More

    ಸೇವೆ ಕಾಯಂಗೆ ತುಮಕೂರಿನಿಂದ ಪಾದಯಾತ್ರೆ 1ಕ್ಕೆ

    ಚಿತ್ರದುರ್ಗ: ಸೇವೆ ಕಾಯಂಗೆ ಆಗ್ರಹಿಸಿ ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎನ್.ಯಶೋಧರ ತಿಳಿಸಿದರು.

    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ. 1ರಂದು ತುಮಕೂರಿನ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದು ಅಲ್ಲಿಂದ 10 ಸಾವಿರ ಅತಿಥಿ ಉಪನ್ಯಾಸಕರು ಬೆಂಗಳೂರಿಗೆ ಪಾದಯಾತ್ರೆ ಹೊರಡಲಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಅಮರಣಾಂತ ಉಪವಾಸ ಹೋರಾಟ ಕೈಗೊಳ್ಳಲಾಗಿದೆ ಎಂದರು.

    ರಾಜ್ಯ ಸರ್ಕಾರ ಡಿ.29ರಂದು ಅತಿಥಿ ಉಪನ್ಯಾಸಕರ ಕುರಿತು 5 ಸಾವಿರ ರೂ. ವೇತನ ಹೆಚ್ಚಳ ಸೇರಿ ತೆಗೆದುಕೊಂಡ ನಿರ್ಧಾರ ಎಲ್ಲವೂ ಅವೈಜ್ಞಾನಿಕ. ಮೂಗಿಗೆ ತುಪ್ಪ ಸವರುವ ಬದಲು ಹಣೆಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ಅಸಮಾಧಾನ ಹೊರಹಾಕಿದರು.

    ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ದೆಹಲಿ ಸರ್ಕಾರ ಅತಿಥಿ ಉಪನ್ಯಾಸಕರ ಕಾಯಂಗೆ ಕೈಗೊಂಡ ನಿದರ್ಶನ ನೀಡಿ ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರು ಈಗ ಸಿಎಂ ಆಗಿದ್ದರೂ ಕಾಯಂಗೊಳಿಸಿ ಭದ್ರತೆ ನೀಡಲು ಕ್ರಮವಹಿಸಿಲ್ಲ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸಿಲ್ಲ. ಹೀಗಾಗಿ ನುಡಿದಂತೆ ನಡೆಯದ ಸರ್ಕಾರವಾಗಿದೆ ಎಂದು ದೂರಿದರು.

    ಎಚ್.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ್ ಸೇರಿ ಇನ್ನಿತರೆ ಸಚಿವರು ನೀಡಿದ್ದ ಭರವಸೆ ಹುಸಿಯಾಗಿದೆ. ಉಮಾದೇವಿ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. 39ನೇ ದಿನಕ್ಕೆ ಧರಣಿ ಕಾಲಿಟ್ಟರೂ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಯಾವುದೇ ಹೋರಾಟಕ್ಕೂ ಸಿದ್ಧರಿದ್ದೇವೆ. ಜೈಲಿಗೆ ಕಳಿಸಿದರೂ ನಿಲ್ಲದು ಎಂದು ಎಚ್ಚರಿಸಿದರು.

    ಉಪಾಧ್ಯಕ್ಷರಾದ ಡಿ.ಎಂ.ಚಂದನಾ, ಕೆ.ಎಸ್.ಶರತ್‌ಬಾಬು, ಪ್ರಧಾನ ಕಾರ್ಯದರ್ಶಿ ವಿ.ಎಸ್.ಮಂಜುನಾಥ್, ಖಜಾಂಚಿ ಜಗದೀಶ ಕೆರೆನಳ್ಳಿ, ನಂದಿನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts