More

    ಸೌಲಭ್ಯ ಬಳಸಿ ಆರ್ಥಿಕ ಸಬಲತೆ ಸಾಧಿಸಿ

    ಕೋಲಾರ: ಮಹಿಳೆಗೆ ಸಮಾಜದಲ್ಲಿ ಸ್ಥಾನಮಾನ ಹಾಗೂ ಗೌರವದಿಂದ ಬದುಕಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಬಡ ಹೆಣ್ಣು ಮಕ್ಕಳು ಯೋಜನೆ ಬಳಕೆ ಮಾಡಿಕೊಂಡು ಆದಾಯ ತರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ ಶಶಿಕಲಾ ವಿ ತೆಂಗಳಿ ಹೇಳಿದರು.

    ತಾಲೂಕಿನ ಹೊನ್ನೇನಹಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಸೋಮವಾರ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಚೇತನ ಯೋಜನೆಯಡಿ ಫಲಾನುಭವಿಗಳಿಗೆ ಒಂದು ದಿನದ ಉದ್ಯಮ ಶೀಲತಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಸರ್ಕಾರದ ಯೋಜನೆಗಳು ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ತಲುಪಬೇಕು, ಈ ನಿಟ್ಟಿನಲ್ಲಿ ಇಲಾಖೆ ಅತ್ಯಂತ ಕಾಳಜಿಯಿಂದ ಕೆಲಸ ಮಾಡಬೇಕು. ಸರ್ಕಾರದ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಇಚ್ಛಾಶಕ್ತಿ, ಆಸಕ್ತಿ ಮತ್ತು ಆತ್ಮವಿಶ್ವಾಸದಿಂದ ಉದ್ಯಮದಲ್ಲಿ ಅಭಿವೃದ್ಧಿಗೊಂಡು ಇತರರಿಗೆ ಮಾದರಿಯಾಗಿ ಎಂದು ಕರೆ ನೀಡಿದರು.

    ಗೃಹಿಣಿಗೆ ಕುಟುಂಬದ ನಿರ್ವಹಣೆಗೆ ಆದಾಯದ ಅಗತ್ಯವಿದೆ. ಜತೆಗೆ ಆರೋಗ್ಯದ ಕಡೆಯೂ ಗಮನ ಹರಿಸಬೇಕು, ತರಬೇತಿಯಲ್ಲಿ ಲಭ್ಯವಿರುವ ಉದ್ಯೋಗ ಅವಕಾಶ, ಯೋಜನೆ, ಕೌಶಲ, ಹಣಕಾಸು ವ್ಯವಸ್ಥೆ ಕುರಿತು ಮಾಹಿತಿ ಪಡೆದು ಸ್ವಾವಲಂಬಿ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಳ್ಳಬೇಕು ಎಂದರು.

    ಕಾರ್ಯಕ್ರಮಕ್ಕೂ ಮುನ್ನ ನಿಗಮದ ಅಧ್ಯಕ್ಷರು ನಗರದ ವಿವಿಧ ಕಡೆಗಳಲ್ಲಿ ಯೋಜನೆ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಿದರು. ನಂತರ ತಾಲೂಕಿನ ಕಳ್ಳೀಪುರ ಗ್ರಾಮದ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಮತ್ತು ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿ ಶೀಲಾ, ಉಪ ನಿರ್ದೇಶಕಿ ಎಂ.ಜಿ ಪಾಲಿ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ರಮಾಕಾಂತ್.ಬಿ ಯಾದವ್, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯೆ ಮಮತಾ, ತರಬೇತುದಾರರಾದ ದೇವಲಪಲ್ಲಿ ಗಿರೀಶ್, ನಾರಾಯಣರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

    ನಿಗಮದಿಂದ ಎಚ್‌ಐವಿ ಸೋಂಕಿತ ಮಹಿಳೆಯರಿಗೆ ಧನಶ್ರೀ ಯೋಜನೆಯಡಿ ನೇರವಾಗಿ 25 ಸಾವಿರ ರೂ. ಸಾಲ ಮತ್ತು 25 ಸಾವಿರ ರೂ, ಪ್ರೋತ್ಸಾಹಧನ ಒದಗಿಸಲಾಗುತ್ತಿದೆ. ಸಮಾಜದಲ್ಲಿ ಕಟ್ಟಕಡೆಯ ಮಹಿಳೆಗೂ ಸರ್ಕಾರದ ಸವಲತ್ತು ಸಿಗಲು ನಿಗಮದಿಂದ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.
    ಶಶಿಕಲಾ ವಿ ತೆಂಗಳಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts