More

    ಸೋಮವಾರ ದಾವಣಗೆರೆ ಬಂದ್ -ಭಾರತೀಯ ರೈತ ಒಕ್ಕೂಟದ ಕರೆ – ಭದ್ರಾ ನೀರಿಗಾಗಿ ಹೋರಾಟ

    ದಾವಣಗೆರೆ: ಜಿಲ್ಲೆಯ ರೈತರ ಬೇಡಿಕೆಯಂತೆ ಭದ್ರಾ ನೀರು ಬಿಡುಗಡೆ ಕುರಿತು ಭಾನುವಾರ ಸಂಜೆಯೊಳಗಾಗಿ ಲಿಖಿತ ಆದೇಶ ಸಿಗದಿದ್ದಲ್ಲಿ 25ರಂದು ದಾವಣಗೆರೆ ಬಂದ್ ನಡೆಸುವುದಾಗಿ ಭಾರತೀಯ ರೈತ ಒಕ್ಕೂಟ ಎಚ್ಚರಿಕೆ ನೀಡಿದೆ.
    ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನೀಡಿದ ಭರವಸೆಯಂತೆ ಎರಡು ದಿನದಲ್ಲಿ ಭದ್ರಾ ಸಮಸ್ಯೆ ಬಗೆಹರಿಯಬೇಕು. ಇಲ್ಲವಾದಲ್ಲಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಬಂದ್ ನಡೆಸಲಾಗುವುದು ಎಂದು ರೈತ ಮುಖಂಡರಾದ ಎಚ್.ಆರ್.ಲಿಂಗರಾಜ್, ಕೊಳೇನಹಳ್ಳಿ ಬಿ.ಎಂ.ಸತೀಶ್, ಬೆಳವನೂರು ನಾಗೇಶ್ವರರಾವ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಬಂದ್‌ಗೆ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ, ಎಲ್ಲ ವರ್ತಕರು, ಜವಳಿ ಅಂಗಡಿಗಳು, ಆಟೋ ಸಂಘದವರು, ಬಸ್ ಮಾಲೀಕರು, ರೈಸ್‌ಮಿಲ್ ಮಾಲೀಕರು, ದಲ್ಲಾಳಿಗಳು, ದಿನಸಿ ಹಾಗೂ ಇತರೆ ವ್ಯಾಪಾರಿಗಳು, ಕನ್ನಡಪರ ಸಂಘಟನೆಗಳು ಬೆಂಬಲ ನೀಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

    ಲಕ್ಷಾಂತರ ಮೌಲ್ಯದ ಇಳುವರಿಗೆ ಧಕ್ಕೆ
    ನಿರಂತರ 100 ದಿನ ಹರಿಸುವುದಾಗಿ ಸರ್ಕಾರ ಆದೇಶಿಸಿದ್ದರಿಂದಲೇ ರೈತರು ಭತ್ತದ ನಾಟಿ ಮಾಡಿದ್ದಾರೆ. 1.40 ಎಕರೆ ಪ್ರದೇಶದಲ್ಲಿ ನಾಟಿಯಾದ ಭತ್ತಕ್ಕೆ ನೀರು ಸಿಗದಿದ್ದರೆ ಲಕ್ಷಾಂತರ ಮೌಲ್ಯದ ಇಳುವರಿ ನಷ್ಟವಾಗಲಿದೆ. ಜಿಲ್ಲಾ ಸಚಿವರು ಈ ಹಿಂದೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತನಾಡಿದ್ದರೂ ಸಮಸ್ಯೆ ಇತ್ಯರ್ಥವಾಗಿಲ್ಲ ಎಂದು ಬಿ.ಎಂ.ಸತೀಶ್ ಹೇಳಿದರು.
    ನಗರದಲ್ಲಿ ಟ್ರಾೃಕ್ಟರ್ ಜಾಥಾ ನಡೆಸಲು ಮುಂದಾದಾಗ ಪೊಲೀಸರು ಹಳ್ಳಿ-ಹಳ್ಳಿಗಳಲ್ಲಿ ರೈತರಿಂದ ಟ್ರ್ಯಾಕ್ಟರ್ ಕುರಿತ ವಿಮೆ ಇತರೆ ದಾಖಲಾತಿಗಳನ್ನು ಕೇಳು ಮೂಲಕ ಅಡ್ಡಿಪಡಿಸಿದ್ದಾರೆ. ಪ್ರತಿಭಟನಾಕಾರರನ್ನು ಬಂಧಿಸಿದರು. ಪೊಲೀಸರನ್ನು ಬಳಸುವ ಮೂಲಕ ಹೋರಾಟ ಹತ್ತಿಕ್ಕಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನೀರಿನ ರಾಜಕಾರಣ
    ಎಚ್.ಆರ್.ಲಿಂಗರಾಜ್ ಮಾತನಾಡಿ ಭದ್ರಾ ನೀರಿನ ವಿಚಾರದಲ್ಲಿ ರಾಜಕಾರಣ ನಡೆಯುತ್ತಿದೆ. ಸಚಿವ ಮಧು ಬಂಗಾರಪ್ಪ ಸಹೋದರಿ ಗೀತಾ ಶಿವರಾಜಕುಮಾರ್ ಅವರನ್ನು ಶಿವಮೊಗ್ಗ ಲೋಕಸಭೆ ಕಣಕ್ಕಿಳಿಸುವ ದೃಷ್ಟಿಯಿಂದ ಶಿವಮೊಗ್ಗ ಜನರನ್ನು ಸಂತೃಪ್ತಿಗೊಳಿಸಲು ಈ ಕ್ರಮ ಅನುಸರಿಸಿದ್ದಾರೆ. ಜಿಲ್ಲೆಯ ಸಚಿವರೂ ಕೂಡ ರೈತರ ಹಿತ ಕಾಯಬೇಕು ಎಂದು ಮನವಿ ಮಾಡಿದರು.
    ಸೆ.18ರ ವರದಿಯಂತೆ ಭದ್ರಾ ಜಲಾಶಯದಲ್ಲಿ 43.381 ಟಿಎಂಸಿ ನೀರಿದೆ. ಇದರಲ್ಲಿ ಬಳಕೆಗೆ ಬಾರದ 13.83, ಕುಡಿವ ನೀರು, ಕೈಗಾರಿಕೆಗಳಿಗೆ ಬೇಕಾಗುವ 6.90, ಆವಿಯಾಗುವ ನೀರಿನ ಪ್ರಮಾಣ 2.16 ಟಿಎಂಸಿ ನೀರಿದೆ. ಎಡ ಹಾಗೂ ಬಲದಂಡೆ ನಾಲೆಗಳಿಗೆ ಈಗ ಒಟ್ಟು 12.08 ಟಿಎಂಸಿ ನೀರು ಬೇಕಿದೆ. ಈ ನೀರು ಕೊಟ್ಟರೂ ಬೇಸಿಗೆಗೆ 8.411 ಟಿಎಂಸಿಯಷ್ಟು ಉಳಿಯಲಿದೆ ಎಂದು ವಿವರಿಸಿದರು. ರೈತರಲ್ಲೇ ಒಡೆದಾಳುವ ನೀತಿಯನ್ನು ಸರ್ಕಾರ ತರಬಾರದು ಎಂದರು.

    ರೈತರ ಜತೆ ಚೆಲ್ಲಾಟ ಒಳ್ಳೆಯದಲ್ಲ
    ರೈತರೊಂದಿಗೆ ಸರ್ಕಾರ ಚೆಲ್ಲಾಟವಾಡಬಾರದು. ಹಾಗೆ ವರ್ತಿಸುವ ಸರ್ಕಾರಗಳೂ ಉಳಿದಿಲ್ಲ ಎಂಬ ಎಚ್ಚರಿಕೆ ಸರ್ಕಾರಕ್ಕಿರಲಿ ಎಂದು ಬೆಳವನೂರು ನಾಗೇಶ್ವರರಾವ್ ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕುಂದುವಾಡದ ಗಣೇಶಪ್ಪ, ಎಚ್.ಎನ್.ಗುರುನಾಥ್, ಕುಂದುವಾಡ ಗಣೇಶಪ್ಪ, ಕಕ್ಕರಗೊಳ್ಳ ಕಲ್ಲಿಂಗಪ್ಪ, ಕೋಲ್ಕುಂಟೆ ಬಸವರಾಜಪ್ಪ, ಶಿರಮಗೊಂಡನಹಳ್ಳಿ ಮಂಜುನಾಥ್, ಕುಂದುವಾಡ ಮಹೇಶಪ್ಪ, ಜಿಮ್ಮಿ ಹನುಮಂತಪ್ಪ, ಪುನೀತ್, ಆನೇಕಲ್ ವಿಜಯಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts