More

    ಸ್ನೇಹದ ನಂಟು, ಕರೊನಾ ಅಂಟು!

    ಗದಗ: ಕರೊನಾ ವೈರಸ್ ಸೋಂಕಿತ 80 ವರ್ಷದ ವೃದ್ಧೆ (ಪಿ166) ಸಾವಿನ ನಂತರ ಜಿಲ್ಲೆಯಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗಿರಲಿಲ್ಲ. ಇದರಿಂದ ಜನರು ನಿಟ್ಟುಸಿರು ಬಿಡುವಂತಾಗಿತ್ತು. ಆದರೆ, ಗುರುವಾರ ಮೃತ ವೃದ್ಧೆ ವಾಸವಿದ್ದ ರಂಗನವಾಡಿ ಗಲ್ಲಿಯಲ್ಲಿಯೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಜನರ ನಿದ್ದೆಗೆಡಿಸಿದೆ. ಸೋಂಕಿನಿಂದ ಮೃತಪಟ್ಟ ವೃದ್ಧೆಯ ಮನೆ ಹತ್ತಿರದಲ್ಲೇ ಇದ್ದ ಮಹಿಳೆಯೊಬ್ಬರಿಗೆ (ಪಿ 304) ಸೋಂಕು ತಗುಲಿರುವುದು ದೃಢಪಟ್ಟಿದೆ.

    ಸೋಂಕಿನಿಂದ ಮೃತಪಟ್ಟ ವೃದ್ಧೆಯೊಂದಿಗೆ ಈ ಮಹಿಳೆಗೆ ಸ್ನೇಹವಿತ್ತು. ಇಬ್ಬರೂ ಪ್ರತಿದಿನ ಕಟ್ಟೆ ಮೇಲೆ ಕುಳಿತು ಮಾತನಾಡುತ್ತಿದ್ದರು. ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದರು. ಹೀಗಾಗಿ ಅವರಿಗೂ ಸೋಂಕು ತಗುಲಿದೆ ಎಂದು ಹೇಳಲಾಗಿದೆ. ಇದರಿಂದ ಜಿಲ್ಲೆಯಲ್ಲಿ ತಳಮಳ ಶುರುವಾಗಿದೆ.

    ಪಿ 304 ರೋಗಿ ಮಹಿಳೆಗೆ ಮೂವರು ಪುತ್ರರು, ಓರ್ವ ಪುತ್ರಿ ಸೇರಿ ನಾಲ್ಕು ಜನ ಮಕ್ಕಳಿದ್ದಾರೆ. ಮಹಿಳೆಯ ಪುತ್ರಿಯ ಮದುವೆಯಾಗಿದ್ದು ಹತ್ತಿರದಲ್ಲಿಯೇ ಗಂಡ ಹಾಗೂ ಮಗಳೊಂದಿಗೆ ವಾಸವಾಗಿದ್ದಾರೆ. ಹೀಗಾಗಿ ಸೋಂಕಿತ ಮಹಿಳೆಯ ಮೂವರು ಪುತ್ರರು, ಪುತ್ರಿ, ಅಳಿಯ ಹಾಗೂ ಮೊಮ್ಮಗಳನ್ನು ಗುರುವಾರ ನಸುಕಿನ ಜಾವ 1 ಗಂಟೆಗೆ ಗದಗ ಜಿಮ್್ಸ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಇವರೆಲ್ಲರನ್ನೂ ಗದಗ ಜಿಮ್್ಸ ಆಸ್ಪತ್ರೆಯ ಕ್ವಾರಂಟೈನ್ ವಾರ್ಡ್​ಗೆ ದಾಖಲು ಮಾಡಲಾಗಿದೆ. ಜತೆಗೆ ರೋಗಿ ವಾಸವಾಗಿದ್ದ ಮನೆಯ ಅಕ್ಕಪಕ್ಕದಲ್ಲಿರುವ 33 ಮನೆಗಳ 153 ಜನರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲದೆ, ಅವರನ್ನು ತಪಾಸಣೆಗೆ ಒಳಪಡಿಸಿ ಅವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಶಿವಮೂಗ್ಗಕ್ಕೆ ಕಳುಹಿಸಲಾಗಿದೆ. ಸದ್ಯ ಎಲ್ಲರನ್ನೂ ಐಸೋಲೇಷನ್​ನಲ್ಲಿ ಇಡಲಾಗಿದೆ.

    ಮುಂಜಾಗ್ರತಾ ಕ್ರಮವಾಗಿ ಎಲ್ಲ ಮುನ್ನೆಚ್ಚರಿಕೆ ಕ್ರಮ ಜರುಗಿಸಲಾಗಿದ್ದು, ಮಹಿಳೆ ವಾಸಿಸುತ್ತಿದ್ದ ಪ್ರದೇಶವನ್ನು ನಿಯಂತ್ರಿತ ಪ್ರದೇಶವಾಗಿ ಘೊಷಿಸಲಾಗಿದೆ. ಸಾರ್ವಜನಿಕರು ಆ ಪ್ರದೇಶದಿಂದ ಹೊರಗೆ ಅಥವಾ ಒಳಗೆ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

    ಬಿಗಿ ಬಂದೋಬಸ್ತ್ : ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ಸಕಲ ವೈದ್ಯಕೀಯ ಸೌಲಭ್ಯಗಳೊಂದಿಗೆ ರಂಗನವಾಡಿ ಗಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ. ಮೂರ್ನಾಲ್ಕು ಆಂಬುಲೆನ್ಸ್​ನಲ್ಲಿ ಅಲ್ಲಿನ ಜನರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈಗಾಗಲೇ ರಂಗನವಾಡಿ ಗಲ್ಲಿಯನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಘೊಷಣೆ ಮಾಡಲಾಗಿದ್ದು, ಈ ಪ್ರದೇಶದ ಸುತ್ತಲೂ ಬ್ಯಾರಿಕೇಡ್ ಹಾಕಲಾಗಿದೆ. ಮತ್ತಷ್ಟು ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.

    ಜನರಿಗೆ ಭಯವೇ ಇಲ್ಲ!: ಗದಗ ನಗರದಲ್ಲಿ ಎರಡು ಪಾಸಿಟಿವ್ ಪ್ರಕರಣಗಳು ಪತ್ತೆಯಾದರೂ ಜನರಿಗೆ ಯಾವುದೇ ಭಯವೇ ಇಲ್ಲದಂತೆ ಸಂಚರಿಸುತ್ತಿದ್ದಾರೆ. ಕಂಟೈನ್ಮೆಂಟ್ ಬಳಿ ಇರುವ ರಸ್ತೆಯಲ್ಲಿಯೇ ಬೈಕ್​ಗಳಲ್ಲಿ ಜನರು ಸಕಾರಣವಿಲ್ಲದೇ ಸುತ್ತಾಡುತ್ತಾರೆ. ಪೊಲೀಸರು, ‘ಕೈಮುಗಿತೀವಿ ಅಡ್ಡಾಡಬೇಡಿ’ ಎಂದು ಮನವಿ ಮಾಡಿದರೂ ಜನರಿಗೆ ಅರಿವು ಮೂಡುತ್ತಿಲ್ಲ. ದಿನೇದಿನೆ ನಗರದಲ್ಲಿ ಸೋಂಕಿತರು ಸಂಖ್ಯೆ ಏರಿಕೆಯಾಗುತ್ತಿದ್ದರೂ ಜನರು ರಸ್ತೆಗಳಿಯುವುದು ನಿಲ್ಲುತ್ತಿಲ್ಲ. ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿದರೂ ಜನರ ಸಂಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ರಸ್ತೆ ಸಂಚಾರ ಬಿಗಿಗೊಳಿಸಿದರೆ ಪೊಲೀಸರ ವಿರುದ್ಧವೇ ತಿರುಗಿ ಬೀಳುವ ಪ್ರಸಂಗಗಳು ನಡೆಯುತ್ತಿವೆ. ಪೊಲೀಸರು ಕರ್ತವ್ಯ ನಿರ್ವಹಿಸಲು ಅಡ್ಡಪಡಿಸುತ್ತಿದ್ದಾರೆ ಎಂದು ಆರೋಪಿಸಿ ಆರೋಗ್ಯ ಇಲಾಖೆಯ ಕೆಲ ಸಿಬ್ಬಂದಿ ಪೊಲೀಸರು ವಿರುದ್ಧವೇ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲಾಯಿತು.

    ಪೊಲೀಸರ ಶ್ರಮಕ್ಕೆ ಬೆಲೆಯಿಲ್ಲವೇ? : ವೈರಸ್ ಹರಡುವಿಕೆ ತಡೆಗಟ್ಟಲು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೂ ಅವರ ವಿರುದ್ಧವೇ ಕೊಂಕು ಮಾತುಗಳನ್ನಾಡುವವರು, ಆರೋಪಗಳನ್ನು ಮಾಡುವವರು ಕಡಿಮೆ ಏನಿಲ್ಲ. ಪೊಲೀಸರು ಲಾಠಿಯಿಂದ ಹೊಡೆಯುತ್ತಾರೆ. ಕಿರುಕುಳ ನೀಡುತ್ತಾರೆ. ಚಿತ್ರಹಿಂಸೆ ನೀಡಿ ಮೋಜು ನೋಡುತ್ತಾರೆ ಎಂದು ಅವರ ವಿರುದ್ಧ ಅಪವಾದಗಳನ್ನು ಮಾಡುತ್ತಾರೆ. ಮನೆ, ಕುಟುಂಬ ಎಲ್ಲರನ್ನೂ ಬಿಟ್ಟು ಡ್ಯೂಟಿ ನಿರ್ವಹಿಸುತ್ತಿದ್ದಾರೆ. ಪೊಲೀಸರು ಇಷ್ಟೆಲ್ಲಾ ಕಷ್ಟಪಡುತ್ತಿದ್ದರೂ ಜನರಿಗೆ ಮಾತ್ರ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ. ಕುಟುಂಬದ ಬಗ್ಗೆ ಕಾಳಜಿ ಇಲ್ಲದಂತೆ ವರ್ತಿಸುತ್ತಿದ್ದಾರೆ. ಪೊಲೀಸ್ ಕೆಲಸಕ್ಕೆ ಅಡ್ಡಿಪಡಿಸುವುದು, ಜಗಳಕ್ಕೆ ನಿಲ್ಲುವವರ ವಿರುದ್ಧ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

    ಸವಾಲಾದ ಸೋಂಕಿನ ಮೂಲ: ಗದಗ ನಗರದ ರಂಗನವಾಡಿ ಗಲ್ಲಿ ನಿವಾಸಿ 80 ವರ್ಷದ ಪಿ 166 ರೋಗಿಗೆ ಸೋಂಕು ಹೇಗೆ ತಗುಲಿತು ಎಂಬುದು ಇನ್ನು ನಿಗೂಢವಾಗಿದೆ. ವೃದ್ಧೆಯ ಸಂಪರ್ಕದಲ್ಲಿದ್ದ ಕುಟುಂಬ ಸದಸ್ಯರು ಸೇರಿ 35 ಜನರನ್ನು ತಪಾಸಣೆ ಮಾಡಲಾಗಿದ್ದು ಅವರ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ವೃದ್ಧೆಗೆ ಸೋಂಕು ಹೇಗೆ ತಗುಲಿತು ಎಂಬುದೇ ಈವರೆಗೂ ಯಕ್ಷಪ್ರಶ್ನೆಯಾಗಿದೆ. ಈ ಕುರಿತು ಆರೋಗ್ಯ ಇಲಾಖೆ ವೃದ್ಧೆಯ ಮನೆಯ ಸುತ್ತಲೂ ವಾಸಿಸುತ್ತಿರುವ ಜನರನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಇದೀಗ ಎರಡನೇ ಪ್ರಕರಣ ಪತ್ತೆಯಾಗಿದ್ದು, ಪಿ 166 ರೋಗಿಯಿಂದ ಪಿ 304 ರೋಗಿಗೆ ಬಂದಿದೆ. ಹೀಗಾಗಿ ಸೋಂಕು ಬಂದಿರುವ ಮೂಲ ಸಿಗದಿರುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.

    ಮೇ 3ರ ವರೆಗೆ ಪ್ರತಿಬಂಧಕಾಜ್ಞೆ: ಗದಗ ಜಿಲ್ಲೆಯಾದ್ಯಂತ ಕೋವಿಡ್ 19 ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ದಂಡ ಪ್ರಕ್ರಿಯಾ ಸಂಹಿತೆ 1973, ಸಾಂಕ್ರಾಮಿಕ ರೋಗ ಕಾಯ್ದೆ 1897, ದಿ ಕರ್ನಾಟಕ ಎಪಿಡೆಮಿಕ್ ಡಿಸೀಸಸ್, ಕೋವಿಡ್ 19, ರೆಗ್ಯುಲೇಷನ್ 2020 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005ರ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಪ್ರತಿಬಂಧಕಾಜ್ಞೆ ಅವಧಿಯನ್ನು ಮೇ 3ರ ವರೆಗೆ ವಿಸ್ತರಿಸಿ ಆದೇಶಿಸಲಾಗಿದೆ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts