More

    ಸೌಕರ್ಯ ಕಲ್ಪಿಸಲು ಮನವಿ

    ಸೋಮವಾರಪೇಟೆ: ಪಟ್ಟಣ ಪಂಚಾಯಿತಿಯ 2023-24ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಪಿ.ಕೆ.ಚಂದ್ರು ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.

    ಪಟ್ಟಣದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ಸಲಹೆ ನೀಡಿದರು. ಲಯನ್ಸ್ ಕ್ಲಬ್ ವತಿಯಿಂದ ಕರ್ಕಳ್ಳಿ ಬಾಣೆಯ ರುದ್ರಭೂಮಿಯಲ್ಲಿ ಸಿಲಿಕಾನ್ ಚೇಂಬರ್ ಅಳವಡಿಸಿದ್ದು, ಪಂಚಾಯಿತಿ ವತಿಯಿಂದ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಕ್ಲಬ್ ಅಧ್ಯಕ್ಷ ರೋಹಿತ್ ಮನವಿ ಮಾಡಿದರು. ಪಿ.ಕೆ.ಚಂದ್ರು ಪ್ರತಿಕ್ರಿಯಿಸಿ, ಈಗಾಗಲೇ ಅಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ಸುತ್ತಲೂ ಕಾಂಪೌಂಡ್ ನಿರ್ಮಿಸಿ, ಉತ್ತಮವಾದ ರಸ್ತೆ ಹಾಗೂ ಪಾರ್ಕ್ ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದರು.

    ಪಟ್ಟಣದ ಎಂ.ಜಿ.ರಸ್ತೆ, ತ್ಯಾಗರಾಜ ರಸ್ತೆ ಸೇರಿದಂತೆ ಅನೇಕ ಕಡೆ ಬೀದಿದೀಪ ಅಳವಡಿಕೆಯಾಗಬೇಕಾಗಿದೆ ಎಂದು ಲಯನ್ಸ್ ಕಾರ್ಯದರ್ಶಿ ಕೆ.ಎನ್.ತೇಜಸ್ವಿ ಹೇಳಿದರು. ಗುಣಮಟ್ಟದ ಬೀದಿ ದೀಪ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದರು.

    ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಸುರೇಶ್‌ಶೆಟ್ಟಿ ಮಾತನಾಡಿ, ಆನೆಕೆರೆಗೆ ನಿರ್ಮಿಸಿರುವ ಹಳೇ ಕಾಂಪೌಂಡ್ ಶಿಥಿಲಾವಸ್ಥೆ ತಲುಪಿದೆ. ಕೆರೆಯ ಆವರಣ ಮದ್ಯಪಾನಿಗಳ ಅಡ್ಡೆಯಾಗಿದೆ. ಕಾಂಪೌಂಡ್ ಬದಲಿಗೆ ಮೆಸ್ ಅಳವಡಿಕೆ ಮಾಡಬೇಕು ಎಂದು ಸಲಹೆ ನೀಡಿದರು.

    ಪಂಚಾಯಿತಿ ಮೇಲ್ದರ್ಜೆಗೇರಿಸಿದರೆ ಮಾತ್ರ ಅಭಿವೃದ್ಧಿ ಕಾಣಬಹುದು. ಪಕ್ಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಸೇರಿಸಿಕೊಂಡು ಪುರಸಭೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಡಿ.ಟಿ.ರಾಜೇಶ್ ಒತ್ತಾಯಿಸಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆ ಕಡಿಮೆಯಿದೆ. ಪಕ್ಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಭೂಮಿ ಜಾಸ್ತಿಯಿದೆ. ಒಂದಷ್ಟು ತಾಂತ್ರಿಕ ಸಮಸ್ಯೆಗಳಿವೆ. ಆದರೂ ಶ್ರಮ ಪಡುತ್ತಿದ್ದೇವೆ ಎಂದು ಮುಖ್ಯಾಧಿಕಾರಿ ಹೇಳಿದರು.

    ಪಟ್ಟಣದಲ್ಲಿನ ಕಸ ಸಮಸ್ಯೆಯ ಬಗ್ಗೆ ಎಚ್.ಎ.ನಾಗರಾಜ್ ಗಮನಸೆಳೆದರು. ಪಟ್ಟಣದ ಪ್ರವೇಶದ್ವಾರದಲ್ಲಿ ಸ್ವಾಗತ ಕಮಾನು ಅಳವಡಿಸುವಂತೆ ಅಭಿಷೇಕ್ ಹೇಳಿದರು. ಸಾರ್ವಜನಿಕರ ಸಲಹೆಗಳನ್ನು ಬಜೆಟ್‌ನಲ್ಲಿ ಪರಿಗಣಿಸಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಬಿ.ಸಂಜೀವ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಮತ್ತು ಕೌನ್ಸಿಲರ್‌ಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts