More

    ಸೋಯಾಬೀನ್ ಬೀಜದ ಮೊಳಕೆ ಪ್ರಮಾಣ ಕಡಿಮೆ

    ಹಾವೇರಿ: ರಿಯಾಯಿತಿ ದರದಲ್ಲಿ ರೈತರಿಗೆ ಮುಂಗಾರು ಬಿತ್ತನೆಗೆ ವಿತರಿಸಲು 1,30,214ಕ್ವಿಂಟಾಲ್ ಸೋಯಾಬೀನ್ ಬೀಜವನ್ನು ಈ ವರ್ಷ ಮಧ್ಯಪ್ರದೇಶ ಹಾಗೂ ಆಂಧ್ರಪ್ರದೇಶದಿಂದ ಖರೀದಿಸಿ ರಾಜ್ಯಕ್ಕೆ ತರಲಾಗಿತ್ತು. ಆದರೆ ಮೊಳಕೆ ಪ್ರಮಾಣ ಕಡಿಮೆಯಿರುವ ಕುರಿತು ರೈತರಿಂದ ದೂರುಗಳು ಬಂದಿವೆ. ಹೀಗಾಗಿ ಈ ಬಾರಿ ರೈತರು ಸೋಯಾ ಬದಲು ಪರ್ಯಾಯ ಬೆಳೆಯನ್ನು ಬಿತ್ತನೆ ಮಾಡುವುದು ಉತ್ತಮ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಸಲಹೆ ನೀಡಿದರು.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಅತಿವೃಷ್ಟಿಯಿಂದ ಬೀಜೋತ್ಪಾದನೆಯಲ್ಲಿಯೇ ದೋಷ ಕಂಡುಬಂದಿದೆ. ಅತಿವೃಷ್ಟಿಯ ಕಾರಣದಿಂದ ಕೇಂದ್ರ ಸರ್ಕಾರವೂ ಈ ಸಾರಿ ಸೋಯಾ ಬಿತ್ತನೆ ಬೀಜದ ಮೊಳಕೆ ಪ್ರಮಾಣವನ್ನು ಶೇ. 70ರಿಂದ 65ಕ್ಕೆ ಇಳಿಸಿತ್ತು. ಆದರೂ ರಾಜ್ಯದಲ್ಲಿ ಪೂರೈಕೆಯಾಗಿರುವ ಸೋಯಾ ಬೀಜದ ಮೊಳಕೆ ಪ್ರಮಾಣ ಶೇ. 55ಕ್ಕೆ ಕುಸಿತ ಕಂಡಿದೆ. ಈ ಕುರಿತು ರಾಜ್ಯಾದ್ಯಂತ 9,625ರೈತರಿಂದ ದೂರುಗಳು ಬಂದಿವೆ. ಈ ಕುರಿತು ಅಧಿಕಾರಿಗಳೊಂದಿಗೂ ರ್ಚಚಿಸಿದ್ದೇನೆ. ಈಗ ಮತ್ತೆ ಹೊಸದಾಗಿ ಬೀಜ ಪೂರೈಸಲು ಸಾಧ್ಯವಿಲ್ಲದಿರುವ ಕಾರಣದಿಂದ ರೈತರು ಈ ಬೀಜಗಳನ್ನು ಬಿತ್ತನೆ ಮಾಡಿ ನಷ್ಟ ಅನುಭವಿಸುವ ಬದಲು ಪರ್ಯಾಯ ಬೆಳೆ ಬಿತ್ತನೆ ಮಾಡುವುದು ಸೂಕ್ತವಾಗಿದೆ ಎಂದರು.

    ಸೋಯಾಬೀನ್ ಬೀಜದ ಮೊಳಕೆಯಲ್ಲಿ ವ್ಯತ್ಯಾಸ ಕಂಡುಬಂದಿರುವುದು ಕೇವಲ ರಾಜ್ಯದಲ್ಲಿ ಮಾತ್ರವಲ್ಲ. ದೇಶಾದ್ಯಂತ ಸಮಸ್ಯೆ ಕಾಣಿಸಿದೆ. ರಾಜ್ಯದಲ್ಲಿ ಹಾವೇರಿ, ಬೆಳಗಾವಿ, ಧಾರವಾಡ, ಬೀದರ, ಕಲಬುರ್ಗಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಸೋಯಾಬೀನ್ ಹೆಚ್ಚಾಗಿ ರೈತರು ಬೆಳೆಯುತ್ತಾರೆ ಎಂದರು.

    ಸೋಯಾಬೀನ್ ಬೀಜದ ಸಮಸ್ಯೆ ಕುರಿತು ಮಂಗಳವಾರ(ಜೂ. 9ರಂದು) ಬೆಂಗಳೂರಿನಲ್ಲಿ ಬೀಜ ವಿತರಕರ ಸಭೆಯನ್ನು ಕರೆಯಲಾಗಿದೆ. ಅಲ್ಲದೇ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳೊಂದಿಗೆ ಈ ಸಮಸ್ಯೆಯನ್ನು ರ್ಚಚಿಸಲಾಗಿದೆ. ಅವರೆಲ್ಲರ ಅಭಿಪ್ರಾಯದಂತೆ ರೈತರಿಗೆ ಬೇರೆ ಬೆಳೆಯ ಬಿತ್ತನೆಗೆ ಸಲಹೆ ನೀಡುತ್ತಿದ್ದೇನೆ. ಹೆಚ್ಚಿನ ಬೀಜ ಬಿತ್ತನೆ ಮಾಡಿದರೆ ಹೇಗೆ ಎಂಬ ಕುರಿತು ಇನ್ನೊಮ್ಮೆ ಅಭಿಪ್ರಾಯ ಸಂಗ್ರಹಿಸಲಾಗುವುದು. ರಾಜ್ಯದಲ್ಲಿ ಅತಿಕಡಿಮೆ ಮೊಳಕೆ ಪ್ರಮಾಣವು ಬೀಜ ಪೂರೈಕೆ ಮಾಡಿದ ಎಲ್ಲ ಕಂಪನಿಗಳ ಬೀಜಗಳಲ್ಲಿಯೂ ಕಂಡುಬಂದಿದೆ. ಅದು ಆಯಾ ಜಿಲ್ಲೆಯ ವಾತಾವರಣಕ್ಕೆ ಅನುಗುಣವಾಗಿ ಕಂಡುಬಂದಿದೆ. ಆದರೂ ಬೀಜವನ್ನು ಪ್ರಮಾಣೀಕರಿಸಿದ ಹಾಗೂ ಅದನ್ನು ವಿತರಣೆ ಮಾಡಿದ ಕಂಪನಿಗಳ ಮೇಲೆ ಏನು ಕ್ರಮ ಕೈಗೊಳ್ಳಬೇಕು ಎಂಬ ಕುರಿತು ರ್ಚಚಿಸಿ ತೀರ್ವನಿಸಲಾಗುವುದು. ಕೆಲ ಜಿಲ್ಲೆಗಳಲ್ಲಿ ಈಗಾಗಲೇ ವಿತರಣೆಯಾದ ಬೀಜಗಳನ್ನು ಮರಳಿ ಪಡೆಯಲಾಗುತ್ತಿದೆ. ಕೆಲವೆಡೆ ಬಿತ್ತನೆ ಮಾಡಿ ನಷ್ಟ ಅನುಭವಿಸಿದ ರೈತರಿಗೆ ಕಂಪನಿಯವರು ಬಿತ್ತನೆಯ ವೆಚ್ಚವನ್ನು ಭರಿಸಿದ್ದಾರೆ ಎಂದರು.

    ಮೆಕ್ಕೆಜೋಳ ಮಿತಿ ಏರಿಕೆ: ಕೆಲ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೀಜವನ್ನು ಎಕರೆಗೆ 8ರಿಂದ 10ಕೆಜಿ ಬಿತ್ತನೆ ಮಾಡುತ್ತಾರೆ. ಆದರೆ ನಾವು ಎಕರೆಗೆ 5ಕೆಜಿ ನಿಗದಿಗೊಳಿಸಿದ್ದೇವೆ. ಅದನ್ನು ಪರಿಶೀಲಿಸಿ ಸಡಿಲಗೊಳಿಸಲಾಗಿದೆ. ಜಿಲ್ಲೆಯ ರೈತರಿಗೆ ಈಗ ಎಕರೆಗೆ 5ಕೆಜಿ ಬದಲು 8ಕೆಜಿ ಬೀಜವನ್ನು ವಿತರಿಸುತ್ತಿದ್ದೇವೆ. ರಾಜ್ಯದಲ್ಲಿ ಸೋಯಾಭೀನ್ ಸಮಸ್ಯೆ ಹೊರತುಪಡಿಸಿ ಬೇರೆ ಯಾವ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಸಮಸ್ಯೆಯಿಲ್ಲ ಎಂದು ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts