More

    ಸೋಂಕಿತರ ನೆರವಿಗೆ ನಿಂತ ತೋಂಟದಾರ್ಯ ಮಠ

    ಗದಗ: ಕರೊನಾ ವಿಪತ್ತಿನಿಂದ ಇಡೀ ದೇಶವೇ ನಲಗುತ್ತಿದ್ದು, ಲಾಕ್​ಡೌನ್​ನಿಂದ ಅನೇಕ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಪರದಾಡುವಂಥ ಸ್ಥಿತಿ ನಿರ್ವಣವಾಗಿದೆ. ಈ ನಿಟ್ಟಿನಲ್ಲಿ ತೋಂಟದಾರ್ಯ ಮಠ ಕರೊನಾ ಸಂತ್ರಸ್ತರ ಸೇವೆಗೆ ಕಟಿಬದ್ಧ ವಾಗಿದೆ ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

    ನಗರದ ತೋಂಟದಾರ್ಯಮಠದಲ್ಲಿ ಕರೊನಾ ಸಂತ್ರಸ್ತರಿಗೆ ಹಾಗೂ ಕರೊನಾ ವಾರಿಯರ್ಸ್​ಗಳಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳು ಪ್ರಾಕೃತಿಕ ವಿಕೋಪಗಳು ಎದುರಾದಾಗ ತಕ್ಷಣ ಅಸಹಾಯಕರ ಸೇವೆಗೆ ಸಜ್ಜಾಗುತ್ತಿದ್ದರು. ಅವರ ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಶ್ರೀಮಠ ಕರೊನಾ ಸಂತ್ರಸ್ತರ ಸೇವೆಗೆ ಸರ್ವಸನ್ನದ್ಧವಾಗಿದೆ’ ಎಂದರು.

    ಹಾವೇರಿಯಲ್ಲಿರುವ ತೋಂಟದಾರ್ಯ ವಿದ್ಯಾಪೀಠದ ಸಿಂಧಗಿ ಶಾಂತವೀರೇಶ್ವರ ಮಹಾವಿದ್ಯಾಲಯವನ್ನು ಕೋವಿಡ್ ಕೇರ್ ಸೆಂಟರ್​ನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಡಂಬಳ ಮತ್ತು ಇಂಗಳಳ್ಳಿಯಲ್ಲಿರುವ ತೋಂಟದಾರ್ಯ ಶಾಲೆಯ ಕಟ್ಟಡವನ್ನು ಸಹ ಕರೊನಾ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲು ಜಿಲ್ಲಾಡಳಿತಕ್ಕೆ ನೀಡಲಾಗಿದೆ’ ಎಂದರು.

    ಬಸವಾದಿ ಶರಣರ ದಾಸೋಹ ಸಿದ್ಧಾಂತವನ್ನು ಅಕ್ಷರಶಃ ಜಾರಿಗೆ ತಂದಿರುವ ಪರಂಪರೆ ನಮ್ಮದಾಗಿದೆ. ಯಡೆಯೂರಿನಲ್ಲಿ ತೋಂಟದ ಸಿದ್ಧಲಿಂಗಸ್ವಾಮಿ ಕೈಂಕರ್ಯ ಸೇವಾ ಸಂಘದಿಂದ ನಿತ್ಯ ಸಾವಿರಾರು ಜನರಿಗೆ ಪ್ರಸಾದ ವಿತರಿಸುವ ಕಾರ್ಯ ಅವಿರತವಾಗಿ ನಡೆಯುತ್ತಿದೆ ಎಂದು ಹೇಳಿದರು.

    ಜಿಲ್ಲಾಧಿಕಾರಿ ಸುಂದರೇಶ ಬಾಬು ಮಾತನಾಡಿ, ಕರೊನಾ ನಿಗ್ರಹಿಸಲು ಸರ್ಕಾರ ವಿಧಿಸಿದ ಲಾಕ್​ಡೌನ್​ನಿಂದ ಜನಸಾಮಾನ್ಯರಿಗೆ ಅನೇಕ ಬಗೆಯ ತೊಂದರೆಗಳಾಗಿದ್ದರೂ ಅದು ಅನಿವಾರ್ಯ ಸಂಗತಿ. ಇಂಥ ಕಷ್ಟದ ಸನ್ನಿವೇಶದಲ್ಲಿ ಸರ್ಕಾರವೇ ಎಲ್ಲರ ಆಶೋತ್ತರಗಳನ್ನು ಈಡೇರಿಸುವುದು ಅಸಾಧ್ಯವಾಗಿದೆ. ಮಠ-ಮಾನ್ಯಗಳು, ಸಂಘ-ಸಂಸ್ಥೆಗಳು ಸಹಾಯಹಸ್ತ ಚಾಚುವ ಉದಾರತೆ ತೋರಬೇಕು. ಈ ನಿಟ್ಟಿನಲ್ಲಿ ಶ್ರೀಮಠದ ಕಾರ್ಯ ಶ್ಲಾಘನೀಯವಾಗಿದ್ದು, ಅವರ ಮುಂದಿನ ಎಲ್ಲ ಸೇವಾ ಕೈಂಕರ್ಯಗಳಿಗೆ ಜಿಲ್ಲಾಡಳಿತದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದರು.

    ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಶ್ರೀಮಠ ಕರೊನಾ ಸಂತ್ರಸ್ತರ ನೆರವಿಗೆ ಧಾವಿಸುವ ಮೂಲಕ ತನ್ನ ಸಾತ್ವಿಕ ಪರಂಪರೆಯನ್ನು ಮುಂದುವರಿಸಿದೆ. ಶ್ರೀಮಠ ವರ್ಗ-ವರ್ಣಗಳ ಭೇದಗಳನ್ನು ಮೀರಿದ ಜನಸಾಮಾನ್ಯರ ನೋವಿಗೆ ಸ್ಪಂದಿಸುವ ಧಾರ್ವಿುಕ ಕೇಂದ್ರವಾಗಿದೆ ಎಂದರು.

    ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಸಮಾಜದಲ್ಲಿ ಯಾವುದೇ ರೀತಿಯ ಅನಿರೀಕ್ಷಿತ ಬೆಳವಣೆಗೆಗಳು ಉಂಟಾದರೆ ಗುರುಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡುತ್ತಿದ್ದ ಲಿಂ.ತೋಂಟದ ಶ್ರೀಗಳು ಶ್ರೀಮಠದ ಪೀಠ ಪರಂಪರೆಗೆ ಹೊಸ ಭಾಷ್ಯ ಬರೆದಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಶ್ರೀಮಠವನ್ನು ಮುನ್ನೆಡೆಸುತ್ತಿರುವ ಡಾ.ತೋಂಟದ ಸಿದ್ಧರಾಮ ಶ್ರೀಗಳು ಕರೊನಾ ಸಂತ್ರಸ್ತರ ಸೇವೆಗೆ ಮುಂದಾಗಿರುವುದು ಅಭಿನಂದನೀಯ ಎಂದರು.

    ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಎಂ.ಸಿ ಐಲಿ, ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ಶ್ರೀಮಠದ ವ್ಯವಸ್ಥಾಪಕ ಎಂ.ಎಸ್. ಅಂಗಡಿ, ಜಾಗತಿಕ ಲಿಂಗಾಯತ ಮಹಾ ಸಭಾದ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಚಂದ್ರು ಚವ್ಹಾಣ ಉಪಸ್ಥಿತರಿದ್ದರು.

    ನಿತ್ಯ 500 ಜನರಿಗೆ ಆಹಾರ ಪೊಟ್ಟಣ ವಿತರಣೆ

    ಶ್ರೀಮಠದಿಂದ ನಿತ್ಯ 500 ಜನರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಲು ತಯಾರಿದ್ದು, ಅಗತ್ಯತೆ ಇರುವವರಿಗೆ ಯಾವ ರೀತಿ ಆಹಾರದ ಪೊಟ್ಟಣಗಳನ್ನು ತಲುಪಿಸಬೇಕು ಎನ್ನುವುದನ್ನು ಜಿಲ್ಲಾಡಳಿತ ನಿರ್ದೇಶನ ನೀಡಬೇಕು. ಕರೊನಾದಂತಹ ಭೀಕರ ಸನ್ನಿವೇಶದಲ್ಲಿ ಎಲ್ಲ ಹೊಣೆಗಾರಿಕೆಯನ್ನೂ ಸರ್ಕಾರದ ಮೇಲೆ ಹೊರಿಸಿ ಕೂರದೇ ಸಂಘ-ಸಂಸ್ಥೆಗಳು, ದಾನಿಗಳು ತಮ್ಮ ಕೈಲಾದಷ್ಟು ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

    ದೇಶದಲ್ಲಿ ಕರೊನಾ ಸೋಂಕಿನಿಂದ ತಂದೆ-ತಾಯಿಗಳು ಮೃತರಾಗಿ ನೂರಾರು ಮಕ್ಕಳು ಅನಾಥರಾದ ಹೃದಯ ವಿದ್ರಾವಕ ಪ್ರಕರಣಗಳು ಬೆಳಕಿಗೆ ಬಂದಿದ್ದು, ಅಂಥ ಕೆಲ ಮಕ್ಕಳಿಗೆ ಶ್ರೀಮಠದಿಂದ ಆಶ್ರಯ ನೀಡಲಾಗುವುದು. ಅವರ ಶೈಕ್ಷಣಿಕ ವೆಚ್ಚವನ್ನು ಶ್ರೀಮಠದಿಂದಲೇ ಭರಿಸಲಾಗುವುದು.

    | ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts