಗೆ ಸಾಥ್ ನೀಡಿದವು. ಪಟ್ಟಣದಲ್ಲಿ ಶೇ.70 ಅಂಗಡಿಗಳು ಮುಚ್ಚಿದ್ದರೆ ಉಳಿದಂತೆ ವರ್ತಕರು ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ವಾಹನ ಸಂಚಾರಕ್ಕೆ ಯಾವುದೇ ತಡೆಯಾಗಲಿಲ್ಲ, ಶಾಲಾ-ಕಾಲೇಜು, ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು, ಜನಜೀವನ ಸಹಜವಾಗಿತ್ತು.

    ಪಂಜಿನ ಮೆರವಣಿಗೆ: ಬೆಳಗ್ಗೆ ಪಂಜಿನ ಮೆರವಣಿಗೆಯೊಂದಿಗೆ ಆರಂಭವಾದ ರೈತರ ಪ್ರತಿಭಟನೆಯನ್ನು ಪೊಲೀಸರು ತಡೆಯಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ-ನೂಕಾಟ, ಮಾತಿನ ಚಕಮಕಿ ನಡೆಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

    ಸರ್ಕಾರದ ವಿರುದ್ಧ ೋಷಣೆ ಕೂಗುತ್ತಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು ತಾಲೂಕು ಕಚೇರಿ ಮುಂದೆ ಸಮಾವೇಶಗೊಂಡರು.

    ಎಂಟಿಬಿ ಸಂಧಾನ: ಸ್ಥಳಕ್ಕೆ ಸಚಿವರು ಬರಲೇಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಉಸ್ತುವಾರಿ ಸಚಿವ ಸುಧಾಕರ್ ಹಾಗೂ ಕೈಗಾರಿಕಾ ಮಂತ್ರಿ ಮುರುಗೇಶ್ ನಿರಾಣಿ ಅನುಪಸ್ಥಿತಿಯಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಸ್ಥಳಕ್ಕೆ ಆಗಮಿಸಿ ಹೋರಾಟಗಾರರ ಮನವಿ ಸ್ವೀಕರಿಸಿದರು. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡುವ ಮೂಲಕ ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಿದರು.

    ಇಲ್ಯಾರೂ ದಲ್ಲಾಳಿಗಳಿಲ್ಲ: 75ದಿನಗಳಿಂದ ಧರಣಿ ನಡೆಸುತ್ತಿರುವವರು ರೈತರೇ ಅಲ್ಲ ಎಂದಿರುವ ಸಚಿವ ನಿರಾಣಿ ಅವರ ಹೇಳಿಕೆ ಹೋರಾಟಗಾರರ ಸಹನೆಯನ್ನು ಕೆಣಕಿದೆ. ಅಂಥ ಅನುಮಾನವಿದ್ದರೆ ಸ್ಥಳಕ್ಕೆ ಬಂದು ವಾಸ್ತವಾಂಶ ಪರಿಶೀಲನೆ ನಡೆಸಲಿ ಎಂದು ಮುಖಂಡ ಕಾರಹಳ್ಳಿ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

    ಈ ಭೂಮಿ ವ್ಯವಹಾರದಲ್ಲಿ ದುಡ್ಡುಹೊಡೆದು ಸಿಎಂ ಆಗುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ, ಯಾವುದೇ ಕಾರಣಕ್ಕೂ ನಾವು ಭೂಮಿ ಬಿಟ್ಟುಕೊಡುವುದಿಲ್ಲ. ಈ ಬಗ್ಗೆ ಸರ್ಕಾರದೊಂದಿಗೆ ಮಾತನಾಡಿ ನಮ್ಮ ಭೂಮಿ ಉಳಿಸಿಕೊಡಬೇಕು ಎಂದು ಎಂಟಿಬಿ ನಾಗರಾಜ್ ಅವರಿಗೆ ಮನವಿ ಮಾಡಿದರು.

    ಸಂಘಟನೆಗಳು ಭಾಗಿ: ರಾಜ್ಯ ರೈತ ಸಂಘ ಹಸಿರುಸೇನೆ, ಕರವೇ ಕನ್ನಡಿಗರ ಸಾರಥ್ಯದಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ, ಜೆಡಿಎಸ್, ಎಎಪಿ, ಬಿಎಸ್‌ಪಿ, ಕೆಆರ್‌ಎಸ್ ಸೇರಿ ವಿವಿಧ ಸಂಘಟನೆಗಳು ಪಾಲ್ಗೊಂಡಿದ್ದವು.

    ಶೀಘ್ರ ರೈತರ ಸಭೆಗೆ ಮುಹೂರ್ತ: ಕೆಐಎಡಿಬಿ ಭೂಸ್ವಾಧೀನ ವಿವಾದಕ್ಕೆ ಸಂಬಂಧಪಟ್ಟಂತೆ ಶೀಘ್ರದಲ್ಲೇ ರೈತ ಮುಖಂಡರ ಸಭೆ ಕರೆದು ಸಮಸ್ಯೆ ಬಗೆಹರಿಸಿಕೊಡುವಂತೆ ಸರ್ಕಾರಕ್ಕೆ ಒತ್ತಡ ತರಲಾಗುವುದು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

    ಹೋರಾಟಗಾರರ ಮನವಿ ಸ್ವೀಕರಿಸಿದ ಸಚಿವರು, ಈಗಾಗಲೇ ಉಸ್ತುವಾರಿ ಮಂತ್ರಿಗಳು ಹಾಗೂ ಕೈಗಾರಿಕಾ ಖಾತೆ ಸಚಿವರು ರೈತ ಮುಖಂಡರ ಜತೆ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ. ಭೂಸ್ವಾಧೀನದ ಜಮೀನಿಗೆ ಹೆಚ್ಚಿನ ಹಣ ನೀಡುವುದು, ರೈತ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಹಾಗೂ ಶೀಘ್ರ ಹಣ ಬಿಡುಗಡೆಗೆ ಬೇಡಿಕೆ ಇಟ್ಟಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಏತನ್ಮಧ್ಯೆ ದಲ್ಲಾಳಿಗಳ ಹುನ್ನಾರ ನಡೆಯುತ್ತಿರುವ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಇದರ ಸತ್ಯಾಸತ್ಯತೆ ಪರಿಶೀಲಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಸಭೆ ಕರೆಯುವಂತೆ ಮುಖ್ಯಮಂತ್ರಿಗಳಿಗೆ ಒತ್ತಡ ಹೇರಲಾಗುವುದು ಎಂದು ಭರವಸೆ ನೀಡಿದರು.

    ದೇವನಹಳ್ಳಿಯಲ್ಲೇ ಹೆಚ್ಚು: ಈ ಹಿಂದೆಯೇ ದೇವನಹಳ್ಳಿ ತಾಲೂಕಿನಲ್ಲಿ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ, ಏರ್‌ಪೋರ್ಟ್ ನಿರ್ಮಾಣದ ವೇಳೆಯೂ ಎಕರೆಗಟ್ಟಲೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈಗಲೂ ಕೈಗಾರಿಕಾವಲಯಕ್ಕೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲೇ ಜಮೀನು ಸ್ವಾಧೀನ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿರುವುದು ಕಂಡುಬಂದಿದೆ. ರೈತರು ಜಮೀನು ಕಳೆದುಕೊಂಡು ಇಲ್ಲಿಂದ ಒಕ್ಕಲೇಳುವ ಆತಂಕ ತೋಡಿಕೊಂಡಿದ್ದಾರೆ. ಈ ಎಲ್ಲ ಕೋನಗಳಲ್ಲೂ ಪರಿಶೀಲನೆ ನಡೆಸುವಂತೆ ರೈತರ ಪರವಾಗಿ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts