More

    ಸ್ಥಾಪನೆ ಸಾಧ್ಯತಾ ವರದಿ ಸಲ್ಲಿಸಲು ಸೂಚನೆ

    ಪರಶುರಾಮ ಕೆರಿ ಹಾವೇರಿ

    ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ಸಹಕಾರ ಇಲಾಖೆಯಿಂದ ಕೊನೆಗೂ ಮನ್ನಣೆ ದೊರಕಿದ್ದು, ಸ್ಥಾಪನೆಗೆ ಸಾಧ್ಯತಾ ವರದಿ ಸಲ್ಲಿಸುವಂತೆ ಅ. 9ರಂದು ಸಹಕಾರ ಇಲಾಖೆ ಉಪನಿಬಂಧಕರು ಕೆಎಂಎಫ್​ಗೆ (ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ) ಸೂಚಿಸಿ ಪತ್ರ ಬರೆದಿದ್ದಾರೆ.

    ಜಿಲ್ಲೆಗೆ ಪ್ರತ್ಯೇಕ ಒಕ್ಕೂಟ ಸ್ಥಾಪನೆಗೆ ಆ. 23ರಂದು ರೈತ ಸೇನಾ ಕರ್ನಾಟಕದ ಜಿಲ್ಲಾಧ್ಯಕ್ಷ ಸಿದ್ಧಲಿಂಗೇಶ ಎಂ. ಪಾಟೀಲ ಅವರು ಕೃಷಿ ಸಚಿವರಿಗೆ ಮನವಿ ಸಲ್ಲಿಸಿದ್ದರು. ಈ ಕುರಿತು ಆ. 31ರಂದು ಕೃಷಿ ಸಚಿವ ಬಿ.ಸಿ. ಪಾಟೀಲರು ಸಹಕಾರ ಸಚಿವರಿಗೆ ಪತ್ರ ಬರೆದಿದ್ದರು. ಇದರನ್ವಯ ಸಹಕಾರ ಇಲಾಖೆ ಸೆ. 16ರಂದು ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಹಕಾರ ಇಲಾಖೆ ಉಪನಿಬಂಧಕರಿಗೆ ಸೂಚಿಸಿದ್ದರು. ಉಪನಿಬಂಧಕರು ಸಾಧ್ಯತಾ ವರದಿ ಸಲ್ಲಿಕೆಗೆ ಕೆಎಂಎಫ್​ಗೆ ಸೂಚಿಸಿದ್ದಾರೆ. ಸದ್ಯ ಹಾವೇರಿ ಜಿಲ್ಲೆಯು ಧಾರವಾಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿದೆ. ಜಿಲ್ಲೆಯಲ್ಲಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದಿಸುತ್ತಿದ್ದು, ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಯಾದರೆ ರೈತರಿಗೆ ಹಾಗೂ ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ಕಳೆದ ಐದಾರು ವರ್ಷಗಳಿಂದ ಜನಪ್ರತಿನಿಧಿಗಳು, ರೈತರು ಬೇಡಿಕೆ ಸಲ್ಲಿಸುತ್ತ ಬಂದಿದ್ದಾರೆ. ಆದರೂ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿರಲಿಲ್ಲ. ಕಳೆದ ಫೆಬ್ರವರಿಯಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪ ಅವರಿಗೂ ಈ ಕುರಿತು ಸಾಕಷ್ಟು ಒತ್ತಡ ತರಲಾಗಿತ್ತು. ಆದರೂ ಅವರು ಅಂದು ಒಕ್ಕೂಟದ ಬದಲು ಮೆಗಾ ಡೇರಿ ಸ್ಥಾಪನೆಯ ಘೊಷಣೆ ಮಾಡಿದ್ದರು.

    ಪ್ರತ್ಯೇಕ ಒಕ್ಕೂಟವೇಕೆ ಬೇಕು: ಧಾರವಾಡ ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರತಿದಿನ 2.30 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದ್ದು, ಇದರಲ್ಲಿ ಹಾವೇರಿ ಜಿಲ್ಲೆಯಿಂದಲೇ 20ಸಾವಿರ ಹಾಲು ಉತ್ಪಾದಕರಿಂದ 1.10ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಕಳೆದ 35 ವರ್ಷಗಳಿಂದಲೂ ಧಾರವಾಡ ಒಕ್ಕೂಟದ ಅಭಿವೃದ್ಧಿಯಲ್ಲಿ ಜಿಲ್ಲೆಯ ಹೈನುಗಾರರ ಪಾತ್ರ ದೊಡ್ಡದಿದೆ. ಒಕ್ಕೂಟಕ್ಕೆ ಜಿಲ್ಲೆಯಿಂದ ಹೆಚ್ಚಿನ ಹಾಲು ಪೂರೈಕೆಯಾಗುತ್ತಿದ್ದರೂ ಸರ್ಕಾರದ ಯೋಜನೆಗಳು, ಸೌಲಭ್ಯಗಳು ನಾಲ್ಕು ಜಿಲ್ಲೆಗಳಿಗೆ ಸಮನಾಗಿ ಹಂಚಿಹೋಗುತ್ತಿದ್ದು, ಇಲ್ಲಿಯ ರೈತರಿಗೆ ಅನ್ಯಾಯವಾಗುತ್ತಿದೆ. ಅಲ್ಲದೆ, ಧಾರವಾಡ ಒಕ್ಕೂಟವು ಭೌಗೋಳಿಕವಾಗಿ ವಿಸ್ತಾರವಾಗಿದ್ದು, ಧಾರವಾಡದಲ್ಲಿರುವ ಸಂಸ್ಕರಣಾ ಘಟಕಕ್ಕೆ ಹಾಲು ಸಾಗಣೆ ವೆಚ್ಚ ಅಧಿಕವಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತಿಲ್ಲ. ಪ್ರತ್ಯೇಕ ಒಕ್ಕೂಟ ರಚನೆಯಿಂದ ಸಾಗಣೆ ವೆಚ್ಚ ಕಡಿಮೆಯಾಗಿ, ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.

    ಮಾರುಕಟ್ಟೆ ಸಮಸ್ಯೆಗೆ ವಿಳಂಬ: ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಕುರಿತು 2014ರಿಂದಲೇ ಕೂಗು ಆರಂಭಗೊಂಡಿದೆ. ಪ್ರತ್ಯೇಕ ಒಕ್ಕೂಟ ರಚನೆಯಾದರೆ ಮಾರುಕಟ್ಟೆ ಸಮಸ್ಯೆ ಎದುರಾಗಬಹುದು ಎಂದು ವಿಳಂಬ ಮಾಡಲಾಗಿತ್ತು. ಈಗಾಗಲೇ ಪ್ರತ್ಯೇಕ ಒಕ್ಕೂಟ ರಚನೆ ಕುರಿತ ಸಾಧ್ಯತಾ ವರದಿಯನ್ನು ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ ನಿವೃತ್ತ ಅಧಿಕಾರಿಗಳು ಸರ್ಕಾರಕ್ಕೆ ನೀಡಿದ್ದಾರೆ. ಈ ವರದಿಯ ಪ್ರಕಾರ ಪ್ರತ್ಯೇಕ ಒಕ್ಕೂಟ ಸ್ಥಾಪನೆ ಅವಶ್ಯವಾಗಿದ್ದು, ಮಾರುಕಟ್ಟೆ ಬಲವರ್ಧನೆಗೆ ಉನ್ನತ ದರ್ಜೆಯ ಹಾಲು ಸಂಸ್ಕರಣಾ ಘಟಕ ಸ್ಥಾಪನೆಗೆ ಸೂಚಿಸಲಾಗಿದೆ.

    ಜಿಲ್ಲೆಯ ರೈತರ ಅನುಕೂಲಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸುವಂತೆ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಇದನ್ನು ಪರಿಗಣಿಸಿ ಸಹಕಾರ ಇಲಾಖೆ ಒಕ್ಕೂಟ ಸ್ಥಾಪನೆ ಕುರಿತು ಸಾಧ್ಯತಾ ವರದಿ ಸಲ್ಲಿಸಲು ಸೂಚಿಸಿರುವುದು ಸಂತಸ ತಂದಿದೆ. ನಮ್ಮ ಮನವಿಗೆ ಸ್ಪಂದಿಸಿರುವ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ. ಸಾಧ್ಯತಾ ವರದಿ ಶೀಘ್ರ ತರಿಸಿಕೊಂಡು, ಒಕ್ಕೂಟ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು ಎಂಬುದು ನಮ್ಮ ಒತ್ತಾಯ.

    | ಸಿದ್ಧಲಿಂಗೇಶ ಎಂ. ಪಾಟೀಲ, ರೈತ ಸೇನಾ ಕರ್ನಾಟಕ ಜಿಲ್ಲಾಧ್ಯಕ್ಷ

    ಪ್ರತ್ಯೇಕ ಒಕ್ಕೂಟ ರಚನೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ಶಾಸಕರು ಶಿಫಾರಸು ಪತ್ರ ಸಲ್ಲಿಸಿದ್ದಾರೆ. ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಇದಕ್ಕೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. ಒಕ್ಕೂಟ ರಚನೆಯಿಂದ ಧಾರವಾಡ ಒಕ್ಕೂಟಕ್ಕೆ ಮಾರಕವಾಗುವುದಿಲ್ಲ. ಬದಲಾಗಿ ಮತ್ತಷ್ಟು ಶಕ್ತಿಯುತವಾಗಿ ಬೆಳೆಯಲು ಅವಕಾಶವಾಗಲಿದೆ. ಈಗಾಗಲೇ ಸಿಎಂಗೆ ಜಿಲ್ಲೆಯ 20 ಸಾವಿರ ಹಾಲು ಉತ್ಪಾದಕರ ಸಹಿ ಸಂಗ್ರಹಿಸಿ ಮನವಿ ಸಲ್ಲಿಸಲಾಗಿದೆ.

    | ಬಸವರಾಜ ಅರಬಗೊಂಡ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts