More

    ಸೋಂಕಿನತ್ತ ನಿಷ್ಕಾಳಜಿ.. ಎಲ್ಲೆಡೆ ಜನಜಂಗುಳಿ…

    ಹೊನ್ನಾವರ: ಲಾಕ್​ಡೌನ್ ಸ್ವಲ್ಪ ಸಡಿಲಿಕೆಯಾದ ದಿನದಿಂದ ಪಟ್ಟಣದ ಬೀದಿಗಳಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ಜನರು ಯಾವುದೇ ಭೀತಿಯಿಲ್ಲದೆ ತಿರುಗಾಡುತ್ತಿದ್ದಾರೆ. ನೆರೆಯ ತಾಲೂಕುಗಳಲ್ಲಿ ಕರೊನಾ ಭೀತಿ ಕಾಡುತ್ತಿರುವಾಗಲೇ ಇಲ್ಲಿ ಪರಸ್ಪರ ಅಂತರ ನಿಯಮವನ್ನು ಗಾಳಿಗೆ ತೂರಿ ಜನರು ವ್ಯಾಪಾರ ವ್ಯವಹಾರದಲ್ಲಿ ತೊಡಗಿರುವುದು ಆತಂಕಕಾರಿಯಾಗಿದೆ.

    ನೆರೆಯ ಭಟ್ಕಳದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಬರೋಬ್ಬರಿ 40ಕ್ಕೆ ಏರಿಕೆಯಾಗಿದೆ. ನೆರೆಯ ಕುಮಟಾ ತಾಲೂಕಿನಲ್ಲಿ ಬುಧವಾರ ಒಬ್ಬರಿಗೆ ಕರೊನಾ ಸೋಂಕು ಇರುವುದು ಪತ್ತೆಯಾಗಿದೆ. ಇದರಿಂದ ಹೊನ್ನಾವರ ತಾಲೂಕಿನ ಜನರು ಮುಂಜಾಗ್ರತಾ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಉಳಿದ ಕಡೆಗಳಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕಿತರು ಹೆಚ್ಚುತ್ತಿದ್ದರೂ ಪಟ್ಟಣದಲ್ಲಿ ವ್ಯವಹಾರಕ್ಕೆ ಬರುವವರಿಗೆ ಭೀತಿ ಇಲ್ಲವಾಗಿದೆ.

    ಲಾಕ್​ಡೌನ್​ನಿಂದ ಕಷ್ಟಪಡುತ್ತಿದ್ದ ಜನರಿಗೆ ಒಂದಷ್ಟು ರಿಯಾಯಿತಿ ನೀಡಿ ಪರಸ್ಪರ ಅಂತರ ಕಾಯ್ದುಕೊಂಡು ಸುರಕ್ಷತಾ ಕ್ರಮಗಳೊಂದಿಗೆ ದೈನಂದಿನ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವಂತೆ ಹೇಳಲಾಗಿದೆ. ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಜನರು ಕಂಡ ಕಂಡಲ್ಲಿ ಗುಂಪು ಗುಂಪಾಗಿ ಸೇರುತ್ತಿದ್ದಾರೆ. ಅಂಗಡಿ ಮುಂಗಟ್ಟುಗಳ ಎದುರು ಹಾಕಿರುವ ಪರಸ್ಪರ ಅಂತರ ಕಾಯ್ದುಕೊಳ್ಳುವ ಕಾಲಮ್ಳು ಖಾಲಿ ಬಿದ್ದಿದ್ದು ಅಂಗಡಿಯ ಮುಂದೆ ಜನರು ಮುಗಿಬೀಳುತ್ತಿದ್ದಾರೆ. ಪಟ್ಟಣ ಪ್ರದೇಶದಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳನ್ನು ತೆರೆಯಬೇಕು. ಮಧ್ಯಾಹ್ನ 1 ಗಂಟೆಗೆ ನಂತರ ಔಷಧ ಅಂಗಡಿ ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ಮುಚ್ಚಬೇಕು ಎಂದು ನಿಯಮ ಹೇರಲಾಗಿದೆ. ಇದರಿಂದ ಜನರು ಇಡೀ ದಿನದ ಕೆಲಸವನ್ನು ಬೆಳಗಿನ ಸಮಯದಲ್ಲಿ ಮುಗಿಸಿಕೊಂಡು ಹೋಗಲು ಪಟ್ಟಣದ ವ್ಯಾಪಾರಿ ಮಳಿಗೆಗಳಿಗೆ ನುಗ್ಗುತ್ತಿದ್ದಾರೆ.

    ವಾಹನ ದಟ್ಟಣೆ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿದಿನ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಾಹನ ದಟ್ಟಣೆಯಾಗುತ್ತಿದೆ. ಬಜಾರ್ ರಸ್ತೆ, ರಥಬೀದಿ, ಮಸೀದ್ ರೋಡ್, ಬಂದರ್ ರಸ್ತೆ… ಹೀಗೆ ಎಲ್ಲ ಕಡೆ ಜನಜಂಗುಳಿ ಕಂಡುಬರುತ್ತಿದೆ. ಪೊಲೀಸರು ಹಾಗೂ ಹೋಮ್ ಗಾರ್ಡ್​ಗಳು ಜನರಿಗೆ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಸುತ್ತಿದ್ದಾರೆ. ಆದರೆ, ಅದನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ. ಪೊಲೀಸ್ ಜೀಪ್ ಸೈರನ್ ಮೊಳಗಿಸುತ್ತಾ ಬರುತ್ತಿದ್ದಂತೆ ಒಂದಿಷ್ಟು ಅಂತರ ಕಾಯ್ದುಕೊಳ್ಳುವ ಜನರು ಜೀಪ್ ಮುಂದೆ ಸಾಗಿದ ಬಳಿಕ ಮೊದಲಿನ ಯಥಾಸ್ಥಿತಿಗೆ ಮರಳುತ್ತಾರೆ. ಪೊಲೀಸರ ಕಣ್ತಪ್ಪಿಸಿಕೊಳ್ಳುವುದಕ್ಕೆ ಮಾತ್ರ ಜನರು ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿರುವಂತೆ ವರ್ತಿಸುತ್ತಿದ್ದಾರೆಯೇ ಹೊರತು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ.

    ಹೊನ್ನಾವರ ಪಟ್ಟಣದಲ್ಲಿ ಜನದಟ್ಟಣೆಯಾಗದಂತೆ ತಡೆಯಲು ನಮ್ಮ ಪೊಲೀಸ್ ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ. ಜನರು ಅರ್ಥ ಮಾಡಿಕೊಂಡು ಕರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ ಅಂತರ ಕಾಯ್ದುಕೊಂಡು ವ್ಯವಹರಿಸಬೇಕು.
    | ವಸಂತ ಆಚಾರಿ, ಹೊನ್ನಾವರ ಸಿಪಿಐ

    ಹೊನ್ನಾವರದಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆವರೆಗೆ ಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ. ಸಂಜೆ ಅಂಗಡಿಗಳೆಲ್ಲ ಮುಚ್ಚುತ್ತವೆ ಎಂದು ಗ್ರಾಹಕರು ಬೆಳಗಿನ ಸಮಯದಲ್ಲಿ ಹೆಚ್ಚಾಗಿ ಖರೀದಿಯಲ್ಲಿ ತೊಡಗುತ್ತಿರುವುದು ಗಮನಕ್ಕೆ ಬಂದಿದೆ. ಪರಸ್ಪರ ಅಂತರ ಕಾಯ್ದುಕೊಳ್ಳದೇ ಜನದಟ್ಟಣೆ ಉಂಟಾದರೆ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜನರಿಗೆ ಎಚ್ಚರಿಕೆ ನೀಡಲಾಗುವುದು.
    | ವಿವೇಕ ಶೇಣ್ವಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts