More

    ಸ್ವಂತ ಕಟ್ಟಡಕ್ಕೆ ಅನುದಾನ ತರಲು ಯತ್ನ

    ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಹಾಲು ಉತ್ಪಾದಕ ಸಂಘಗಳಿಗೆ ಸ್ವಂತ ಕಟ್ಟಡ ಹೊಂದಲು ಅನುದಾನ ಬಿಡುಗಡೆ ಸಂಬಂಧ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಹಾಲು ಮಹಾಮಂಡಳಗಳ ಗಮನ ಸೆಳೆಯಲಾಗುವುದು ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹೇಳಿದರು.

    ನಗರದ ಟಿ.ಎಂ.ಎಸ್. ಸಭಾಂಗಣದಲ್ಲಿ ಜಿಲ್ಲೆಯ ಹಾಲು ಉತ್ಪಾದಕರ ಸಹಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರು ಮತ್ತು ಕೃತಕ ಗರ್ಭಧಾರಣೆ ಕಾರ್ಯಕರ್ತರಿಗಾಗಿ ಆಯೋಜಿಸಿದ್ದ ಒಂದು ದಿನದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

    ಹಾಲಿನ ಉತ್ಪಾದನೆ ಹೆಚ್ಚಳದಲ್ಲಿ ಕೃತಕ ಗರ್ಭಧಾರಣೆ ಕಾರ್ಯಕರ್ತರ ಕಾರ್ಯ ಶ್ಲಾಘನೀಯ. ಕರೊನಾ ಸಂದರ್ಭದಲ್ಲಿ ಅವರ ಸೇವೆ ಅವಿರತವಾಗಿದೆ ಎಂದರು.

    ಕೃತಕ ಗರ್ಭಧಾರಣೆ ಕಾರ್ಯಕರ್ತರಿಗೆ ನೀಡಲಾದ ಟ್ಯಾಬ್​ಗೆ ಮಹಾಮಂಡಲ ಹಾಗೂ ಧಾರವಾಡ ಹಾಲು ಒಕ್ಕೂಟದ ಸಹ ಭಾಗಿತ್ವದಲ್ಲಿ ಅಂತರ್ಜಾಲದ ಪ್ಯಾಕ್ ಅನ್ನು ಕಲ್ಪಿಸಿಕೊಟ್ಟಲ್ಲಿ ಕಾರ್ಯಕರ್ತರಿಗೆ ಅನುಕೂಲವಾಗುವುದು ಎಂದು ಹೇಳಿದರು.

    ಮಹಾಮಂಡಳದ ನಿರ್ದೇಶಕ ಡಾ.ಡಿ.ಎನ್. ಹೆಗಡೆ ಮಾತನಾಡಿ, ಆಧುನಿಕ ದಿನಗಳಲ್ಲಿ ಹಾಲು ಉತ್ಪಾದಕರ ಸಂಘಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ. ಆದರೂ ಸಂಘಗಳು ನಡೆದು ಬಂದ ಹಾದಿ ಆದರ್ಶನೀಯ. ಹಾಲಿನ ಹಾಗೂ ರಾಸುಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಮೃದ್ಧಿ ಖನಿಜ ಮಿಶ್ರಣ ಉತ್ಪನ್ನವನ್ನು ಮಹಾಮಂಡಳದ ವತಿಯಿಂದ ಪ್ರಾರಂಭಿಸುವುದಾಗಿ ತಿಳಿಸಿದರು.

    ಮಹಾಮಂಡಳದ ಜಂಟಿ ನಿರ್ದೇಶಕ ಡಾ. ಸದಾಶಿವ ಮಾತನಾಡಿ, ಇಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕೃತಕ ಗರ್ಭಧಾರಣೆ ಮಾಹಿತಿಯನ್ನು ಅತ್ಯಂತ ಸುಲಭವಾಗಿ ಪಡೆಯಬಹುದಾಗಿದೆ ಎಂದರು. ಐಎನ್​ಎಪಿಎಚ್ ತಂತ್ರಾಂಶದ ಬಗ್ಗೆ ಕೃತಕ ಗರ್ಭಧಾರಣೆ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಕ್ಷೀರಸಿರಿ ಪ್ರೋತ್ಸಾಹಧನ ತಂತ್ರಾಂಶದ ಕುರಿತು ಕೆಲವು ಉಪಯುಕ್ತ ಮಾಹಿತಿ ನೀಡಲಾಯಿತು.

    ಒಕ್ಕೂಟದ ವತಿಯಿಂದ ಮಹಾಮಂಡಳದ ಡಾ. ಡಿ.ಎನ್. ಹೆಗಡೆ, ಜಂಟಿ ನಿರ್ದೇಶಕ ಡಾ. ಸದಾಶಿವ ಅವರನ್ನು ಸನ್ಮಾನಿಸಲಾಯಿತು. ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ. ನಾಯ್ಕ, ಶಂಕರ ಹೆಗಡೆ, ಒಕ್ಕೂಟದ ವ್ಯವಸ್ಥಾಪಕ ಡಾ. ವೀರೇಶ ತರಲಿ, ಜಿಲ್ಲಾ ಮುಖ್ಯಸ್ಥ ಎಸ್.ಎಸ್. ಬಿಜೂರ್, ಪಶು ವೈದ್ಯಾಧಿಕಾರಿ ಡಾ. ರಾಕೇಶ ಹಾಗೂ ಶಿರಸಿ ಉಪ ವಿಭಾಗದ ವಿಸ್ತರಣಾಧಿಕಾರಿಗಳು ಭಾಗವಹಿಸಿದ್ದರು. ಕೆಎಂಎಫ್ ವಿಸ್ತರಣಾಧಿಕಾರಿ ದಯಾನಂದ ಎ.ಎನ್. ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts