More

    ಸ್ಥಳೀಯರಿಂದಲೇ ಗೊಬ್ಬರ ತಯಾರಿ

    ಸಂತೋಷ ವೈದ್ಯ ಹುಬ್ಬಳ್ಳಿ

    ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಮಹಾನಗರ ಪಾಲಿಕೆ ಸೃಷ್ಟಿಸಿರುವ ಮೂಲ ಸೌಕರ್ಯ ಬಳಸಿಕೊಂಡು ತ್ಯಾಜ್ಯದಿಂದ ಗೊಬ್ಬರ ತಯಾರಿಸಲು ಖಾಸಗಿ ಕಂಪನಿಗಳು ಹಿಂದೇಟು ಹಾಕಿವೆ. ಪರಿಣಾಮ, ಸ್ಥಳಿಯರಿಂದಲೇ ಗೊಬ್ಬರ ತಯಾರಿಕೆಗೆ ಪಾಲಿಕೆ ಮುಂದಾಗಿದೆ.

    ಚಿಂದಿ ಆಯುವವರನ್ನು ಆಯ್ಕೆ ಮಾಡಿಕೊಂಡು ಧಾರವಾಡದ ಕಾಂಪೋಸ್ಟ್ ಘಟಕದಲ್ಲಿ 10 ದಿನ ಹಿಂದಿನಿಂದಲೇ ಗೊಬ್ಬರ ತಯಾರಿಕೆ ಕೆಲಸ ಆರಂಭಿಸಲಾಗಿದೆ. 40 ಜನ ಚಿಂದಿ ಆಯುವವರಿಗೆ ಹಸಿರು ದಳ ಎಂಬ ಸರ್ಕಾರೇತರ ಸಂಘಟನೆ ಗೊಬ್ಬರ ತಯಾರಿಕೆ ಕುರಿತು ತರಬೇತಿ ನೀಡಿದೆ. ಸೆ. 28ರಿಂದ ಹುಬ್ಬಳ್ಳಿ ಕಾಂಪೋಸ್ಟ್ ಘಟಕದಲ್ಲೂ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ ಆರಂಭಗೊಳ್ಳಲಿದೆ.

    ಸ್ವಚ್ಛ ಭಾರತ ಮಿಷನ್ (ಎಸ್​ಬಿಎಂ) ಅನುದಾನದಡಿ ಹುಬ್ಬಳ್ಳಿಯಲ್ಲಿ 18.51 ಕೋಟಿ ರೂ. ಹಾಗೂ ಧಾರವಾಡದಲ್ಲಿ 12.63 ಕೋ. ವೆಚ್ಚದಲ್ಲಿ ಕಾಂಪೋಸ್ಟ್ ಘಟಕ ಸ್ಥಾಪಿಸಲಾಗಿದೆ. ಹುಬ್ಬಳ್ಳಿ ಕಾಂಪೋಸ್ಟ್ ಘಟಕ 300 ಟನ್ ಹಾಗೂ ಧಾರವಾಡ ಕಾಂಪೋಸ್ಟ್ ಘಟಕ 150 ಟನ್ ಸಾಮರ್ಥ್ಯದ್ದು.

    ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪ್ರತ್ಯೇಕವಾಗಿ ನಿರ್ವಣಗೊಂಡಿರುವ ಕಾಂಪೋಸ್ಟ್ ಘಟಕಗಳಲ್ಲಿ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಮಾದರಿಯ ಬಗ್ಗೆ ಆಸಕ್ತಿಯನ್ನು ಅಭಿವ್ಯಕ್ತಿ (ಇಒಐ-ಎಕ್ಸ್​ಪ್ರೆಶನ್ ಆಫ್ ಇಂಟರೆಸ್ಟ್) ಪಡಿಸುವಂತೆ (ಟೆಂಡರ್) ಪಾಲಿಕೆ ಜನವರಿ ತಿಂಗಳಲ್ಲಿ ಕೋರಿತ್ತು. ಆದರೆ, ಏಕೈಕ ಕಂಪನಿ ಭಾಗವಹಿಸಿತ್ತು.

    ನಿಯಮಗಳಂತೆ ಮೊದಲ ಕರೆಗೆ ಒಬ್ಬರೇ ಬಿಡ್ ಸಲ್ಲಿಸಿದ್ದರೆ ಟೆಂಡರ್ ಮಾನ್ಯ ಮಾಡುವ ಹಾಗಿಲ್ಲ. ಮರು ಟೆಂಡರ್ ಕರೆಯಲೇಬೇಕು. ಈ ನಡುವೆ ಕಾಂಪೋಸ್ಟ್ ಘಟಕದ ಮೂಲ ಸೌಕರ್ಯಗಳನ್ನು ಬಳಸಿಕೊಂಡು ಸ್ಥಳೀಯರಿಂದಲೇ (ಚಿಂದಿ ಆಯುವವರು) ಗೊಬ್ಬರ ತಯಾರಿಕೆ ಮಾಡಲಾಗುತ್ತಿದೆ. ಈ ಕಾರಣಕ್ಕೆ ಕಳೆದ 1 ವಾರದಿಂದ ಪೌರ ಕೌರ್ವಿುಕರು ಮನೆ ಮನೆಯಿಂದ ಹಸಿ ಮತ್ತು ಒಣ ಕಸವನ್ನು ಕಡ್ಡಾಯವಾಗಿ ಬೇರ್ಪಡಿಸಿಕೊಂಡು ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಅವಳಿ ನಗರದಲ್ಲಿ ಆಟೋ ಟಿಪ್ಪರ್ ಮೂಲಕ ಮನೆ ಮನೆಯಿಂದ ಕಸ ಸಂಗ್ರಹಿಸಲಾಗುತ್ತಿದ್ದರೂ ಬಹುತೇಕ ನಿವಾಸಿಗಳು ಹಸಿ-ಒಣ ಕಸವನ್ನು ಪ್ರತ್ಯೇಕಿಸುತ್ತಿರಲಿಲ್ಲ.

    ‘ಸ್ಥಳೀಯವಾಗಿ ಉತ್ಪಾದಿಸುವ ಗೊಬ್ಬರ ತಯಾರಾಗಲು 28 ದಿನಗಳು ಬೇಕು. ಹುಬ್ಬಳ್ಳಿ, ಬೆಳಗಾವಿ, ಶಿರಸಿ ಕಡೆ ರೈತರು ಈಗಾಗಲೇ ವಿಚಾರಣೆ ನಡೆಸಿದ್ದಾರೆ. ಗೊಬ್ಬರದ ಗುಣಮಟ್ಟ ನೋಡಿಕೊಂಡು ಬೆಲೆ ಹಾಗೂ ಖರೀದಿಗೆ ನಿರ್ಧರಿಸಲಿದ್ದಾರೆ. ಸದ್ಯ ಧಾರವಾಡದಲ್ಲಿ ನಿತ್ಯ 60 ಟನ್ ಹಸಿ ಕಸ ಸಿಗುತ್ತಿದೆ’ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಘಟಕಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಬಗ್ಗೆ ಕರೆಯಲಾಗಿದ್ದ ಟೆಂಡರ್​ನಲ್ಲಿ ಒಂದು ಕಂಪನಿ ಮಾತ್ರ ಬಿಡ್ ಸಲ್ಲಿಸಿತ್ತು. ಬೇರೆ ಯಾರೂ ಟೆಂಡರ್ ಹಾಕಿರಲಿಲ್ಲ. ಹಾಗಾಗಿ ಮರು ಟೆಂಡರ್ ಕರೆಯುವುದು ಅನಿವಾರ್ಯವಾಗಿದೆ. ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.
    | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತರು

    ವೈಜ್ಞಾನಿಕ ವಿಲೇವಾರಿ
    ಸ್ಥಳೀಯವಾಗಿ ಗೊಬ್ಬರ ತಯಾರಿಕೆ ಎಷ್ಟರಮಟ್ಟಿಗೆ ಪರಿಣಾಮಕಾರಿ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್​ಜಿಟಿ) ಮಾರ್ಗಸೂಚಿಯಂತೆ ಅವಳಿ ನಗರದಲ್ಲಿ ಈಗಾಗಲೇ ನಿರ್ದಿಷ್ಟ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ, ಮಾರಾಟ ನಿಷೇಧಿಸಲಾಗಿದೆ. ಮುಂದಿನದು ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿಯ ಸರದಿ. ಇದಕ್ಕೆ ಪರಿಣತ ಕಂಪನಿಗಳು ಕೈ ಜೋಡಿಸಬೇಕು. ತ್ಯಾಜ್ಯದಿಂದ ಗೊಬ್ಬರ ಉತ್ಪಾದಿಸುವ ಕಂಪನಿಗಳು ಅವನ್ನು ಮಾರಾಟ ಮಾಡಿ ಆದಾಯ ಗಳಿಸಲಿವೆ. ಈ ಆದಾಯದಲ್ಲಿ ಪಾಲಿಕೆಗೆ ಪಾಲು ಸಿಗಬಹುದೆ? ಅಥವಾ ಮೇಲಾಗಿ ನಿರ್ವಹಣಾ ವೆಚ್ಚ ನೀಡುವ ಮಾದರಿಯನ್ನು ಒಪ್ಪಿಕೊಳ್ಳ ಬೇಕಾಗಬಹುದೆ? ಎಂಬ ಪ್ರಶ್ನೆ ಇದ್ದೇ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts