More

    ಸ್ಥಾಪನೆಯಾಗದ ವಿಕಿರಣ ಸುರಕ್ಷಾ ನಿರ್ದೇಶನಾಲಯ

    ಬಂಗಾರಪೇಟೆ: ಸಾರ್ವಜನಿಕರ ಹಿತಕ್ಕಾಗಿ ರೂಪಿಸುವ ಕಾನೂನುಗಳನ್ನು ಇಲಾಖೆಗಳು ಪಾಲಿಸುತ್ತಿವೆಯೇ ಎಂಬುದನ್ನು ಸರ್ಕಾರ ಪರಿಶೀಲಿಸುತ್ತಿಲ್ಲ ಎಂಬುದಕ್ಕೆ ವಿಕಿರಣ ಸಂಬಂಧಿತ ತಯಾರಿಕೆ, ಸರಬರಾಜು ಮತ್ತು ಬಳಕೆದಾರರ ವಿಚಾರದಲ್ಲಿ ನಿಯಮಗಳು ಪಾಲನೆಯಾಗದಿರುವುದು ಸ್ಪಷ್ಟ ಉದಾಹರಣೆ.

    ವಿಕಿರಣ (ಎಕ್ಸ್-ರೇ)ವನ್ನು ವಿವಿಧ ಕ್ಷೇತ್ರಗಳಲ್ಲಿ ಬಳಕೆ ಮಾಡುತ್ತಿದ್ದರೂ ವೈದ್ಯಕೀಯ ಕ್ಷೇತ್ರದಲ್ಲಿ (ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ರೇಡಿಯೋಗ್ರಫಿ, ಫ್ಲೂರೋಸ್ಕೋಪಿ, ಟೋಮೋಗ್ರಫಿ, ಮಾಮ್ಮೊಗ್ರಫಿ, ಲೇಜರ್ ಥೆರಪಿ, ಡಯಾಥರ್ಮಿ, ಸರ್ಜಿಕಲ್‌ಲೇಜರ್, ಆಪ್ಥಾಲ್ಮಿಕ್ ಮತ್ತು ಪಿಕೆಆರ್ ಲೇಜರ್, ಡೆಂಟಲ್ ಲೇಜರ್, ಕ್ಯಾಬಿನೆಟ್ ಎಕ್ಸ್‌ರೇ)ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ.

    ವಿಕಿರಣದ ಹೆಚ್ಚು ಬಳಕೆಯಿಂದ ಅನುಕೂಲಕ್ಕಿಂತ ಅನಾಹುತವೇ ಜಾಸ್ತಿ. ಹೀಗಾಗಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಟೊಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್ ವಿಕಿರಣ ಬಳಕೆಗೆ ನಿರ್ದಿಷ್ಟ ನಿರ್ಬಂಧ ವಿಧಿಸಿದೆ. ವಿಕಿರಣ ಸಂಬಂಧಿತ ಯಂತ್ರಗಳ ತಯಾರಿಕೆ, ಸರಬರಾಜು ಮತ್ತು ಬಳಕೆದಾರರು ಕಡ್ಡಾಯವಾಗಿ ಆಟೊಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್ (ಎಇಆರ್‌ಬಿ) ಅನುಮತಿ ಪಡೆಯಬೇಕೆಂದು ಎಲ್ಲ ರಾಜ್ಯಗಳ ಅಧೀನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿ ಕ್ರಮಕ್ಕೆ ನಿರ್ದೇಶನ ನೀಡಿದೆ.

    ಎಲ್ಲ ರಾಜ್ಯಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ವಿಕಿರಣ ಸುರಕ್ಷಾ ನಿರ್ದೇಶನಾಲಯ ಸ್ಥಾಪಿಸಬೇಕೆಂದು ಎಇಆರ್‌ಬಿ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದರೂ ಈವರೆಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ವಿಕಿರಣದ ಮೂಲಕ ಪರೀಕ್ಷೆ ಮತ್ತು ಚಿಕಿತ್ಸೆ ಮಾಡುತ್ತಿರುವ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳ್ಯಾವವೂ ಈ ನಿಯಮ ಪಾಲಿಸುತ್ತಿಲ್ಲ.

    ಈ ಬಗ್ಗೆ ಸರ್ಕಾರ, ಸರ್ಕಾರಿ ಅಧಿಕಾರಿಗಳು ಸೇರಿ ಬಹುತೇಕ ವೈದ್ಯಕೀಯ ಸಂಸ್ಥೆಗಳು ಕ್ಯಾರೇ ಎನ್ನುತ್ತಿಲ್ಲ. ವಿಕಿರಣ ಸಂಬಂಧಿತ ಯಂತ್ರಗಳನ್ನು ಕಡ್ಡಾಯವಾಗಿ ಪ್ರತಿ 6 ತಿಂಗಳಿಗೊಮ್ಮೆ ತಪಾಸಣೆ ಮಾಡಿ ನಿಯಮಾನುಸಾರ ಮಾಪನ ಮಾಡಬೇಕು. ಆದರೆ ಮಾಪನ ಸಂಸ್ಥೆಗಳು ಇಡೀ ದೇಶದಲ್ಲಿ ಇರುವುದು 11 ಮಾತ್ರ. ರಾಜ್ಯದಲ್ಲಿ ಒಂದೇ ಒಂದು ಸಂಸ್ಥೆಯೂ ಇಲ್ಲ. ಹೀಗಾಗಿ ಕೇಂದ್ರ ಎಇಆರ್‌ಬಿ ಇಲಾಖೆಯ ಮಾರ್ಗಸೂಚಿ ಪಾಲನೆ ಬಗ್ಗೆಯೇ ಸಂಶಯ ಮೂಡುವಂತಾಗಿದೆ.

    ಸರ್ಕಾರಿ ಆಸ್ಪತ್ರೆಗಳಲ್ಲಿ ಎಕ್ಸ್-ರೇ ತೆಗೆದರೂ ದೃಢೀಕರಿಸಲು ರೇಡಿಯಾಲಜಿಸ್ಟ್ ವೈದ್ಯರ ಕೊರತೆಯಿಂದ ಎಕ್ಸ್-ರೇ ಫೋಟೊವನ್ನು ಸಾರ್ವಜನಿಕರಿಗೆ ನೀಡದೆ ವೈದ್ಯಕೀಯ ಬಳಕೆಗಾಗಿ ವಾಟ್ಸ್‌ಆ್ಯಪ್ ಮೂಲಕ ಸಂಬಂಧಪಟ್ಟ ವೈದ್ಯರಿಗೆ ಮಾತ್ರ ಕಳುಹಿಸಿಕೊಳ್ಳುತ್ತಿದ್ದಾರೆ. ಅಪರಾಧ ಪ್ರಕರಣಗಳಲ್ಲಿ ಎಕ್ಸ್-ರೇ ಪ್ರತಿಯನ್ನು ನ್ಯಾಯಾಲಯಕ್ಕೆ ಕಳುಹಿಸಬೇಕೆಂದು ನ್ಯಾಯಾಲಯದಿಂದ ಸೂಚನೆ ಬಂದಲ್ಲಿ ಮಾತ್ರ ದೃಢೀಕರಿಸುವ ಪರಿಪಾಠ ಇದೆ. ಇದರಿಂದ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ವೈದ್ಯಕೀಯ ಪರೀಕ್ಷೆ ಪಡೆದುಕೊಂಡಿದ್ದರೂ ಅದಕ್ಕೆ ಸಂಬಂಧಿಸಿದಂತೆ ವಿಮಾ ಕಂಪನಿಗಳು ಪರಿಹಾರ ನೀಡದೆ ಅರ್ಜಿ ನಿರಾಕರಿಸುತ್ತವೆ. ಕಾರಣ ಕೇಳಿದರೆ ಅರ್ಜಿದಾರರು ನೀಡಿರುವ ದಾಖಲೆಗಳನ್ನು ಅಧಿಕೃತ ವೈದ್ಯರು ದೃಢೀಕರಿಸಿಲ್ಲ ಎಂದು ಸಬೂಬು ಹೇಳುತ್ತಾರೆ.

    ಮೂಲಸೌಲಭ್ಯಗಳಲ್ಲೂ ಉಲ್ಲಂಘನೆ: ಯಾವುದೇ ವಿಕಿರಣ ಯಂತ್ರ ಅಥವಾ ಚಿಕಿತ್ಸೆ ಮಾಡುವ ಕೊಠಡಿ ವಿಕಿರಣ ನಿರೋಧಕವಾಗಿರಬೇಕು. ಇದಕ್ಕಾಗಿ ಪ್ರತ್ಯೇಕವಾಗಿ ಗೋಡೆ, ನೆಲಹಾಸು ಮತ್ತು ಸೀಲಿಂಗ್‌ಗೆ ವಿಕಿರಣ ನಿರೋಧಕ ಪದರ ಹಾಕಿರಬೇಕು. ಆದರೆ ಬಹುತೇಕ ಕೇಂದ್ರಗಳಲ್ಲಿ ಸಾಮಾನ್ಯ ಕೊಠಡಿಗಳಲ್ಲೇ ಎಕ್ಸ್-ರೇ ಯಂತ್ರ ಅಳವಡಿಸಿ ಪರೀಕ್ಷಿಸಲಾಗುತ್ತಿದೆ. ಇದರಿಂದ ತಾಂತ್ರಿಕ, ವೈದ್ಯ, ರೋಗಿ ಮೇಲೂ ವಿಕಿರಣದ ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಲು ಎಕ್ಸ್-ರೇ ಕೊಠಡಿಯಲ್ಲಿ ಕಾರ್ಯನಿರ್ವಹಿಸುವವರು ಪ್ರತ್ಯೇಕವಾದ ವಸ್ತ್ರ ಹಾಕಿಕೊಳ್ಳಬೇಕೆಂಬ ನಿಯಮವಿದ್ದರೂ ಸಿಬ್ಬಂದಿಗೆ ಅರಿವಿಲ್ಲ.

    ಸಾರ್ವಜನಿಕರ ಮತ್ತು ವೈದ್ಯಕೀಯ ಸಿಬ್ಬಂದಿ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಎಇಆರ್‌ಬಿ ಸಂಸ್ಥೆಯ ಸೂಚನೆಯಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ವಿಕಿರಣ ಸುರಕ್ಷಾ ನಿರ್ದೇಶನಾಲಯ ಸ್ಥಾಪಿಸಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಬಳಕೆ ಮಾಡಲಾಗುತ್ತಿರುವ ವಿಕಿರಣ ಯಂತ್ರ ಮತ್ತು ಚಿಕಿತ್ಸೆ ಕೇಂದ್ರಗಳಲ್ಲಿ ಎಇಆರ್‌ಬಿ ಸೂಚನೆಯಂತೆ ಸೌಲಭ್ಯಗಳಿರುವಂತೆ ಕ್ರಮ ಜರುಗಿಸಬೇಕು, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡುವ ಎಲ್ಲ ಎಕ್ಸ್-ರೇ ಪರೀಕ್ಷೆ ಫಲಿತಾಂಶವನ್ನು ಅಧಿಕೃತ ವೈದ್ಯರಿಂದ ದೃಢೀಕರಿಸಿ ರೋಗಿಗಳಿಗೆ ನೀಡುವ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕಿದೆ.

    ಸರ್ಕಾರಿ ಆಸ್ಪತ್ರೆಯಲ್ಲಿ ಎಕ್ಸ್-ರೇ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರಗಳಿವೆ, ಆದರೆ ರೇಡಿಯಾಲಜಿಸ್ಟ್ ಇಲ್ಲ. ಇಲ್ಲಿ ಎಕ್ಸ್-ರೇ ಯಂತ್ರ ಹಾಕುವುದಕ್ಕೆ ಜಿಲ್ಲಾ ವೈದ್ಯಾಧಿಕಾರಿ ಅನುಮತಿ ನೀಡಿದ್ದಾರೆ. ಇದನ್ನು ಇಲ್ಲಿ ಸ್ಥಾಪಿಸುವುದಕ್ಕಾಗಿ ತಂಡವೊಂದನ್ನು ರಚಿಸಿದ್ದು ಅವರ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸಲಾಗುತ್ತದೆ, ಪ್ರತಿ 6 ತಿಂಗಳಿಗೊಮ್ಮೆ ತಂಡದವರು ಬಂದು ಯಂತ್ರ ಪರಿಶೀಲಿಸಿ ಹೋಗುತ್ತಿದ್ದಾರೆ.
    ಡಾ. ಪುಣ್ಯಮೂರ್ತಿ, ತಾಲೂಕು ವೈದ್ಯಾಧಿಕಾರಿ, ಬಂಗಾರಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts