More

    ಸ್ನೇಹ, ಪ್ರೀತಿ, ಮದುವೆ, ಧೋಖಾ..!

    ರಾಣೆಬೆನ್ನೂರ: ಅವರದ್ದು ನಾಲ್ಕು ವರ್ಷದ ಪ್ರೀತಿ. ಯುವಕನ ಕುಟುಂಬಸ್ಥರ ವಿರೋಧದ ನಡುವೆ ಕಳೆದ ಡಿಸೆಂಬರ್​ನಲ್ಲಿ ಮದುವೆ ಕೂಡ ನಡೆದು ಹೋಯಿತು. ಆದರೆ, ಈಗ ಪತಿ ನಾಪತ್ತೆದ್ದಾನೆ. 2 ತಿಂಗಳು ಕಳೆಯುತ್ತ ಬಂದರೂ ಬಾರದ ಪತಿ ನೆನಪಿನಲ್ಲಿ ಪತ್ನಿ ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾಳೆ…!

    ನಗರದ ಮೇಡ್ಲೇರಿ ರಸ್ತೆಯ ಕೆಎಚ್​ಬಿ ಕಾಲನಿಯಲ್ಲಿ ವಾಸವಾಗಿರುವ ಪೂಜಾಳ ಕಥೆಯಿದು. ಈಕೆಯ ಪತಿ ನವೀನಕುಮಾರ ಕರಬಸಪ್ಪ ಮಾಕನೂರ (27) ನಾಪತ್ತೆಯಾಗಿ ಎರಡು ತಿಂಗಳು ಕಳೆಯುತ್ತ ಬಂದಿದೆ. ಪತಿಯನ್ನು ಹುಡುಕಿಕೊಡುವಂತೆ ಪೂಜಾ ಶಹರ ಠಾಣೆ ಪೊಲೀಸರ ಮೊರೆ ಹೋಗಿದ್ದಾಳೆ.

    ಪೂಜಾ ಹಾಗೂ ನವೀನಕುಮಾರ ಫೋನ್​ನಲ್ಲಿ ಪರಿಚಯವಾದವರು. ಆರಂಭದ ಸ್ನೇಹ ಪ್ರೀತಿಗೆ ತಿರುಗಿತ್ತು. ನಾಲ್ಕು ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಈ ವಿಚಾರ ಎರಡೂ ಮನೆಯವರಿಗೆ ತಿಳಿದಾಗ ಇಬ್ಬರಿಗೂ ಬುದ್ಧಿವಾದ ಹೇಳಿ ದೂರ ಮಾಡಿದ್ದರು. ಆದರೆ, ಪೂಜಾ ಹಾಗೂ ನವೀನಕುಮಾರ ನಡುವಿನ ಪ್ರೀತಿ ದೂರವಾಗಿರಲಿಲ್ಲ.

    ಡಿಸೆಂಬರ್16 ರಂದು ನವೀನಕುಮಾರ ಪೂಜಾಳನ್ನು ಭೇಟಿಯಾಗಲು ಆಕೆಯ ಮನೆಗೆ ಬಂದಿದ್ದ. ಆಗ ಯುವತಿ ಕುಟುಂಬಸ್ಥರು ಹಾಗೂ ಬಡಾವಣೆ ಮುಖಂಡರು ನವೀನಕುಮಾರ ಜತೆ ಪೂಜಾಳ ಮದುವೆ ಮಾಡಿಸಿದ್ದರು. ಆದರೆ ಮದುವೆಗೆ ನವೀನಕುಮಾರ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಆಗ ಪೊಲೀಸರ ಮಧ್ಯಸ್ಥಿಕೆಯಲ್ಲಿ ರಾಜಿಸಂಧಾನ ಮಾಡಲಾಗಿತ್ತು.

    ನಾಪತ್ತೆಯಾದ…: ‘ಮದುವೆ ನಂತರ ಇಬ್ಬರೂ ಬಾಡಿಗೆ ಮನೆ ಮಾಡಿಕೊಂಡು ಜೀವನ ಮಾಡಿಕೊಂಡಿದ್ದೆವು. ನವೀನಕುಮಾರ ಕಾರು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಆದರೆ, ಕೆಲವೇ ದಿನದಲ್ಲಿ ಆತ ಅವರ ಮನೆಯವರೊಂದಿಗೆ ಮೊಬೈಲ್​ನಲ್ಲಿ ಮಾತನಾಡಲು ಶುರು ಮಾಡಿದ್ದ. ಆತನ ಮನೆಯವರು ಏನು ಹೇಳಿದರೋ ಗೊತ್ತಿಲ್ಲ. ಕೆಲವೇ ದಿನದಲ್ಲಿ ಆತ ಡಿವೋರ್ಸ್ ಕೊಡು ಎಂದು ಪೀಡಿಸಲು ಶುರು ಮಾಡಿದ. ನಾನು ಯಾವ ಕಾರಣಕ್ಕೂ ಡಿವೋರ್ಸ್ ಕೊಡಲ್ಲ ಎಂದು ಹೇಳಿದ್ದೇನೆ. ಇದಾದ ನಂತರ ಜ. 11ರಂದು ಧರ್ಮಸ್ಥಳಕ್ಕೆ ಬಾಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ವಾಪಸ್ ಮನೆಗೆ ಬಂದಿಲ್ಲ. ಅಂದೇ ರಾತ್ರಿ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಆದರೂ ಅವರು ಬರುತ್ತಾರೆ ಎಂದು ಕಾದು ನೋಡಿದೆ. ತಿಂಗಳಾದರೂ ಬರಲಿಲ್ಲ. ಹೀಗಾಗಿ ಪೊಲೀಸರ ಮೊರೆ ಹೋಗಿದ್ದೇನೆ’ ಎಂದು ಪೂಜಾ ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡಳು.

    ಪತ್ತೆ ಹಚ್ಚದ ಪೊಲೀಸರು…! ನವೀನಕುಮಾರ ನಾಪತ್ತೆಯಾದ ಕುರಿತು ಪೂಜಾ ಫೆ. 7ರಂದೇ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 20 ದಿನ ಕಳೆದರೂ ಇಂದಿಗೂ ಪೊಲೀಸರು ಆತನನ್ನು ಪತ್ತೆ ಮಾಡಿಲ್ಲ. ಆತ ಎಲ್ಲಿದ್ದಾನೆ ಎನ್ನುವ ಸುಳಿವೂ ಪೊಲೀಸರಿಗೆ ಸಿಕ್ಕಿಲ್ಲ. ನಿತ್ಯ ಠಾಣೆಗೆ ಎಡತಾಕುವ ಪೂಜಾ, ಪೊಲೀಸರು ಕೇಳಿದ ಎಲ್ಲ ಮಾಹಿತಿ ನೀಡುತ್ತಿದ್ದಾಳೆ. ಆದರೆ, ಪೊಲೀಸರು ಮಾತ್ರ ಇಂದಿಗೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ.

    ಪತಿ ಕುಟುಂಬದವರ ಕೈವಾಡ: ಪೂಜಾ, ನವೀನಕುಮಾರನನ್ನೇ ನಂಬಿಕೊಂಡು ಬಂದವಳು. ಆದರೆ, ಆತನ ಕುಟುಂಬದವರು ಪೂಜಾಳನ್ನು ದೂರ ಮಾಡಲು ನೋಡುತ್ತಿದ್ದಾರೆ. ಸದ್ಯ ಇರುವ ಬಾಡಿಗೆ ಮನೆಯನ್ನು ಖಾಲಿ ಮಾಡುವಂತೆ ಮಾಲೀಕರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಏನು ಮಾಡಬೇಕೆಂದು ತೋಚದಂತಾಗಿದೆ ಎಂದು ಪೂಜಾ ಕಣ್ಣೀರಿಟ್ಟರು. ಆದ್ದರಿಂದ ಮಹಿಳಾ ಆಯೋಗ, ಮಹಿಳಾ ಸಾಂತ್ವನ ಕೇಂದ್ರದವರು ಸೇರಿ ಮಹಿಳಾ ಸಂಘಟನೆಯವರೇ ಪೂಜಾಳ ನೆರವಿಗೆ ಬರಬೇಕಿದೆ.

    ಪತಿಯನ್ನು ನನ್ನಿಂದ ದೂರ ಮಾಡಬೇಕು ಎಂಬ ಉದ್ದೇಶದಿಂದ ಅವರ ಕುಟುಂಬಸ್ಥರು ಎಲ್ಲಿಗೋ ಕಳುಹಿಸಿದ್ದಾರೆ. ಪೊಲೀಸರು ಕೂಡಲೆ ನನ್ನ ಪತಿಯನ್ನು ಹುಡುಕಿಕೊಡುವ ಮೂಲಕ ನನಗೆ ನ್ಯಾಯ ಒದಗಿಸಿಕೊಡಬೇಕು. | ಪೂಜಾ, ನೊಂದ ಯುವತಿ

    ನವೀನಕುಮಾರ ಕಾಣೆಯಾದ ಕುರಿತು ಆತನ ಪತ್ನಿ ದೂರು ನೀಡಿದ್ದಾರೆ. ಆತನ ಪತ್ತೆಗಾಗಿ ಮೊಬೈಲ್ ಕಾಲ್ ಲಿಸ್ಟ್ ಪರಿಶೀಲನೆ ಸೇರಿ ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದೇವೆ. ಆದಷ್ಟು ಬೇಗ ಪತ್ತೆ ಮಾಡಿ ಕರೆತರುತ್ತೇವೆ.
    | ಪ್ರಭು ಕೆಳಗಿನಮನಿ, ಶಹರ ಠಾಣೆ ಪಿಎಸ್​ಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts