More

    ಸೆಸ್ಕ್ ಕಚೇರಿಗೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ

    ಪಾಂಡವಪುರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಇಲಾಖೆ ಅಧಿಕಾರಿಗಳು ಜೆಡಿಎಸ್ ಪಕ್ಷದ ಏಜೆಂಟರಂತೆ ಕೆಲಸ ನಿರ್ವಹಿಸುತ್ತಿದ್ದು, ಇತರ ಪಕ್ಷದ ರೈತರು ಮತ್ತು ಸಾರ್ವಜನಿಕರ ಕೆಲಸ ಕಾರ್ಯ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸೆಸ್ಕ್ ಕವೇರಿ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.
    ಪಟ್ಟಣದ ಸೆಸ್ಕ್ ಕಾರ್ಯಪಾಲಕರ ಇಂಜಿನಿಯರ್ ಕಚೇರಿ ಮುಂದೆ ಬಿಜೆಪಿ ಮುಖಂಡ ಡಾ.ಇಂದ್ರೇಶ್ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಸೆಸ್ಕ್ ಇಇ ಎಚ್.ಎಸ್.ರಘು, ಎಇಇ ವಿ.ಪುಟ್ಟಸ್ವಾಮಿ ಅವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
    ಸೆಸ್ಕ್ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಹಿರಿತನ ಆಧಾರದ ಮೇಲೆ ಪರಿವರ್ತಕಗಳನ್ನು ವಿತರಿಸದೆ ಜೆಡಿಎಸ್ ಪಕ್ಷದ ನಾಯಕರ ಶಿಫಾರಸಿನಂತೆ ಪರಿವರ್ತಕಗಳು ವಿತರಣೆ ಆಗುತ್ತಿದೆ. ಇದರಿಂದ ಸಾಮಾನ್ಯ ಜನರಿಗೆ ಅನ್ಯಾಯವಾಗುತ್ತಿದೆ. ಪರಿವರ್ತಕಕ್ಕಾಗಿ ಅರ್ಜಿ ನೀಡಿ 2-3 ವರ್ಷ ಕಳೆದರೂ ಕೆಲವರಿಗೆ ಅಳವಡಿಕೆಯಾಗಿಲ್ಲ. ಆದರೆ ಶಾಸಕರ ಬೆಂಬಲಿಗರಿಗೆ ಒಂದು ವಾರದಲ್ಲಿ ಟಿಸಿ ಅಳವಡಿಸಲಾಗುತ್ತಿದೆ ಎಂದು ಆರೋಪಿಸಿದರು.
    ಬಿಜೆಪಿ ಮುಖಂಡ ಡಾ.ಇಂದ್ರೇಶ್ ಮಾತನಾಡಿ, ಸೆಸ್ಕ್ ಕಚೇರಿಯಲ್ಲಿ ಸ್ವೇಚ್ಛಾಚಾರದ ಅಧಿಕಾರ ನಡೆಯುತ್ತಿದೆ. ಸರ್ಕಾರದ ನಿಯಮದಂತೆ ರೈತರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸಚಿವರು ಕರೆ ಮಾಡಿ ಹೇಳಿದರೂ ಕೆಲಸ ಮಾಡಲು ಆಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಸರ್ಕಾರಿ ಅಧಿಕಾರಿಗಳು ಒಂದು ಪಕ್ಷದ ಕೆಲಸಕ್ಕೆ ನಿಷ್ಠೆ ತೋರುತ್ತಿದ್ದಾರೆ ಎಂದು ಕಿಡಿಕಾರಿದರು.
    ಸೆಸ್ಕ್ ಇಇ ಎಚ್.ಎಸ್.ರಘು ದೂರವಾಣಿ ಮೂಲಕ ಮಾತನಾಡಿ, ಕೆಲವು ವಿಚಾರಗಳಲ್ಲಿ ವ್ಯತ್ಯಾಸ ಆಗಿರಬಹುದು. ಮುಂದೆ ಅದನ್ನೆಲ್ಲ ಸರಿಪಡಿಸುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು.

    ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಲ್.ಆನಂದ್, ಕ್ಷೇತ್ರಾಧ್ಯಕ್ಷ ಎಲ್.ಅಶೋಕ್, ಕಾರ್ಯದರ್ಶಿ ನೀಲನಹಳ್ಳಿ ಧನಂಜಯ, ಮುಖಂಡರಾದ ವದೇಸಮುದ್ರ ಸೋಮಶೇಖರ್, ಗಾಣದಹೊಸೂರು ಕೃಷ್ಣಪ್ಪ, ಸೀತಾಪುರ ಕೃಷ್ಣ, ಪುರಸಭೆ ಸದಸ್ಯರಾದ ಹಾರೋಹಳಿ ಶ್ರೀಧರ್‌ಗೌಡ, ಡೇರಿ ರಾಮು, ಈರೇಗೌಡ, ಕಡಬ ಪುಟ್ಟರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts