More

    ಸೆಲ್ಪಿ ವಿತ್ ಜಿಪಿ ನಂತರ ಈಗ ಅಂಗನವಾಡಿ!

    ಹಾವೇರಿ: ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಇಲಾಖೆಯ ಆಡಳಿತ ಸುಧಾರಣೆಗೆ ಜಿಪಂ ಸಿಇಒ ರಮೇಶ ದೇಸಾಯಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದೆ.

    ಸೆಲ್ಪಿ ವಿತ್ ಜಿಪಿ, ಸೆಲ್ಪಿ ವಿತ್ ಅಂಗನವಾಡಿ, ತಿಂಗಳಲ್ಲಿ ಒಂದು ದಿನ ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಒಂದೊಂದಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ.

    ಕಳೆದೊಂದು ತಿಂಗಳಿನಿಂದ ಗ್ರಾಪಂ ಪಿಡಿಒಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಹಾಜರಿರುವಂತೆ ಮಾಡಲು ಆಯಾ ತಾಪಂ ಇಒಗಳ ನೇತೃತ್ವದಲ್ಲಿ ವಾಟ್ಸಪ್ ಗ್ರುಪ್ ರಚಿಸಿ, ಸೆಲ್ಪಿ ವಿತ್ ಜಿಪಿ ಎಂಬ ಕಾರ್ಯಕ್ರಮ ರೂಪಿಸಿದ್ದರು. ಇದು ಪಿಡಿಒಗಳಿಗೆ ಸ್ವಲ್ಪ ಕಿರಿಕಿರಿಯಾಗಿದ್ದರೂ ಪ್ರತಿದಿನ ಸಾರ್ವಜನಿಕರಿಗೆ ಪಿಡಿಒಗಳು ಗ್ರಾಪಂನಲ್ಲಿ ಸಿಗುವಂತೆ ಮಾಡಿತ್ತು. ಇದಕ್ಕೆ ಹಲವಾರು ಗ್ರಾಪಂ, ತಾಪಂ, ಜಿಪಂ ಜನಪ್ರತಿನಿಧಿಗಳು ಪ್ರಶಂಸೆ ವ್ಯಕ್ತಪಡಿಸಿದ್ದರು.

    ಈ ತಿಂಗಳಿನಿಂದ ಸೆಲ್ಪಿ ವಿತ್ ಅಂಗನವಾಡಿ: ಸೆಲ್ಪಿ ವಿತ್ ಜಿಪಿ ಕಾರ್ಯಕ್ರಮಕ್ಕೆ ಸ್ಪಂದನೆ ವ್ಯಕ್ತವಾಗುತ್ತಿದ್ದಂತೆಯೇ ಅಂಗನವಾಡಿ ಕಾರ್ಯಕರ್ತೆಯರು ಸರಿಯಾದ ಸಮಯಕ್ಕೆ ಹಾಜರಾಗಲು, ಅನಧಿಕೃತ ಗೈರು ತಪ್ಪಿಸಲು ಸೆಲ್ಪಿ ವಿತ್ ಅಂಗನವಾಡಿ ಎಂಬ ಕಾರ್ಯಕ್ರಮವನ್ನು ರೂಪಿಸುವಂತೆ ಮಾ. 9ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿದ್ದಾರೆ.

    ಏನಿದು ಸೆಲ್ಪಿ ವಿತ್ ಜಿಪಿ?: ಜಿಲ್ಲೆಯಲ್ಲಿ ಬಹಳ ಗ್ರಾಪಂಗಳಲ್ಲಿ ಪಿಡಿಒಗಳು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುತ್ತಿರಲಿಲ್ಲ. ಅಲ್ಲದೆ, ಜಿಲ್ಲೆಯ 224ಗ್ರಾಪಂಗಳಲ್ಲಿ 30ಕ್ಕೂ ಅಧಿಕ ಗ್ರಾಪಂಗಳಿಗೆ ಇನ್​ಚಾರ್ಜ್ ಮೇಲೆ ಪಿಡಿಒಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಒಂದು ಪಂಚಾಯಿತಿಯವರು ಎಲ್ಲಿದ್ದೀರಿ ಎಂದು ಪ್ರಶ್ನಿಸಿದರೆ, ಇನ್ನೊಂದು ಪಂಚಾಯಿತಿಯ ಹೆಸರು ಹೇಳುತ್ತಿದ್ದರು. ಇದರಿಂದ ಸಾರ್ವಜನಿಕರು, ಗ್ರಾಪಂ ಸದಸ್ಯರು ಪಿಡಿಒಗಳಿಗೆ ವಾರದಲ್ಲಿ ಮೂರು ದಿನ ನಮ್ಮ ಪಂಚಾಯಿತಿ, ಮೂರು ದಿನ ಇನ್ನೊಂದು ಪಂಚಾಯಿತಿಗೆ ನಿಯುಕ್ತಿಗೊಳಿಸಿ ಎಂದು ಸಿಇಒ ಎದುರು ದೂರುತ್ತಿದ್ದರು. ಅಲ್ಲದೆ, ಇನ್ನು ಕೆಲ ಪಂಚಾಯಿತಿಗಳಿಗೆ ಪೂರ್ಣಕಾಲಿಕ ಪಿಡಿಒಗಳಿದ್ದರೂ ಅವರು ಗ್ರಾಪಂ ಬಿಟ್ಟು ತಾಲೂಕು ಕೇಂದ್ರ ಸ್ಥಾನಗಳಲ್ಲಿಯೇ ಕಾಲ ಕಳೆಯುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಇಒ ರಮೇಶ ದೇಸಾಯಿ ಅವರು ಜಿಪಿಎಸ್ ಆಧಾರಿತ ಆಪ್ ಬಳಸಿ ಪ್ರತಿದಿನ ತಾವು ಕೆಲಸ ಮಾಡುವ ಪಂಚಾಯಿತಿ ಕಚೇರಿಯಿಂದಲೇ ಸೆಲ್ಪಿ ಕಳಿಸುವಂತೆ ಪಿಡಿಒಗಳಿಗೆ ಆದೇಶಿಸಿದರು.

    ಅಲ್ಲದೆ, ಆಯಾ ತಾಪಂ ಇಒಗಳು ಪಿಡಿಒಗಳ ವಾಟ್ಸಪ್ ಗ್ರುಪ್ ರಚಿಸಿದರು. ಪ್ರತಿದಿನ ಬೆಳಗ್ಗೆ ಪಂಚಾಯಿತಿಗೆ ಹೋದ ಕೂಡಲೇ ಜಿಪಿಎಸ್ ಆಪ್ ಬಳಸಿ ಸೆಲ್ಪಿ ತೆಗೆದು ಇಒ ರಚಿಸಿದ ಗ್ರುಪ್​ನಲ್ಲಿ ಅಪ್​ಲೋಡ್ ಮಾಡುವಂತೆ ಸೂಚಿಸಲಾಯಿತು. ಸೆಲ್ಪಿ ಫೋಟೋದ ಕೆಳಗೆ ಫೋಟೋ ತೆಗೆದ ದಿನಾಂಕ, ಸಮಯವು ಇಲ್ಲಿ ನಮೂದಾಗುತ್ತದೆ. ಇದರಿಂದ ಪಿಡಿಒಗಳು ಅನಧಿಕೃತವಾಗಿ ಕೇಂದ್ರ ಸ್ಥಾನಕ್ಕೆ ಹೋಗದೇ ಇರುವುದು ತಪ್ಪಿದೆ. ಅಲ್ಲದೆ, ವಿವಿಧ ವಸತಿ ಮನೆಗಳ ಜಿಪಿಎಸ್​ಗೂ ಪಿಡಿಒಗಳೇ ಹೋಗಿ ಅಲ್ಲಿನ ಫೋಟೋವನ್ನು ಗ್ರುಪ್​ಗೆ ಹಾಕಬೇಕು. ಇದರಿಂದಾಗಿ, ಕೆಳಗಿನ ಸಿಬ್ಬಂದಿ ಕಳುಹಿಸಿ ವಸತಿ ಮನೆಗಳ ಜಿಪಿಎಸ್ ಮಾಡುವುದಕ್ಕೂ ಕಡಿವಾಣ ಬಿದ್ದಿದೆ.

    ಈಗ ಸೆಲ್ಪಿ ವಿತ್ ಅಂಗನವಾಡಿ: ಜಿಲ್ಲೆಯ ಬಹಳಷ್ಟು ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರು ಸರಿಯಾದ ಸಮಯಕ್ಕೆ ಕೆಲಸಕ್ಕೆ ಬರುವುದಿಲ್ಲ. ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ. ಅನಧಿಕೃತವಾಗಿ ಗೈರಾಗುತ್ತಾರೆ ಎಂಬ ದೂರುಗಳು ಸಿಇಒಗೆ ಬಂದಿದ್ದವು. ಇದನ್ನು ತಪ್ಪಿಸಲು ಅಂಗನವಾಡಿ ಕಾರ್ಯಕರ್ತೆಯರಿಗೂ ಇದೀಗ ಸೆಲ್ಪಿ ವಿತ್ ಅಂಗನವಾಡಿ ಎಂಬ ಕಾರ್ಯಕ್ರಮ ರೂಪಿಸಲು ಮುಂದಾಗಿದ್ದಾರೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿರುವ ಸಿಇಒ, ಅಂಗನವಾಡಿ ಕಾರ್ಯಕರ್ತೆಯರಿಗೆ ಜಿಪಿಎಸ್ ಆಧಾರಿತ ಕ್ಯಾಮರಾ ಇರುವ ಮೊಬೈಲ್​ನಲ್ಲಿ ಜಿಪಿಎಸ್ ಕ್ಯಾಮರಾ ಆಪ್ ಡೌನ್​ಲೌಡ್ ಮಾಡಿಸಿ ಪ್ರತಿದಿನ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅಂಗನವಾಡಿ ಕೇಂದ್ರದಲ್ಲಿರುವ ಸೆಲ್ಪಿ ತೆಗೆದು ತಮ್ಮ ತಾಲೂಕು ಮಟ್ಟದ ಅಧಿಕಾರಿಗಳ ವಾಟ್ಸಪ್ ಗ್ರುಪ್​ಗೆ ಕಳಿಸುವಂತೆ ನೋಡಿಕೊಳ್ಳಬೇಕು. ಇದರಿಂದ ಸ್ಥಳ ಹಾಗೂ ಸಮಯ ತಿಳಿಯಬಹುದು. ಇದನ್ನು ಪ್ರತಿದಿನ ತಾಲೂಕು ಮಟ್ಟದ ಸಿಡಿಪಿಒಗಳು ಹಾಗೂ ಮೇಲ್ವಿಚಾರಕರು ಕಡ್ಡಾಯವಾಗಿ ಮೇಲ್ವಿಚಾರಣೆ ಮಾಡುವಂತೆ ಸೂಚಿಸಬೇಕು ಎಂದು ತಿಳಿಸಿದ್ದಾರೆ.

    ಇಒಗಳಿಂದ ಗ್ರಾಮ ವಾಸ್ತವ್ಯ: ಸ್ವಚ್ಛ ಭಾರತ್ ಮಿಶನ್, ನರೇಗಾ ಯೋಜನೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪ್ರತಿ ತಾಪಂ ಇಒಗಳು ತಿಂಗಳಲ್ಲಿ ಒಂದು ಗ್ರಾಪಂನಲ್ಲಿ ವಾಸ್ತವ್ಯ ಮಾಡುವಂತೆ ಮಾ. 9ರಂದು ಜಿಲ್ಲೆಯ ಎಲ್ಲ ತಾಲೂಕು ಇಒಗಳಿಗೆ ಸುತ್ತೋಲೆಯನ್ನು ಸಿಇಒ ಹೊರಡಿಸಿದ್ದಾರೆ. ವಾಸ್ತವ್ಯದ ವೇಳೆಯಲ್ಲಿ ಮನೆ ಭೇಟಿ, ಗುಂಪು ಚರ್ಚೆ, ಸಂಪನ್ಮೂಲ ವ್ಯಕ್ತಿಗಳಿಂದ ಅರಿವು ಕಾರ್ಯಕ್ರಮ ಆಯೋಜಿಸಲು ಸೂಚಿಸಿದ್ದಾರೆ. ಈ ವೇಳೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿರುವಂತೆ ತಿಳಿಸಿದ್ದಾರೆ.

    ಜಿಲ್ಲೆಯ ಎಲ್ಲ ಗ್ರಾಪಂ ಪಿಡಿಒಗಳು ಪ್ರತಿದಿನ ಗ್ರಾಪಂಗಳಲ್ಲಿ ಹಾಜರಾಗಿ ತಮ್ಮ ಹಾಜರಾತಿಯನ್ನು ಜಿಪಿಎಸ್ ಆಧಾರಿತ ಕ್ಯಾಮರಾ ಮೂಲಕ ಸೆಲ್ಪಿ ತೆಗೆದು ಕಳುಹಿಸುತ್ತಿದ್ದು, ಇದರಿಂದ ನಿಖರವಾದ ಸ್ಥಳ ಹಾಗೂ ಸಮಯವನ್ನು ತಿಳಿಯಬಹುದಾಗಿದೆ. ಈ ಮೂಲಕ ಗ್ರಾಪಂಗಳಲ್ಲಿ ಆಡಳಿತ ನಿರ್ವಹಣೆಗೆ ಉತ್ತಮ ಪ್ರತಿಕ್ರಿಯೆ ಹಾಗೂ ಸಾರ್ವನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಹೀಗಾಗಿ, ಇದನ್ನು ಅಂಗನವಾಡಿ ಕೇಂದ್ರಗಳಿಗೂ ವಿಸ್ತರಿಸಲಾಗಿದೆ. ತಿಂಗಳಲ್ಲಿ ಒಂದು ದಿನ ತಾಪಂ ಇಒಗಳು ಗ್ರಾಮ ವಾಸ್ತವ್ಯ ಮಾಡಲು ಸೂಚಿಸಲಾಗಿದೆ.
    | ರಮೇಶ ದೇಸಾಯಿ, ಜಿಪಂ ಸಿಇಒ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts