More

    ಸ್ವಚ್ಛ ಸರ್ವೇಕ್ಷಣೆ ದಾವಣಗೆರೆಗೆ 169ನೇ ಸ್ಥಾನ  – ಪಾಲಿಕೆ ಆಯುಕ್ತೆ ರೇಣುಕಾ, ಮೇಯರ್ ವಿನಾಯಕ ಹರ್ಷ 

    ದಾವಣಗೆರೆ: ಕೇಂದ್ರದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ, ಒಂದು ಲಕ್ಷಕ್ಕಿಂತಲೂ ಅಧಿಕ ಜನಸಂಖ್ಯೆಯಳ್ಳ ನಗರಗಳ ಪೈಕಿ ದೇಶದಲ್ಲೇ ದಾವಣಗೆರೆ 169ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಆರನೇ ಸ್ವಚ್ಛ ನಗರವಾಗಿದೆ ಎಂದು ಪಾಲಿಕೆ ಆಯುಕ್ತೆ ಎನ್. ರೇಣುಕಾ, ಮೇಯರ್ ವಿನಾಯಕ ಪೈಲ್ವಾನ್ ತಿಳಿಸಿದರು.
    ಕಳೆದ ಬಾರಿ 223ನೇ ಸ್ಥಾನದಲ್ಲಿದ್ದ ನಗರ, ಇಲ್ಲಿನ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದಾಗಿ ಈ ಗೌರವ ದೊರೆತಿದೆ. ಕಳೆದ ಬಾರಿ ರಾಜ್ಯದಲ್ಲೇ 12ನೇ ಸ್ಥಾನದಲ್ಲಿತ್ತು. ಕೇಂದ್ರ ನಡೆಸಿದ ಸ್ಟಾರ್ ರೇಟಿಂಗ್ ಪಟ್ಟಿಯಲ್ಲಿ ಮೊದಲ ಬಾರಿಗೆ ದಾವಣಗೆರೆಗೆ ಅವಕಾಶವಾಗಿದೆ ಎಂದು ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಹರ್ಷ ವ್ಯಕ್ತಪಡಿಸಿದರು.
    ಸಾರ್ವಜನಿಕರು ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಪೌರಕಾರ್ಮಿಕರಿಗೆ ನೀಡಬೇಕು. ಎಲ್ಲೆಂದರಲ್ಲಿ ಕಸ ಹಾಕುವವರಿಗೆ 500 ರೂ.ನಿಂದ 10 ಸಾವಿರ ರೂ. ದಂಡ ವಿಧಿಸಲು ಅವಕಾಶ ಇದೆ ಎಂದರು.

    ವರ್ಷದಲ್ಲಿ 3.5 ಲಕ್ಷರೂ. ದಂಡ ಸಂಗ್ರಹ

    ಕಳೆದ ಒಂದು ವರ್ಷದಲ್ಲಿ 908 ಪ್ರಕರಣಗಳಿಂದ 3.5 ಲಕ್ಷ ರೂ.ಗಳ ದಂಡ ಮೊತ್ತ ಸಂಗ್ರಹಿಸಲಾಗಿದೆ.
    ಪಾಲಿಕೆ ವ್ಯಾಪ್ತಿಯಲ್ಲಿ 45 ಸಾವಿರ ಖಾಲಿ ನಿವೇಶನಗಳಿದ್ದು ಅನೈರ್ಮಲ್ಯತೆ ಹಿನ್ನೆಲೆಯಲ್ಲಿ ಇದುವರೆಗೆ ದಂಡ ವಿಧಿಸಿಲ್ಲ. ಖಾಲಿ ನಿವೇಶನಗಳನ್ನು ಅದರ ಮಾಲೀಕರೇ ಸ್ವಚ್ಛಗೊಳಿಸಬೇಕು. ಇಲ್ಲವೇ ಪಾಲಿಕೆಯಿಂದ ಸೂಕ್ತ ಶುಲ್ಕ ನಿಗದಿಪಡಿಸಿ ಸ್ವಚ್ಛಗೊಳಿಸಿಕೊಡುವ ಸಂಬಂಧ ಶೀಘ್ರವೇ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
    ನೊಯಿಡಾ ಮಾದರಿ ಕಟ್ಟಡ ತ್ಯಾಜ್ಯ ಮರುಬಳಕೆ
    ನಗರದಲ್ಲಿ ನಿತ್ಯ 170 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಪಾಲಿಕೆಯಲ್ಲಿ 93 ಕಸ ಸಂಗ್ರಹಿಸುವ ಆಟೊಗಳಿವೆ. ಮನೆ ಮನೆ ಕಸ ಸಂಗ್ರಹ ಹಿನ್ನೆಲೆಯಲ್ಲಿ ಅಗತ್ಯವಿರುವ 150 ಆಟೊಗಳನ್ನು ಹಂತಹಂತವಾಗಿ ಖರೀದಿಸುವ ಇರಾದೆ ಇದೆ. ಮನೆ ಕಟ್ಟಡ ನಿರ್ಮಾಣದ ಬಳಿಕ ತ್ಯಾಜ್ಯವನ್ನು ನಿಗದಿತ ಸ್ಥಳದಲ್ಲಿ ಹಾಕಲು ಜಾಗ ಗುರುತಿಸಲಾಗಿದೆ. ನೊಯಿಡಾ ಮಾದರಿಯಲ್ಲಿ ಕಟ್ಟಡ ತ್ಯಾಜ್ಯ ಪುನರ್ಬಳಕೆಗೆ 10 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
    ರಸ್ತೆಗಳು, ವೃತ್ತಗಳು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ಪಾಲಿಕೆಯ ಆರೋಗ್ಯ ನಿರೀಕ್ಷಕರು ಸ್ಥಳದಲ್ಲೇ ದಂಡ ವಿಧಿಸಲಿದ್ದಾರೆ. ಅಲ್ಲದೆ ಸಂಗ್ರಹಿಸುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಿಮೆಂಟ್ ಕಾರ್ಖಾನೆಗಳಿಗೆ ನೀಡಲಾಗುತ್ತಿದೆ. ಅಲ್ಲದೆ ಟೈಲ್ಸ್ ನಿರ್ಮಾಣ ಸಂಬಂಧ 2-3 ಕಂಪನಿಗಳು ಭೇಟಿ ನೀಡಿವೆ. ಅಲ್ಲದೆ ಸಿಎನ್‌ಜಿ ಇಂಧನ ತಯಾರಿಸುವ ಪ್ರಸ್ತಾವನೆಯೂ ಇದೆ ಎಂದು ವಿವರಿಸಿದರು.
    ನಗರದಲ್ಲಿನ 29 ಇ-ಟಾಯ್ಲೆಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಸ್ಮಾರ್ಟ್‌ಸಿಟಿ ಎಂಡಿಗೆ ಪತ್ರ ಬರೆಯಲಾಗಿದೆ. 39 ಇತರೆ ಶೌಚಗೃಹಗಳಲ್ಲಿ 8 ದುರಸ್ತಿ ಆಗಬೇಕಿದೆ. ಪಾಲಿಕೆ ಆವರಣದ ಶೌಚಗೃಹಕ್ಕೆ ಫಲಕ ಹಾಕಿ ಬಳಕೆಗೆ ಗಮನ ಹರಿಸಲಾಗುವುದು ಎಂದು ತಿಳಿಸಿದರು.

    1.43 ಲಕ್ಷ ಆಸ್ತಿಗಳ ಆನ್‌ಲೈನ್ ನೋಂದಣಿ
    ನಗರದಲ್ಲಿ 1.61 ಲಕ್ಷ ಆಸ್ತಿ (ಮನೆ/ಕಟ್ಟಡ)ಗಳಿದ್ದು, ಆ ಪೈಕಿ 1.43 ಲಕ್ಷ ಆಸ್ತಿಗಳು ಆನ್‌ಲೈನ್‌ನಲ್ಲಿ ನೋಂದಣಿಯಾಗಿದ್ದು ಇದರಡಿ ಇ-ಸ್ವತ್ತು, ಖಾತಾ ಎಸ್ಟಾಟ್‌ಗೆ ನೇರವಾಗಿ ನಮೂನೆ 2 ಅನ್ನು ಸಲ್ಲಿಸಬಹುದು ಎಂದರು. 2014-15ರ ಸರ್ವೇ ಪ್ರಕಾರ ನಗರದಲ್ಲಿ 28 ಸಾವಿರ ವಸತಿ ರಹಿತರಿದ್ದಾರೆ. ನಗರದಲ್ಲಿ 966 ಮನೆಗಳ ಹಕ್ಕುಪತ್ರ ನೀಡಬೇಕಿದ್ದು ಲೋಕಾಯುಕ್ತ ದಾವೆ ಹಿನ್ನೆಲೆಯಲ್ಲಿ ಬಾಕಿ ಇವೆ ಎಂದರು. ಪಾಲಿಕೆ ಸದಸ್ಯರಾದ ಎ. ನಾಗರಾಜ್, ಅಬ್ದುಲ್ ಲತೀಫ್, ಗಡಿಗುಡಾಳು ಮಂಜುನಾಥ್ ಇದ್ದರು.
    ನಾಮಫಲಕ ಅಳವಡಿಕೆಗೆ ಗಡುವು
    ರಾಜ್ಯ ಸರ್ಕಾರದ ನಿರ್ದೇಶನದಂತೆ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ. 60:40 ರ ಅನುಪಾತದಲ್ಲಿ ಕನ್ನಡಕ್ಕೆ ಆದ್ಯತೆ ನಿಡಬೇಕಿದೆ. ಮಾಸಾಂತ್ಯದವರೆಗೆ ಗಡುವು ನೀಡಲಾಗಿದೆ. ಬದಲಾವಣೆ ಮಾಡದ ಅಂಗಡಿಗಳಿಗೆ ದಂಡ ವಿಧಿಸುವ ಜತೆಗೆ ಪರವಾನಗಿ ರದ್ದುಪಡಿಸಲಾಗುವುದು ಎಂದು ಮೇಯರ್ ವಿನಾಯಕ ಪೈಲ್ವಾನ್ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts