More

    ಸೈಕಲ್ ಪಾಥ್‌ಗೆ ಅತಿಕ್ರಮಣ ಕಾಟ

    ಬೆಳಗಾವಿ: ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ, ನಿರ್ಲಕ್ಷೃ ಧೋರಣೆಯಿಂದಾಗಿ ಸ್ಮಾರ್ಟ್‌ಸಿಟಿ ಯೋಜನೆಗಳು ಸಂಪೂರ್ಣವಾಗಿ ಅನುಷ್ಠಾನ ಆಗುತ್ತಿಲ್ಲ. ಅದಕ್ಕೆ ತಾಜಾ ಉಹಾಹರಣೆ ಎಂದರೆ ಸ್ಮಾರ್ಟ್‌ಸಿಟಿಯಿಂದ ನಿರ್ಮಿಸಿರುವ ಸೈಕಲ್ ಪಾಥ್‌ಗಳು.

    ಕೋಟ್ಯಂತರ ರೂ. ವ್ಯಯಿಸಿ ನಗರದಲ್ಲಿ ಸೈಕಲ್ ಪಾಥ್ ನಿರ್ಮಿಸಲಾಗಿದೆ. ಆದರೆ, ಅಧಿಕಾರಿಗಳ ಉದಾಸೀನತೆಯಿಂದಾಗಿ ಸೈಕಲ್ ಪಾಥ್ ಯೋಜನೆ ಉದ್ದೇಶಿತ ದಾರಿ ಹಿಡಿಯುತ್ತಿಲ್ಲ. ಬದಲಾಗಿ ತರಕಾರಿ, ಹಣ್ಣು ಮಾರಾಟ ಮಾರುಕಟ್ಟೆಯಾಗಿ ಮಾರ್ಪಾಡಾಗಿದ್ದರಿಂದ ಸಾರ್ವಜನಿಕರಿಗೆ ನಿತ್ಯ ತೊಂದರೆಯಾಗುತ್ತಿದೆ.

    ಬೀದಿ ಬದಿ ವ್ಯಾಪಾರಿಗಳು ಸೈಕಲ್ ಪಾಥ್‌ನಲ್ಲೇ ತಾತ್ಕಾಲಿಕ ಶೆಡ್ ಹಾಕಿಕೊಂಡು ವ್ಯಾಪಾರ-ವಹಿವಾಟು ನಡೆಸುತ್ತಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜೆಎನ್‌ಎಂಸಿ ರಸ್ತೆ, ಶಿವಬಸವ ನಗರ, ಎಪಿಎಂಸಿ ರಸ್ತೆ, ನೆಹರು ನಗರ, ಅಜಂನಗರ, ವಂಟಮೂರಿ ಕಾಲನಿ ಸೇರಿ ನಗರದ ಹಲವಾರು ಪ್ರದೇಶಗಳಲ್ಲಿ ನಿರ್ಮಿಸಿದ ಸೈಕಲ್ ಪಾಥ್‌ಗಳಲ್ಲಿ ವ್ಯಾಪಾರಸ್ಥರು ಅಂಗಡಿ ಹಾಕಿ ವರ್ಷಗಟ್ಟಲೇ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ. ಸ್ಮಾರ್ಟ್‌ಸಿಟಿ ಯೋಜನೆಗಳು ಜನರಿಗೆ ಅನುಕೂಲ ಆಗಬೇಕು ಹೊರತು ಅನನುಕೂಲ ಆಗಬಾರದು. ಅಧಿಕಾರಿಗಳು ಯೋಜನೆಗಳ ಅನುಷ್ಠಾನದಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು ಎನ್ನುವುದು ಜನರ ಆಗ್ರಹ. ಸ್ಮಾರ್ಟ್‌ಸಿಟಿ ಕಂಪನಿಯರು ಸೈಕಲ್ ಪಾಥ್ ನಿರ್ಮಿಸಿ, ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಿದ್ದಾರೆ. ಆದರೆ, ಪಾಲಿಕೆಯವರು ಯೋಜನೆ ಅನುಷ್ಠಾನಗೊಳಿಸುವುದರಲ್ಲಿ ವಿಳಂಬ ಮಾಡುತ್ತಿದ್ದಾರೆ. ಸೈಕಲ್ ಪಾಥ್‌ಗಳು ಉದ್ದೇಶಿತ ಯೋಜನೆಗೆ ಬಳಕೆಯಾಗುತ್ತಿಲ್ಲ. ಹೀಗಾಗಿ ಕೋಟ್ಯಂತ ರೂ. ವ್ಯಯಿಸಿ ಸೈಕಲ್ ಪಾಥ್ ನಿರ್ಮಿಸಿದ್ದಾದರೂ ಏಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆ ಕ್ರಾಸ್ ಬಳಿಯಿಂದ ಜ್ಯೋತಿ ನಗರದವರೆಗೆ ಫುಟ್‌ಪಾತ್ ಹಾಗೂ ರಸ್ತೆ ಕಾಮಗಾರಿ ಆಗಿಲ್ಲ. ರಸ್ತೆ ಕಾಮಗಾರಿಗಳು ಅರ್ಧ ಆಗಿವೆ. ಎಪಿಎಂಸಿ ಬಸ್ ನಿಲ್ದಾಣ ಪಕ್ಕ ಒಳಚರಂಡಿಗೆ ತಗ್ಗು ಅಗೆದು ಬಿಟ್ಟಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

    ಸೈಕಲ್ ಪಾಥ್‌ನಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು 2-3 ಬಾರಿ ತೆರವುಗೊಳಿಸಲಾಗಿದೆ. ಈಗ ಮತ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿರುವವರನ್ನು ತೆರವುಗೊಳಿಸುತ್ತೇವೆ.
    | ರುದ್ರೇಶ ಘಾಳಿ ಮಹಾನಗರ ಪಾಲಿಕೆ ಆಯುಕ್ತ

    ಸೈಕಲ್ ಪಾಥ್‌ಗಳನ್ನು ಮಹಾನಗರ ಪಾಲಿಕೆಗೆ ಹಂಸ್ತಾಂತರ ಮಾಡಿದ್ದೇವೆ. ಸೈಕಲ್ ಸ್ಟಾೃಂಡ್‌ಗಳ ಕಾಮಗಾರಿಯೂ ಮುಗಿದಿದೆ. ನಗರದ ಎಲ್ಲೆಲ್ಲಿ ಜನಸಂದಣಿ ಇದೆವೋ ಅಲ್ಲಿ ಸೈಕಲ್ ಸ್ಟಾೃಂಡ್‌ಗಳು ನಿರ್ಮಿಸಲಾಗಿದೆ. ಮೈಸೂರು ಮತ್ತು ಬೆಂಗಳೂರು ಮಾದರಿಯಲ್ಲಿ ಸೈಕಲ್ ಫಾತ್ ಮಾಡಲಾಗಿದೆ.
    | ಪ್ರವೀಣ ಬಾಗೇವಾಡಿ ಬೆಳಗಾವಿ ಸ್ಮಾರ್ಟ್‌ಸಿಟಿ ಕಂಪನಿ, ವ್ಯವಸ್ಥಾಪಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts