More

    ಸೇವೆ ಕಾಯಮಾತಿಗೆ ಒತ್ತಾಯ  ಹಾಸ್ಟೆಲ್ ಸಿಬ್ಬಂದಿ ಪ್ರತಿಭಟನೆ 

    ದಾವಣಗೆರೆ:ಹೊರಗುತ್ತಿಗೆ ಆಧಾರಿತ ಹಾಸ್ಟೆಲ್ ಕಾರ್ಮಿಕರ ಸೇವೆ ಕಾಯಮಾತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿಯಡಿ ಹಾಸ್ಟೆಲ್ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಸಮಾಜ ಕಲ್ಯಾಣ, ಬಿಸಿಎಂ, ಪರಿಶಿಷ್ಟ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಿವಿ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಡಿ ರಾಜ್ಯದ ವಿವಿಧ ವಸತಿಶಾಲೆ, ಹಾಸ್ಟೆಲ್‌ಗಳಲ್ಲಿ ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರರು, ಸ್ವಚ್ಛತೆ ಸೇರಿ ಡಿ ದರ್ಜೆ ಸಿಬ್ಬಂದಿ ಅನೇಕ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಸೇವೆ ಕಾಯಂಗೊಳಿಸಬೇಕು ಹಾಗೂ ಶಾಸನಬದ್ಧ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
    ಗುತ್ತಿಗೆ-ಹೊರಗುತ್ತಿಗೆ ಪದ್ಧತಿ ಕೈಬಿಡಬೇಕು. ವಸತಿನಿಲಯಗಳ ಹೊರಗುತ್ತಿಗೆ ಕಾರ್ಮಿಕರಿಗೆ ನೀಡುತ್ತಿರುವ ಮಾಸಿಕ ಕನಿಷ್ಠ ವೇತನವನ್ನು 35,950 ರೂ.ಗೆ ಹೆಚ್ಚಿಸಬೇಕು. ತುಟ್ಟಿಭತ್ಯೆ, ಬೆಲೆ ಏರಿಕೆ, ಹಣದುಬ್ಬರ ಪರಿಗಣಿಸಿ ವೈಜ್ಞಾನಿಕವಾಗಿ ಕನಿಷ್ಠ ವೇತನ ನಿಗದಿ ಮಾಡಬೇಕು.
    ವಾರದ ರಜೆ, ರಾಷ್ಟ್ರೀಯ ಹಬ್ಬ, ಸಾಂದರ್ಭಿಕ ರಜೆಗಳನ್ನು ನೀಡಬೇಕು. ರಜಾ ದಿನಗಳಲ್ಲಿ ದುಡಿಸಿಕೊಂಡಲ್ಲಿ ಕಾರ್ಮಿಕ ಕಾಯ್ದೆಯನ್ವಯ ದುಪ್ಪಟ್ಟು ವೇತನ ನೀಡಬೇಕೆಂಬ ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಚಾರಿಗೊಳಿಸಬೇಕು. ದಿನದ 8 ಗಂಟೆ ಮಾತ್ರ ಕೆಲಸ ಪಡೆಯಬೇಕು. ಹೆಚ್ಚುವರಿ ಅವಧಿಯ ಕೆಲಸಕ್ಕೆ ದುಪ್ಪಟ್ಟು ವೇತನ ನೀಡಬೇಕೆಂಬ ಇಲಾಖೆಯ ಆದೇಶ ಪಾಲನೆಗೆ ಸೂಕ್ತ ನಿರ್ದೇಶನ ನೀಡಬೇಕು.
    ಲಾಕ್‌ಡೌನ್ ಅವಧಿಯ ವೇತನವನ್ನು ತಕ್ಷಣವೇ ಪಾವತಿಸಬೇಕು. ಕಾರ್ಮಿಕರ ಖಾತೆಗಳಿಗೆ ಪ್ರತಿ ತಿಂಗಳು ಮಾಸಿಕ ವೇತನ, ಇಪಿಎಫ್ ಮತ್ತು ಇಎಸ್‌ಐ ವಂತಿಗೆ ಜಮೆ ಆಗಬೇಕು. ವೇತನ ಚೀಟಿ, ಇಎಸ್‌ಐ ಕಾರ್ಡ್‌ಗಳನ್ನು ನೀಡಬೇಕು. ಇದನ್ನು ನೀಡದ ಗುತ್ತಿಗೆ ಏಜೆನ್ಸಿಯವರ ವಿರುದ್ಧ ದೂರು ದಾಖಲಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆ ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.
    ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು, ಮಂಜುಳಮ್ಮ, ಹನುಮಂತಪ್ಪ, ಈಶ್ವರ್ ಹರಿಹರ, ಅಶೋಕ್ ದೇವರಹಳ್ಳಿ, ರಂಗಮ್ಮ ಹೊನ್ನಾಳಿ, ಜ್ಯೋತಿ, ಪ್ರಸನ್ನ, ಸುಮಲತಾ, ರತ್ನಮ್ಮ, ಮಹೇಶ್, ಸರೋಜಮ್ಮ, ಮಂಗಳಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts