More

    ಸೋಂಕಿತರಿಗೆ ಹಾಸಿಗೆ ಒದಗಿಸದಿದ್ದರೆ ಕಠಿಣ ಕ್ರಮ

    ಧಾರವಾಡ: ಸೋಂಕಿನ ತೀವ್ರ ಲಕ್ಷಣಗಳಿರುವ ವ್ಯಕ್ತಿಗಳಿಗೆ ಹಾಸಿಗೆ ಒದಗಿಸುವುದು ಪ್ರಥಮ ಪ್ರಾಶಸ್ಱದ ಕರ್ತವ್ಯ. ಖಾಸಗಿ ಆಸ್ಪತ್ರೆಗಳು ತಾವು ಘೊಷಿಸಿರುವ ಹಾಸಿಗೆಗಳ ಸಂಖ್ಯೆಯನ್ನು ತೀವ್ರ ಲಕ್ಷಣವಿರುವ ರೋಗಿಗಳಿಗೆ ಒದಗಿಸಬೇಕು. ನಿಗದಿತ ಸಂಖ್ಯೆಯ ಹಾಸಿಗೆಗಳನ್ನು ಒದಗಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಖಾಸಗಿ ಆಸ್ಪತ್ರೆಗಳ ಹಾಸಿಗೆಗಳ ಲಭ್ಯತೆಯ ನೇರ ನಿಗಾವಹಿಸಲು ನೇಮಿಸಿರುವ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಸೋಂಕಿನ ತೀವ್ರ ಲಕ್ಷಣಗಳಿರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯಬೇಕು. ಖಾಸಗಿ ಆಸ್ಪತ್ರೆಗಳು ಲಕ್ಷಣ ರಹಿತ ಸೋಂಕಿತರನ್ನು ದಾಖಲಿಸಿಕೊಂಡು ಹಾಸಿಗೆಗಳನ್ನು ಒದಗಿಸಿರುವುದಾಗಿ ಘೊಷಿಸುವಂತಿಲ್ಲ. ಕೋ ಮಾರ್ಬಿಡಿಟಿ ಲಕ್ಷಣಗಳು ಹಾಗೂ ತೀವ್ರತರ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಬೇಕು. ಲಕ್ಷಣ ರಹಿತರು ಮತ್ತು ಸೌಮ್ಯ ಲಕ್ಷಣಗಳಿರುವವರನ್ನು ಕೋವಿಡ್ ಕೇರ್ ಸೆಂಟರ್ ಹಾಗೂ ಹೋಂ ಐಸೋಲೇಷನ್​ಗೆ ಶಿಫಾರಸ್ಸು ಮಾಡಲಾಗುತ್ತಿದೆ ಎಂದರು.

    ಖಾಸಗಿ ಆಸ್ಪತ್ರೆಗಳ ನೋಡಲ್ ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ನಿಯೋಜಿಸಲ್ಪಟ್ಟ ಆಸ್ಪತ್ರೆಯಲ್ಲಿ ಲಭ್ಯವಿರುವ ಹಾಸಿಗೆಗಳಲ್ಲಿ ಶೇ.50ರಷ್ಟು ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಲಭ್ಯವಿರುವ ಆಕ್ಸಿಜನ್, ವೆಂಟಿಲೇಟರ್, ಐಸಿಯುಗಳ ಸಕಾಲಿಕ ಮತ್ತು ವಾಸ್ತವ ಮಾಹಿತಿ ಹೊಂದಿರಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳು ಲಕ್ಷಣ ರಹಿತರು ಅಥವಾ ಸೌಮ್ಯ ಲಕ್ಷಣಗಳಿರುವ ವ್ಯಕ್ತಿಗಳಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅಂತಹ ವ್ಯಕ್ತಿಗಳು ಆಸ್ಪತ್ರೆಯಲ್ಲೇ ಇರಲು ಸ್ವ ಇಚ್ಛೆಯಿಂದ ಬಯಸಿದರೆ, ಕೋವಿಡ್ ಚಿಕಿತ್ಸೆಗೆ ಘೊಷಿಸಿರುವ ಶೇ.50 ಹಾಸಿಗೆಗಳನ್ನು ಹೊರತುಪಡಿಸಿ ಉಳಿದ ಹಾಸಿಗೆಗಳಲ್ಲಿ ಚಿಕಿತ್ಸೆ ನೀಡಬೇಕು ಎಂದರು.

    ಆರೋಗ್ಯ ಇಲಾಖೆ ಮತ್ತು ತಜ್ಞರು ಶಿಫಾರಸು ಮಾಡುವ ಕೋವಿಡ್ ರೋಗಿಗಳಿಗೆ ಅಗತ್ಯ ಚಿಕಿತ್ಸೆಯನ್ನು ಆಸ್ಪತ್ರೆಯಲ್ಲೇ ನೀಡಬೇಕು. ನಿರಾಕರಿಸಿದರೆ ಅಥವಾ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದರೆ ಆಸ್ಪತ್ರೆಗಳ ಮುಖ್ಯಸ್ಥ ಅಥವಾ ಆಡಳಿತ ಮಂಡಳಿ ಮುಖ್ಯಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸಾಂಕ್ರಾಮಿಕ ಸೋಂಕು ನಿವಾರಣೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಎಫ್​ಐಆರ್ ದಾಖಲಿಸಲಾಗುತ್ತದೆ ಎಂದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಇಬ್ರಾಹಿಂ ಮೈಗೂರ, ಡಿಮ್ಹಾನ್ಸ್ ಮುಖ್ಯ ಆಡಳಿತಾಧಿಕಾರಿ ಡಾ. ಷಣ್ಮುಖ, ಡಾ.ಎಸ್.ಎಂ. ಹೊನಕೇರಿ, ಡಾ.ಶಶಿ ಪಾಟೀಲ, ಇತರರು ಇದ್ದರು.

    17 ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಯೋಜನೆ

    ಜಿಲ್ಲೆಯ 17 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕೆಲ ಆಸ್ಪತ್ರೆಯವರು ಸೋಂಕಿತರಿಗೆ ಚಿಕಿತ್ಸೆ ನೀಡದೆ ಕಿಮ್ಸ್​ಗೆ ವರ್ಗಾಯಿಸುತ್ತಿರುವುದು ಕಂಡು ಬರುತ್ತಿದೆ. ಚಿಕಿತ್ಸೆ ನೀಡಲು ನಿರಾಕರಿಸಿದರೆ ಅಥವಾ ರೋಗಿಗಳನ್ನು ನೋಡಲ್ ಅಧಿಕಾರಿಗಳ ಅನುಮತಿ ಪಡೆಯದೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದರೆ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts